ಧಾರಾವಾಹಿ-ಅಧ್ಯಾಯ –5

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಹೊಸ ತೋಟದ ವರ್ಣನೆ

ಅಧ್ಯಾಯ -6

ತೋಟದ ಮಾಲೀಕರು ಉಡುಗೊರೆಯಾಗಿ ಕೊಟ್ಟ ಕಿತ್ತಳೆ ಏಲಕ್ಕಿ ಕರಿಮೆಣಸು ಕಾಫಿ ಬೀಜ ಎಲ್ಲವನ್ನೂ ತೆಗೆದುಕೊಂಡು ನಾರಾಯಣನ್ ಕೇರಳಕ್ಕೆ ಹಿಂದಿರುಗಿದರು. ಅವರ ಹುಟ್ಟೂರಾದ ಪತ್ತನಮ್ ತಿಟ್ಟದಲ್ಲಿ ಕಿತ್ತಳೆ ಕಾಫಿ ಏಲಕ್ಕಿ ಬೆಳೆಗಳು ಇರಲಿಲ್ಲ.  ಕೆಲಸದವರನ್ನು ಕರೆದು ಎಲ್ಲವನ್ನು ಉಗ್ರಾಣದಲ್ಲಿ ಇಡುವಂತೆ ಹೇಳಿದರು. ಕಲ್ಯಾಣಿಯವರನ್ನು ಕರೆದು ಅವರ ಸಂಬಂಧಿಕರಿಗೆ ಕರ್ನಾಟಕದಿಂದ ತಂದ ಕಿತ್ತಳೆ ಹಣ್ಣುಗಳನ್ನು ಪಾಲು ಮಾಡಿ ಮಕ್ಕಳ ಕೈಯಲ್ಲಿ ಕೊಟ್ಟು ಕಳುಹಿಸಲು ತಿಳಿಸಿದರು. ಪತಿಯ ಅಣತಿಯಂತೆ  ಮಕ್ಕಳ ಕೈಯಲ್ಲಿ ಕೊಟ್ಟು…. “ಕರ್ನಾಟಕದಿಂದ ಅಪ್ಪ ತಂದ ಹಣ್ಣುಗಳು ಇವು ಎಂದು ಪ್ರತ್ಯೇಕವಾಗಿ ಹೇಳಿಯೇ ಕೊಡಬೇಕು ಮಕ್ಕಳೇ”…. ಎಂದು ಹೇಳಿ ಹತ್ತಿರದ ಸಂಬಂಧಿಕರ ಮನೆಗಳಿಗೆಲ್ಲ ಕೊಟ್ಟು ಕಳುಹಿಸಿದರು. ಮಕ್ಕಳಿಗಂತೂ ಕಿತ್ತಳೆ ಹಣ್ಣುಗಳು ತುಂಬಾ ಇಷ್ಟ ಆದವು. ಹಿಂತಿರುಗಿ ಬಂದ ಮೇಲೆ ನಾರಾಯಣನ್ ಅವರ ಬಾಯಲ್ಲಿ ಅಲ್ಲಿನ ತೋಟದ ಹೊಗಳಿಕೆ ತುಂಬಿತ್ತು. ನೆಂಟರು ಪರಿಚಯಸ್ಥರು ಎಲ್ಲರಲ್ಲೂ ತಾವು ನೋಡಿದ ದೃಶ್ಯವನ್ನು ವರ್ಣರಂಜಿತವಾಗಿ ಬಣ್ಣಿಸುತ್ತ ಇದ್ದರು. ನಾರಾಯಣನ್ ಮನಸ್ಸಿನಲ್ಲಿ ಸಕಲೇಶಪುರದ ತೋಟ ಕೊಂಡುಕೊಳ್ಳುವ ಬಯಕೆ ಧೃಢವಾಯಿತು. ಇಲ್ಲಿನ ತನ್ನ ನೂರು ಎಕರೆ ಭೂಮಿಯನ್ನು ಮಾರಿದರೆ ಆ ತೋಟ ಕೊಂಡು ಕೊಳ್ಳುವಷ್ಟು ಹಣ ಖಂಡಿತಾ ಹೊಂದಿಸಬಹುದು ಎಂದು ಮನಸ್ಸಲ್ಲೇ ಲೆಕ್ಕಾಚಾರ ಹಾಕಿದರು. ತಾಯ್ನಾಡನ್ನು ಬಿಟ್ಟು ಕುಟುಂಬ ಸಮೇತ ಅಲ್ಲಿಗೆ ಹೋಗಿ ನೆಲೆಸುವುದು ಎಂದು ಮನದಲ್ಲೇ ತೀರ್ಮಾನಿಸಿದರು. ಆ ತೀರ್ಮಾನವನ್ನು ಆದಷ್ಟು ಬೇಗ ಕುಟುಂಬ ಸದಸ್ಯರ ಮುಂದೆ ಪ್ರಸ್ತಾಪಿಸಲು ಬಯಸಿದರು. ಎಷ್ಟು ಬೇಗ ಸಾಧ್ಯ ಆಗುವುದೋ ಅಷ್ಟು ಬೇಗ ವಿಷಯವನ್ನು ಪ್ರಸ್ತಾಪಿಸುವ ಬಗ್ಗೆ ಯೋಚಿಸಿದರು.

