ಅಂಕಣ ಬರಹ

ಪುಸ್ತಕ ಪ್ರಪಂಚ

ವೈ.ಎಂ.ಯಾಕೊಳ್ಳಿ

ಪುಟ್ಟ ಮಗುವಿನ ದಟ್ಟ ಚಿತ್ರಗಳು .

ಶಾರದಾ ಮುಳ್ಳೂರ ಅವರ ‘ನೀರಜ’

 ಕವಿತೆ ಒಮ್ಮೆ ಕೈ ಹಿಡಿದರೆ ಮತ್ತೆ ಬಿಡದು. ಅದರ ಸಂಗವೇ ಹಾಗೆ ಬೇರೆಯವರು ಬೇರೆಯ ಚಿಂತನೆಯಲ್ಲಿ ಇರುವಾಗ ಕವಿ ಸದಾ ತನ್ನ ಕಾವ್ಯ ರಚನೆಯ ಗುಂಗಿನಲ್ಲಿಯೆ ಇರುತ್ತಾನೆ. ಇದು ಕಾವ್ಯವ್ಯವಸಾಯದಲ್ಲಿರುವ ಪ್ರತಿಯೊಬ್ಬರ ಅನುಭವ

    ಕಾವ್ಯಕ್ಕೆ ಕಾರಣವಾಗಲು ಇಂಥಹುದೇ ವಸ್ತು ಬೇಕೆಂದಿಲ್ಲ. ಅದು ಯಾವ ಸಂದರ್ಭದಲ್ಲಾದರೂ, ಏನನ್ನು ನೋಡಿಯಾದರೂ ಒಡ ಮೂಡಬಹುದು ಅಂತೆಯೆ ವರಕವಿ ಕವಿ ಬೇಂದ್ರೆಯವರು “ಕವಿ ಜೀವದ ಬ್ಯಾಸರ ತಣಸಾಕ ಏನ ಬೇಕ, ಒಂದು ಹೂತ ಹುಣಸಿ ಮರ ಸಾಕ” ಎಂದಿದ್ದರು .ಕವಿ ಭಾವನಾಜೀವಿ.ಅವನ ಮನಸ್ಸಲ್ಲಿ ಕವಿತೆಯಾಗಲು ಏನಾದರೂ ಕಾರಣಗಳಿರುತ್ತವೆ.

