ಇಂದಿರಾ ಮೋಟೆಬೆನ್ನೂರ-ಸಂದೇಶ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಸಂದೇಶ

ಸೂಸಿ ಸುಳಿಗಾಳಿ
ಸುತ್ತಿ ಸುಳಿದು ಬಂದು
ತಂಗಾಳಿ ಮೆಲ್ಲನುಸಿರಿತು
ನೀನಿಲ್ಲೇ ಇರುವೆಯೆಂದು

ಬೀಸಿ ಬಳಿ ಸಾರಿ
ಬಂದ ಹೂ ಗಂಧ
ನುಡಿಯಿತು
ನೀನಿಲ್ಲೇ ಇರುವೆಯೆಂದು..

ಹಕ್ಕಿ ಹಾಡು
ಚಿಗುರು ಪರಿಮಳ
ಮೊಳಕೆ ಪ್ರೀತಿ
ಮತ್ತೆ ಮತ್ತೆ ಉಸುರಿತು
ನೀನಿಲ್ಲೇ ಇರುವೆಯೆಂದು….

ಗಾಳಿಯಲ್ಲಿ ತೇಲಿ ಬಂದ
ನಗುವಲೆಗಳು
ನುಡಿದವು
ನೀರಿನಲ್ಲಿ ಕಲ ಕಲ ಅಲೆಗಳು
ಮಿಡಿದವು
ನೀನಿಲ್ಲೇ ಇರುವೆಯೆಂದು….

ನಿನ್ನ ಕವನ ದವನ
ಹೊತ್ತು ತಂದ ಘಮ ಘಮ
ಪರಿಮಳ ಮತ್ತೆ ಮತ್ತೆ
ಮೆತ್ತನೆ ಉಸುರಿತು
ನೀನಿಲ್ಲೇ ಇರುವೆಯೆಂದು…

ನೀ ನುಡಿಯದಿದ್ದರೂ
ಪ್ರಕೃತಿಯ ಪ್ರತಿ ಕಣಕಣವೂ
ಕ್ಷಣ ಕ್ಷಣ ನನ್ನ ಬಳಿ ಸಾರಿ
ನುಡಿಯುತಿವೆ
ನೀನಿಲ್ಲೇ ಇರುವೆಯೆಂದು…

ನಿನ್ನೂರಿಂದ ತೇಲಿ
ಬಂದ ಮೋಡವೊಂದು
ಹಾರಿ ಬಂದ ಹಕ್ಕಿಯೊಂದು
ಮಿನುಗಿನಿಂದ ಚುಕ್ಕಿಯೊಂದು
ಮೂಡಿನಿಂದ ಶಶಿಯಿಂದು
ಪಿಸುನುಡಿದವೆಲ್ಲವೂ
ನೀನಿಲ್ಲೇ ಇರುವೆಯೆಂದು….

ದೂರದ ಮುಗಿಲೂರಿಂದ
ಚಂದಿರ ನೀನು ಇಂದು
ಅಂಗಳಕಿಳಿದು ಬೆಳದಿಂಗಳ
ಮಳೆಯಾಗಿ ಇಳೆಗಿಳಿದು
ಬಂದಿರುವೆಯೆಂದು…..


ಇಂದಿರಾ ಮೋಟೆಬೆನ್ನೂರ

Leave a Reply

Back To Top