ಅವರಿಗೆ ಮುಖ್ಯವಾಗಿ ಕಲ್ಯಾಣಿಯವರ ಅಭಿಪ್ರಾಯ ತಿಳಿಯಬೇಕಿತ್ತು. ಮಕ್ಕಳನ್ನು ಸುಲಭವಾಗಿ ಒಪ್ಪಿಸಬಹುದು

ಪತ್ನಿ ಒಪ್ಪಿದರೆ ಮಕ್ಕಳನ್ನು ಒಪ್ಪಿಸುವುದು ಕಷ್ಟವೇನಲ್ಲ ಎಂಬ ಅನಿಸಿಕೆ ನಾಣುವಿನದಾಗಿತ್ತು. ಹಾಗೇ ಅಂದು ರಾತ್ರಿ  ಪತ್ನಿಯು ತನ್ನ ನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಿ ಮಲಗುವ ಕೋಣೆಗೆ ಬರುವುದನ್ನೇ ಕಾಯುತ್ತಾ ಕುಳಿತರು.

ಕಲ್ಯಾಣಿಯವರು ಕೋಣೆಗೆ ಬಂದರು. ಪತಿ ಗಹನವಾಗಿ ಏನನ್ನೋ ಯೋಚಿಸುತ್ತಾ ಇರುವಂತೆ ಕಂಡಿತು ಅವರಿಗೆ.