     ಮಗುವನ್ನು ಕುರಿತು ಕನ್ನಡದಲ್ಲಿ ಬಂದಿರುವ ಪದ್ಯಗಳ ಅವಲೋಕನವೆ ಒಂದು ಸುದೀರ್ಘ ಅಧ್ಯಯನವಾಗಬಹುದು. ಕನ್ನಡ ಸಾಹಿತ್ಯ ದ ತುಂಬ ತಾಯಿ ಮಕ್ಕಳ ತಾಳ ಬಾರಿಸಿದಂತಹ ನುಡಿಗಳು ಸಾಕಷ್ಟಿವೆ. ಜನಪದ ತಾಯಿ ಮಗುವನ್ನು ‘ಆಡಿ ಬಾ ನನ್ನ ಕಂದ ಅಂಗಸಲ ತೊಳೆದೆನ’ ಎಂದು ಹಾಡಿದ್ದು ಮಾತ್ರವಲ್ಲದೇ ಆಡುವ ಕಂದನ ಸಲುವಾಗಿ “ಕೆಟ್ಟರೆ ಕೆಡಲವ್ವ ಮನೆಗೆಲಸ” ಎಂದ ಮಾತಿನಿಂದ ಹಿಡಿದು ಆದುನಿಕ ಕಾಲದವರೆಗೆ ಮಗುವನ್ನು ಕುರಿತು ತಾಯಿಯ ಭಾವಗಳು ಪದ್ಯವಾಗಿ ಹರಿದು ಬಂದಿವೆ. ವಾತ್ಸಲ್ಯ ಭಾವಕ್ಕೆ ಬಹಳ ಹಿಂದೆಯೇ ನಮ್ಮ ದಾಸ ಸಾಹಿತ್ಯದಲ್ಲಿ ಸಾಕಷ್ಟು ಕೀರ್ತನೆಗಳನ್ನು ಕಾಣುತ್ತೇವೆ. ’ಲಾಲಿಸಿದಳು ಯಶೋಧೆ ಜಗದೋದ್ಧಾರನಾ,’  ‘ಅಮ್ಮ ಗುಮ್ಮನ ಕರೆಯದಿರೆ.’ ಮೊದಲಾದ ಕೀರ್ತನೆಗಳನ್ನು ಗಮನಿಸಬಹುದು.ತಾಯಿಗೆ ಮಕ್ಕಳ ಮೇಲಿನ ಮೋಹಕ್ಕೆ ಮಿತಿಯೆಂಬುದೇ ಇರಲಾರದು. ನಮ್ಮ ಹಳಗನ್ನಡ ಕವಿಗಳೆ ‘ಮಕ್ಕಳೊಳಮಾದ ಮೋಹಂ ಎಲ್ಲಾ ಜೀವಕ್ಕಂ ಸಮಾನಂ’ ಎಂದಿದ್ದರು.
     ಕವಯಿತ್ರಿ ಶಾರದಾ ಮುಳ್ಳೂರ ಅವರು ಕವಿತೆ, ಚುಟುಕು-ಹನಿಗವಿತೆ, ಹೈಕು, ವಿಮರ್ಶೆ  ಹೀಗೆ ಅನೇಕ ಕಾವ್ಯ ಪ್ರಕಾರಗಳಲ್ಲಿ ತಮ್ಮದೇ ಆದ ಸಾಧನೆ ಮಾಡಿದವರು.  ಆದರೆ ಅವರ ಮಕ್ಕಳ ಪದ್ಯ ಪ್ರಕಾರದಲ್ಲಿಯೂ ಕೆಲಸ ಮಾಡಿದ್ದಾರೆ. ಒಬ್ಬ ಮಗುವನ್ನು ಇಟ್ಟುಕೊಂಡು ಒಂದು ಇಡೀ ಸಂಕಲನ ತರುವದು ತುಂಬ ಕಷ್ಟದ ಕಾರ್ಯ . ಕನ್ನಡದಲ್ಲಿ ಇಂತಹ ಕಾರ್ಯ ಮೊದಲು ಮಾಡಿದವರು ಕನ್ನಡದ ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ.ಅವರ ‘ಸೋನಿ ಪದ್ಯಗಳು’ ತುಂಬ ಪ್ರಸಿದ್ಧವಾಗಿವೆ.

    ಇದೇ ಮಾದರಿಯಲ್ಲಿ ತುಂಬ ಅಪರೂಪದ ಒಂದು ಸಂಕಲನ ತಂದವರು ಶ್ರೀಮತಿ ಶಾರದಾ ಮುಳ್ಳೂರ ಅವರು. ‘ನೀರಜ’ ಎಂಬ ಹೆಸರಿನ ಈ ಸಂಕಲನ ‘ಮಗು ಪದ್ಯಗಳು ‘ ಎಂಬ ಚಂದದ ಉಪಶೀರ್ಷಿಕೆ ಹೊಂದಿದೆ. ಇದೀಗ ವಲಯ ಅರಣ್ಯಾಧಿಕಾರಿಯಾಗಿರುವ ಕªಯಿತ್ರಿಯ ಅಕ್ಕನ ಮೊಮ್ಮಗ ಮಗುವಾಗಿದ್ದಾಗ ಅವರ ಬಲ್ಯವನ್ನು ನೆನಪಿಸುತ್ತಾ ಈಗ ಮಗುವಾಗಿರುವ ಅವರ ಕಂದ ನಿರಜ್ ನನ್ನು ಕುರಿತು ಈ ಚಿತ್ರಗಳನ್ನು ಬಿಡಿಸುತ್ತಾರೆ. ಹೀಗೆ ಖಾಸಗಿ ಅನುಭವಗಳೆ ಇಲ್ಲಿ ಪದ್ಯಗಳಾಗಿರುವ ಸಂದರ್ಭವನ್ನು  ಹೇಳುವದು ಅನಿವಾರ್ಯವಾದರೂ ಇವು ಎಲ್ಲ ಕಾಲದ ಎಲ್ಲ ತಾಯಂದಿರು ತಮ್ಮ ಮಕ್ಕಳ ಕುರಿತು ಒಳಗೊಳ್ಳಬಹುದಾದ ನವಿರು ಭಾವ£ಗಳ  ಸುಂದರ ಅಭಿವ್ಯಕ್ತಿಯಾಗಿವೆ. ಸುಂದರ ಚಿತ್ರದೊಂದಿಗೆ ಬರೆಯಲ್ಪಟ್ಟಿರುವ, ಪ್ರತಿ ಪುಟಕ್ಕೊಂದರAತೆ ಇರುವ ಈ ೫೬ ಕಿರುಪದ್ಯಗಳ ಓದು ಒಂದು ಸೊಗಸಾದ ಅನುಭವ.