” ಎನೂಂದ್ರೆ ಬಂದಾಗಿನಿಂದ ನಿಮ್ಮನ್ನು ಗಮನಿಸುತ್ತಾ ಇರುವೆ ಖುಷಿಯಾಗಿ ಇದ್ದೀರಿ ಆದರೆ ಏನೋ ಗಹನವಾಗಿ ಯೋಚಿಸುತ್ತಾ ಇರುವಂತೆಯೂ ಕಾಣುತ್ತಿದ್ದೀರಿ. ಹೀಗೆ ಸುಮ್ಮನೆ ಯೋಚಿಸುತ್ತಾ ಇರುವ ಬದಲು ನಿಮ್ಮ ಯೋಚನೆಗೆ ಕಾರಣವೇನು ಅಂತ ಆದರೂ ಹೇಳಬಾರದೇ?”…. ಎಂದು ಅಕ್ಕರೆಯಿಂದ ಕೇಳಿದರು. ಅವರಿಬ್ಬರದೂ ಅನ್ಯೋನ್ಯ ದಾಂಪತ್ಯ ಜೀವನ. ಎಂದೂ ಯಾವ ವಿಷಯಕ್ಕೂ ಜಗಳ ಆಡಿದವರಲ್ಲ. ಎಂತಹ ಗಂಭೀರ ಸಮಸ್ಯೆ ಇದ್ದರೂ ಶಾಂತ ಚಿತ್ತದಿಂದ ಕುಳಿತು ಮಾತನಾಡಿ ಪರಿಹರಿಸಿಕೊಳ್ಳುತ್ತಾ ಇದ್ದರು. ಇಬ್ಬರಲ್ಲೂ ಯಾವುದೇ ಮುಚ್ಚು ಮರೆ ಇರಲಿಲ್ಲ. ನಾರಾಯಣನ್ ಕಲ್ಯಾಣಿಯವರನ್ನು ಮನಸಾರೆ ಮೆಚ್ಚಿ ವಿವಾಹವಾಗಿದ್ದರು. ಕಲ್ಯಾಣಿಯವರೊಂದಿಗೆ ಚರ್ಚಿಸಿಯೇ ಕುಟುಂಬದ ಏನೇ ವಿಷಯಗಳು ಇದ್ದರೂ ತೀರ್ಮಾನ ಕೈಗೊಳ್ಳುತ್ತಾ ಇದ್ದರು ನಾರಾಯಣನ್.  ಈಗಲೂ ಅಷ್ಟೇ ಮನಸ್ಸಿನಲ್ಲಿ ಇರುವ ವಿಷಯವನ್ನು ಹೇಳಿದರೆ ಏನನ್ನುವಳೋ ಎಂಬ ಆತಂಕ ಒಂದು ಕಡೆ ತನ್ನ ತೀರ್ಮಾನವನ್ನು ಹೇಳಿಯೇ ತೀರಬೇಕು ಅನ್ನುವ ಯೋಚನೆಯು ಇನ್ನೊಂದೆಡೆ ನಾಣುವನ್ನು  ಚಿಂತೆಗೀಡು ಮಾಡಿತ್ತು. ಆದರೂ ಹೇಳಿಯೇ ಬಿಡೋಣ ಆದದ್ದು ಆಗಲಿ ಎಂದು ಹೇಳಿದರು….” ಕಲ್ಯಾಣಿ ನಾನು ಹೇಳುವ ವಿಷಯವನ್ನು ಗಮನವಿಟ್ಟು ಕೇಳಿ ನಂತರ ಸರಿಯಾದ ಅಭಿಪ್ರಾಯವನ್ನು ತಿಳಿಸು. ವಿಷಯ ತಿಳಿದ ನಂತರ ನೀನು ಏನು ಹೇಳುವೆಯೋ ಎಂಬ ಜಿಜ್ಞಾಸೆ ನನ್ನ ಮನಸ್ಸನ್ನು ತುಂಬಾ ಕಾಡುತ್ತಿದೆ.”…. ಎಂದು ಹೇಳುತ್ತಾ ಕುತೂಹಲದಿಂದ ಅವರ ಕಡೆ ನೋಡಿದರು ನಾಣು.

ಅದಕ್ಕೆ ಕಲ್ಯಾಣಿ ….”ನೀವು ವಿಷಯ ಹೇಳದೇ ಹೀಗೆ ಕೇಳಿದರೆ ನಾನು ಏನು ಅಂತ ಉತ್ತರ ಕೊಡಲಿ ಮೊದಲು ಹೇಳಿ ನಂತರ ಅಲ್ಲವೇ?”…. ಎಂದು ಪತಿಯ ಕಡೆ ನೋಡಿ ಮುಗುಳು ನಕ್ಕರು.

“ಸಕಲೇಶಪುರದ ಹತ್ತಿರ ಇರುವ ತೋಟ ನೋಡಿ ಬಂದ ಮೇಲೆ ನನ್ನ ಮನದಲ್ಲಿ ಒಂದು ಆಸೆ ಮೂಡಿದೆ ನಾವು ಏಕೆ ಅಲ್ಲಿನ ಕಾಫಿ ತೋಟವನ್ನು ಕೊಂಡು ಕೊಳ್ಳಬಾರದು? ತುಂಬಾ ಚೆನ್ನಾಗಿದೆ ಹಾಗೂ ಸಂಪದ್ಭರಿತವಾಗಿದೆ. “…. ಎಂದು ಹೇಳಿ ಪತ್ನಿಯ ಮುಖ ನೋಡಿದರು. ಅದಕ್ಕೆ ಕಲ್ಯಾಣಿ ನಸು ನಗುತ್ತಾ ನಾನು ಅಂದೇ ಹೇಳಿದೆ… “ಇಲ್ಲಿ ನಮಗೆ ಯಾವುದರ ಕೊರತೆಯೂ ಇಲ್ಲ ಇಲ್ಲಿಯೇ ನಾವು ಸಂತೋಷದಲ್ಲಿ ಬದುಕುತ್ತಾ ಇದ್ದೇವೆ. ಇನ್ನೂ ನಮಗೇಕೆ ಹೆಚ್ಚುವರಿ ಆಸ್ತಿ? ಅದೂ ಅಲ್ಲದೆ ಅಲ್ಲಿ ತೋಟವನ್ನು ನೋಡಿ ಕೊಳ್ಳುವವರು ಯಾರು? ಅಷ್ಟು ದೂರ ಇರುವ ಊರಲ್ಲಿ ನಮಗೇಕೆ ತೋಟ? ಬೇಕೆನಿಸಿದರೆ ಇಲ್ಲಿಯೇ ಹತ್ತಿರದಲ್ಲಿ ಕೊಂಡು ಕೊಂಡರೆ ಆಗದೇ? “….ಎಂದು ಕೇಳಿದರು.

ಅದಕ್ಕೆ ದೀರ್ಘವಾಗಿ ಕಲ್ಯಾಣಿಯನ್ನೇ ನೋಡುತ್ತಾ ನಾಣು ಹೇಳಿದರು ” ನಾವು ಕುಟುಂಬ ಸಮೇತ ಅಲ್ಲಿ ಹೋಗಿ ಇದ್ದರೆ ಆಗದೇ? ಹೇಗೂ ನಾವೇನು ಅಲ್ಲಿ ಒಂಟಿ ಅಲ್ಲ ನಮ್ಮ ಸಂಬಂಧಿಕರು ಕೂಡಾ ಅಲ್ಲಿ ಇದ್ದಾರೆ. ಇಲ್ಲಿನ ನಮ್ಮ ಆಸ್ತಿ ಮಾರಿ ಅಲ್ಲಿ ಹೋಗಿ ನಾವು ವಾಸ ಮಾಡೋಣ”….