     ತಾಯಿಗೆ ಮಗು ಎಂದೆಂದಿಗೂ ಮಗುವೇ . ಆವಳು ಸಾಕಿದ ಅಥವಾ ಹೆತ್ತ ಮಗು ಒಂದು  ದಿನ ದೊಡ್ಡವನಾಗಬಹುದು. ಆದರೆ ಅವಳ ಮನದಲ್ಲಿರುವ ಮಗುವಿನ ಕುರಿತ ಮಾಧುರ್ಯ ಭಾವ ಮಾತ್ರ ಕಡಿಮೆ ಯಾಗುವದೇ ಇಲ್ಲ .ಅದು ಯಾವಾಗ ಸಂದರ್ಭ ಬರುತ್ತದೆಯೋ ಆವಾಗ ಮತ್ತು ಸೆಲೆಯೊಡೆದು ಬರುತ್ತದೆ. ಅಂತ ಸಂದರ್ಭಗಳನ್ನು ಕವಯಿತಿ ನವಿರಾಗಿ ನೆನಪಿಸುವದು ಹೀಗೆ. “ಬಸ್ಸನಲ್ಲಿ ಹೋಗುವಾಗ ಪಕ್ಕದಲ್ಲಿ ಕೂತವರ ಮಗು ನಿರಾಯಾಸವಾಗಿ ನಮ್ಮ ಸರಕ್ಕೆ ಕೈ ಹಾಕುತ್ತದೆ. ರಸ್ತೆಯಲ್ಲಿ ಸಾಗುವಾಗ ಮುಂದೆ ಹೊರಟವರ ಹೆಗಲಿಗೆ ಎತ್ತಿಕೊಂಡ ಮಗು ಕೈಯಾಡಿಸಿ ನಗೆ ಬೀರುತ್ತದೆ. ಮನ್ಮ ಆಡಿಸುತ್ತದೆ. ಯಾರದೋ ಮಗು ಅತ್ತಾಗ ಎದೆಯಲ್ಲಿ ತರಂಗ ಏಳುತ್ತದೆ. ‘ಅನಮ್ಮಾ ‘ ಎನ್ನುವ ಪುಟ್ಟ ಕಗು ಎಲರ ಮಾತೃತ್ವವನ್ನು ಜಾಗೃತಗೊಳಿಸುತ್ತದೆ. .ತೊಟ್ಟಿಲ ಕಂದನ ಕುಕಾಟದ ನಗೆ ಮೈಮರೆಸುತ್ತದೆ. ಭಿಕ್ಷೆ ಬೇಡಲು ಬಂದವಳು ಮರದಲ್ಲಿ ಇಟ್ಟುಕೊಂಡ ತಂದ ಎಂಟು ದಿನದ ಕೂಸಿನ, ಹೊರಚಾಚಿದ ಕೆಂಪು ಕಾಲು! ಮುಟ್ಟಿದಾಗ ಖುಷಿ -ಕಣ್ನು ಹಸಿ ಮಲಗಿದ ಮಗುವಿನ ತೇಲುವ ಸೌಂದರ್ಯದ  ತೂಕಕ್ಕೆ ಯಾವ ಚೆಲುವನ್ನು ಸರಿದೂಗಿಸಬಹುದು? ಹೀಗೆ ಹಿಂದೆ ಮುಂದೆ ಸದಾ ಸೆಳೆಯುತ್ತಲೇ ಇರುತ್ತಾದೆ. ನಮ್ಮದಷ್ಟನ್ನೇ ನೋಡಿ ಅನಂದಿಸುವ ಸಂಕುಚಿತ ಜಗತ್ತಲ್ಲಿ ,ಅದರ ಗಡಿ ದಾಟಿ ದೃಷ್ಟಿ ಬೀರುವ ಅನೇಕ ಜೀವಗಳು ಇರುವದರಿಂದಲೇ ಜೀವನದ ಮೌಲ್ಯಗಳು ಇಂದಿಗೂ ಉಳಿದಿವೆ.” ಹೀಗೆ ತಾಯಿಯಾಗಿ ಅವರು ತಮ್ಮ ಅನುಭವವನ್ನು ಮಾತಾಗಿಸುತ್ತಾರೆ. ಇವು ತಾಯಿಗೆ ಮಾತ್ರ ಮೂಡಬಲ್ಲ ಮಾತುಗಳು.