ಎಂದರು. ತಾವು ಕನಸು ಮನಸಿನಲ್ಲೂ ಯೋಚಿಸದೇ ಇರುವ ವಿಷಯವನ್ನು ಪತಿ ಹೇಳಿದ್ದು ಕೇಳಿ ದಂಗಾಗಿ ಕಲ್ಯಾಣಿ ಪತಿಯನ್ನೇ ನೋಡುತ್ತಾ ಮಾತು ಬಾರದೇ ಕೆಲವು ಕ್ಷಣ ಹಾಗೇ ಆವಕ್ಕಾಗಿ ನಿಂತುಬಿಟ್ಟರು. ಲಾಂದ್ರದ ಬೆಳಕಲ್ಲಿ ಕೂಡಾ ಪತ್ನಿಯ ಮುಖದಲ್ಲಿ ಆಗುವ ಅಚ್ಚರಿಯ ಭಾವವು ನಾಣುವಿಗೆ ಕಾಣದೇ ಇರಲಿಲ್ಲ. ಆದರೆ  ಅವರ ಮನಸ್ಸು ಪೂರ್ತಿ ತೋಟ ಕೊಂಡುಕೊಳ್ಳುವ ಮಹದಾಸೆ ತುಂಬಿತ್ತು. ವಿವರವಾಗಿ ಹೇಳಿ ಎಲ್ಲವನ್ನೂ ಪತ್ನಿಗೆ ಅರ್ಥ ಮಾಡಿಸಿ ಕೊಡಬೇಕು ಅನ್ನುವುದು ನಾಣುವಿಗೆ ಮನವರಿಕೆ ಆಯಿತು. ದಿಢೀರನೆ ವಿಷಯ ಹೇಳಿದ್ದರಿಂದ ಹೀಗೆ ಅನಿಸಿದೆ ಅವಳಿಗೆ ನಿಧಾನವಾಗಿ ಮನದಟ್ಟು ಆಗಬಹುದು ಅಂದುಕೊಂಡು ಅಲ್ಲಿನ ಪರಿಸರ ಹಾಗೂ ತೋಟದ  ಸುತ್ತಲಿನ ವಾತಾವರಣ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿ ಅರ್ಥ ಮಾಡಿಸಲು ಮುಂದಾದರು ನಾರಾಯಣನ್. 

” ಹಾಗಲ್ಲ ಕಲ್ಯಾಣಿ ಇಲ್ಲಿ ನಮಗೆ ಇರುವುದು ನೂರು ಎಕರೆ ಜಮೀನು ಆದರೆ ನಾನು ಕೊಂಡು ಕೊಳ್ಳಬೇಕು ಎಂದು ಇರುವುದು ಸಾವಿರ ಎಕರೆ ಇದರ ಹತ್ತುಪಟ್ಟು ಹೆಚ್ಚು.

ಮಕ್ಕಳಿಗೂ ನಾವು ಹೆಚ್ಚು ಆಸ್ತಿ ಮಾಡಿ ಇಟ್ಟ ಹಾಗೆ ಆಗುತ್ತದೆ. ಅವರಿಗೆ ಪಿತ್ರಾರ್ಜಿತ ಆಸ್ತಿ ಬೇಕಾದಷ್ಟು ಆಯಿತು. ಮುಂದಿನ ದಿನಗಳಲ್ಲಿ ತೋಟದ ವರಮಾನದಿಂದ ನಾವೆಲ್ಲರೂ ಸಂತೋಷವಾಗಿ ಕಳೆಯಬಹುದು. ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಬಂಧ ನೋಡಿ ಮದುವೆಯೂ ಮಾಡಬಹುದು. ನಮಗೆ ವಯಸ್ಸಾದ ನಂತರ ಗಂಡು ಮಕ್ಕಳು ತೋಟವನ್ನು ನೋಡಿಕೊಳ್ಳುತ್ತಾರೆ. ಇಳಿ ವಯಸ್ಸಿನಲ್ಲಿ ನಾವು ನೆಮ್ಮದಿಯ ಜೀವನ ಸಾಗಿಸಬಹುದು.

ಆ ತೋಟ ಕೂಡಾ ಒಳ್ಳೆಯ ಇಳುವರಿ ಕೊಡುವಂತದ್ದು.