   ಮಗು ತಾಯಿಯ ಒಡಲಲ್ಲಿ ರೂಪಗೊಳ್ಳುವ ಅವಿಸ್ಮರಣೀಯ ಸಂದರ್ಭವನ್ನು ನೆನಪಿಸುವದರೊಂದಿಗೆ ಈ ಸಂಕಲನ ಆರಂಭವಾಗುತ್ತದೆ. ಮಗು ತಾಯ ಗರ್ಭದಲ್ಲಿ


ನೀರಜನ
ಅಮ್ಮನಿಗೆ ಹೆರಿಗೆ ನೋವು
ಅಪ್ಪನಿಗೆ  ಸಂಕಟ
ಅಜ್ಜಿಗೆ ಚಿಂತೆ
ಅಜ್ಜನಿಗೆ ತಳಮಳ

ಕೋಣೆಯ ಒಳ
ಕೋಣೆಯ ಒಳಗೆ
ನೀರಜನ ಅಳುವ ಸದ್ದು
ಎಲ್ಲರಿಗೂ ಸಮಧಾನದ ಗಂಟೆ



ಮಗುವಿನ ಜನನದ ಆ ಸಮಯ ಯರ‍್ಯಾರ ಮನದಲ್ಲಿ ಏನೆನು ಬಾವಗಳನ್ನು ಮೂಡಿಸುತ್ತದೆ ಎನ್ನುವದು ಈ ಕಿರುಪದ್ಯದಲ್ಲಿ ಮೂಡಿರುವ ರೀತಿ ಅವಿಸ್ಮರಣೀಯ. ತಾಯಿಗೆ ಹೆರಿಗೆ ನೋವು ಕೊಡುವ ಅಸಾಧ್ಯ ಸಂಕಟವನ್ನು  ಬಣ್ಣಿಸಲು ಸಾಧ್ಯವೇ ಇಲ್ಲ. ಆದರೆ ಉಳಿದವರಲ್ಲಿಯೂ ಅದು ತಲ್ಲಣ ತಳಮಳ ಉಂಟು ಮಾಡುತ್ತದೆ. ಮಗುವಿನ ತಂದೆಗೆ ಅದರ ತಾಯಿಯ ಮತ್ತು ಹೊಟ್ಟೆಯೊಳಗಿರುವ ಇಬ್ಬರ ಕಾಳಜಿ , ಚಿಂತೆ, ಮನೆಯ ಹಿರಿ ಜೀವ ಅಜ್ಜಿಗೆ ಹೆರಿಗೆಯು ಹೇಗೆ ಆಗುವದು ಎಂಬ ಚಿಂತೆ , ಅಜ್ಜನಿಗು ತಳಮಳ,. ಕೊನೆಗೊಮ್ಮೆ ಮಗುವು ತಾಯಿಯ ಒಡಲಿಂದ ಹೊರಬಂದನೋ ಸುತ್ತಲಿನವರ ತಲ್ಲಣ ತಳಮಳ ನಿಲ್ಲುತ್ತದೆ. ಮಗುವಿನ ಧ್ವನಿಯೆ ಕಾಣಬರುತ್ತದೆ. ವಿನ: ಅಲ್ಲಿಬೇರೆನೂ ಮುಖ್ಯವೆನಿಸುವದೇ ಇಲ್ಲ. ಮಗು ಬೆಳೆಯುತ್ತ ಹೋಗುವ ಒಂದೊಂದು ಅನುಭವವನ್ನೂ ಒಂದೊಂದು ಚುಟುಕು ಪದ್ಯವಾಗಿಸಿದ ಪರಿ ಅತ್ಯತ ಕುತುಃಲಕರವಾಗಿದೆ. ಕವಿತೆ ಸೋಲದಂತೆ ನುಡಿ ಚಿತ್ರಗಳನ್ನು ಕವಿಯಿತ್ರಿ ಕಟ್ಟುತ್ತಾರೆ. ಹುಟ್ಟಿದ್ದಾಗ ಗುಬ್ಬಚ್ಚಿ ಯಂತಿದ್ದ ಎರಡನೆಯ ದಿನವೇ ತುಸು ಗರಿಗೊಂಡಿದ್ದನ್ನು ಮೂರನೆಯ ಪದ್ಯ ಹೀಗೆ ವಿವರಿಸಿದೆ.


ನೀರಜ-
ಹುಟ್ಟಿದಾಗ ಮಾಂಸದ ಮುದ್ದೆ
ತುಪ್ಪಳವಿರದ ಗುಬ್ಬಚ್ಚಿ
ಮರುದಿನವೇ
ರೆಕ್ಕೆ  ಮೂಡಿದ ಹೊಸಹಕ್ಕಿ
ಹಾರಾಟವೇ ಹಾರಾಟ

ಜನಿಸಿದ ಕೆಲವೇ ದಿನಗಳಲ್ಲಿ ಮನೆಯವರಿಗೆ ಮಗು ಮೂಡಿಸುವ ಸಂಚಲನವೆ  ಹಾಗೆ. ಅಜ್ಜಅಜ್ಜಿಯರಂತೂ ತಮ್ಮದೇ ಕಾರಣಕ್ಕೆ ಖುಷಿ ಪಡುತ್ತಿದ್ದಾರೆ. ಅಜ್ಜಿಗೆ ಅಜ್ಜನದೇ ಕಿರಿಕಿರಿ . ಈಗ ಅವರಿಗೆ ಅಡಲು ಹೊಸ ಗೆಳೆಯನೊಬ್ಬ ಸಿಕ್ಕ ಕಾರಣ ಅಜ್ಜಿಗೆ ಕೊಡುವ ಕಿರಿಕಿರಿ ಕಡಿಮೆಯಾಗಬಹುದೆಂದು ಆಕೆ ಸಂತೋಷ ಪಡುತ್ತಾಳೆ. ತನಗೆ ನಿವೃತ್ತಿಯ ಈ ಕಾಲಕ್ಕೆ ಹೊಸಗೆಳೆಯ ಸಿಕ್ಕನೆಂದು ಅಜ್ಜ ಸಂತೋಷಪಡುತ್ತನೆ.  ಹೀಗೆ ಬದುಕಿನ ಸಣ್ಣ ಸಣ್ಣ ಸಂಗತಿಗಳನ್ನೂ ಕವಯಿತ್ರಿ ಗಮನಿಸುವದು ಚೇತೋಹಾರಿಯಾಗಿದೆ. ಯಾರು ಎತ್ತಿಕೊಂಡರೂ ಅಬವನದು ಸ್ವತಂತ್ರ ಪಕ್ಷ ಎಂದು ಕವಯಿತ್ರಿ ನಗೆಯಾಡುತ್ತಾರೆ. ಆತನ ಸ್ನಾನದ ಚಿತ್ರವೂ ಒಂದು ಮಹಾಯಾಗವೇ!
ನೀರಜ ಸ್ನಾನ ಮಡುವಾಗ


ಡಬ್ಬ ಬಿದ್ದು
ಕಪ್ಪೆಯಾಗಿ
ಚಿತ್ತ ಬಿದ್ದು
ಮೀನಾಗಿ ,ಎದ್ದು ಕುಳಿತು
ಮೊಲವಾಗಿ
ಎಲ್ಲೆಡೆ ನೀರೇ ನೀರು