ಅಲ್ಲಿನ ವಾಣಿಜ್ಯ ಬೆಳೆಗಳಿಂದ  ಉತ್ತಮ ಆದಾಯ ಸಿಗುತ್ತದೆ. ಬೆಲೆಬಾಳುವ ಮರಗಳು ಇವೆ. ನಮ್ಮ ಈಗಿನ ವರಮಾನಕ್ಕಿಂತ ಹೆಚ್ಚು ಗಳಿಸಬಹುದು.  ನಾವು ಐಷಾರಾಮದ ಜೀವನ ಸಾಗಿಸಬಹುದು. ತೋಟದ ನಡುವೆ ಇಂಗ್ಲಿಷರು ಕಟ್ಟಿದ ಎಲ್ಲಾ ಸೌಕರ್ಯಗಳು ಇರುವ ದೊಡ್ಡ ಬಂಗಲೆ ವಾಸಕ್ಕೆ ಯೋಗ್ಯವಾಗಿದೆ. ಹೊರಗೆ ಕಾಫಿ ಪಲ್ಪರ್ ಮಾಡಿ ಒಣಗಿಸಲು ದೊಡ್ಡ ಕಾಫಿ ಕಣಗಳು ಇವೆ. ಏಲಕ್ಕಿ ಒಣಗಿಸಲು ದೊಡ್ಡ  ಕೋಣೆಗಳು ಇವೆ. ಎಲ್ಲಾ ಥರದ ಆಧುನಿಕ ಸೌಲಭ್ಯಗಳನ್ನು  ಒಳಗೊಂಡ ಸುಸಜ್ಜಿತ ಮನೆ ಅದು. ಜೊತೆಗೆ ಅಲ್ಲಿನ ಪ್ರಕೃತಿ ಸೌದರ್ಯವೂ ಮನ ಸೂರೆಗೊಳ್ಳುವಂತೆ ಇದೆ. ಅಲ್ಲಿ ನಿನಗೆ ಮತ್ತು ಮಕ್ಕಳಿಗೆ ಯಾವುದೇ ತೊಂದರೆಯೂ ಆಗದು. ತೋಟದಲ್ಲಿ ಹಾಗೂ ಮನೆಯಲ್ಲಿ ಕೆಲಸ ಮಾಡಲು ಬೇಕಾದಷ್ಟು ಕೆಲಸಗಾರರು ಇದ್ದಾರೆ.  ರೈಲ್ವೆ ಕೆಲಸಗಳು ಪ್ರಾರಂಭ ಆಗುತ್ತಾ ಇರುವುದರಿಂದ ಮುಂದೆ ನಿನ್ನ ತವರಿಗೆ ಬಂದು ಹೋಗಲು ಹಾಗೂ ಇಲ್ಲಿ  ನೆಂಟರಿಷ್ಟರನ್ನು ಕಂಡು ನಿನಗೆ ಇಷ್ಟ ಇರುವಷ್ಟು ದಿನ ಇದ್ದು ಹಿಂದಿರುಗಲು ಮುಂದಿನ ದಿನಗಳಲ್ಲಿ ಅವಕಾಶವಿದೆ. ಮಕ್ಕಳಿಗೆ ರಜೆ ಅವಧಿ ಕಳೆಯಲು ಇಲ್ಲಿಗೆ ಬರಬಹುದು. ನಾನು ಹೇಳುತ್ತಿರುವ ವಿಷಯವನ್ನು ಯೋಚಿಸಿ ನೋಡಿ ಆದಷ್ಟು ಬೇಗ ನಿನ್ನ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸು. ಹೆಚ್ಚು ತಡ ಮಾಡಿದರೆ ನಮಗೆ ನಂತರ ಇಂತಹ ಒಳ್ಳೆಯ ಅವಕಾಶ ಸಿಗದು ಆ ತೋಟದ ಮಾಲೀಕರು ಆದಷ್ಟು ಬೇಗ  ತೋಟ ಮಾರುವ ತರಾತುರಿಯಲ್ಲಿ ಇದ್ದಾರೆ. ಎಂದು ಹೇಳಿ ಮಲಗಿ ನಿದ್ರಿಸಿದರು. ಸ್ವಲ್ಪ ಹೊತ್ತಿಗೆಲ್ಲ ಅವರ ಗೊರಕೆಯ ಸದ್ದು ಕೇಳತೊಡಗಿತು.


ರುಕ್ಮಿಣಿ ನಾಯರ್

ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು

Leave a Reply

Back To Top