ಆತನ ನೀರಾಟ ಹೀಗೆ ಎಲ್ಲ ಪ್ರಾಣಿಗಳ ಇರುವನ್ನು ನೆನಪಿಸುತ್ತದೆ. ಅವನು ತಾಯಿಯ ವಾತ್ಸಲ್ಯದ ಕಣ್ಣಿಗೆ ‘ಬಾಲಶಿವನಾಗಿ ಕಾÀಣಿಸುತ್ತಾನೆ. ನಿದ್ದೆಯಲ್ಲೂ ಎಚ್ಚರದಲ್ಲೂ ನಗುವ ಅವನ ಹೆಸರು ‘ನಿರಜ್ ಅಲ್ಲ ನಗು’ ಎನಿಸುತ್ತದೆ. ಮಗು ಮಲಗಿದ ಚಿತ್ರವನ್ನು ನೋಡಿ

ನೀರಜ ಮಲಗಿದ್ದಾನೆ
ಅದಕ್ಕೆ, ಸೊಂಪಾದ ಗಾಳಿ ಬಿಸುತ್ತಿದೆ,
ಅದಕ್ಕೇ, ನಿಶ್ಶಬ್ದ ಮನೆಮಾಡಿದೆ.
ಧೂಪದ ಪರಿಮಳ



ಮಗು ಮಲಗಿದೆ ಈಗ ಎಲ್ಲಡೆ ಶಾಂತಿ ಅವರಿಸಿದೆ. ಬಾಂಡೆ ತಿಕ್ಕುವ ಸೀತಾಬಾಯಿಯೂ ಅ ಮಗುವಿನ ಅಟೋಟಕ್ಕೆ ಮನಸೋತಿದ್ದಾಳೆ. ಮಗುವನ್ನು ಕಂಡು ಸಂತೋಷಪಡಲು ಮಗುವಿನ ಸಂಬಂದಿಗಳೆ ಅಗಬೇಕೆಂದಿಲ್ಲ.
       ಮಗು ಬೆಳೆಯುತ್ತ ಬೆಳೆಯುತ್ತ ತನ್ನ ಅಟದ ಲೀಲೆಗಳಿಂದ ಎಲ್ಲರನ್ನೂ ಕಂಗೆಡಿಸುತ್ತದೆ. ಅವನ ಬಾಯಲ್ಲಿ ಆಟವಾಡುತ್ತಾ ಇಟ್ಟುಕೊಂಡ ಕಲ್ಲು ಹಳ್ಳ ತುಂಬಿಕೊಂಡಿದೆ. ಮಗುವಿನ ಆಟದಿಂದಾಗಿ ಗುಬ್ಬಚ್ಚಿ ಇಲ್ಲಿ ನನ್ನದೇನು ಕೆಲಸ ಎಂದು ಇತ್ತ ಸುಳಿಯುವದನ್ನೇ ಬಿಟ್ಟಿದೆಯಂತೆ! ಆ ಪುಟ್ಟ ನೀರಜ ಹೇಗಿದ್ದಾನೆ?
ಕವಯತ್ರಿಯ ಮಾತಲ್ಲೇ ಕೇಳಿ


  ಗುಲಗಂಜಿಯ ಚೆಲುವು
 ನವಿಲುಗರಿಯ ಒಲವು
 ಮರಿ ಆನೆಯ ಮೋಜು
 ಜಿಂಕೆ ಮರಿಯ ಕುಣಿತ
 ಆಕಳ ಕರುವಿನ ಜಿಗಿತ
 ಎಲ್ಲವೂ ಸೇರಿದ್ದೇ
 ನಮ್ಮ ಪುಟ್ಟ ನೀರಜ್

ಬೆಳ್ಳಕಡಗ, ಹಣಮಂತನ ಪದಕ ಹಕಿ ಕುಸ್ತಿಗೆ ತಯಾರಾಗಿ ನಿಂತಂತಿರುವ ಆತ  ಪೈಲ್ವಾನನೂ ಅಗಿ ಕಾಣಿಸುತ್ತಾನೆ.

ಕಾಲಿಗೊಂದೊಂದು
ಬೆಳ್ಳಿ ಕಡಗ
ಎದೆಯ ಮೇಲೊಂದು
ಹಣಮಂತನ ಪದಕ
ಸದಾ ತೊಡೆ ತಟ್ಟುವ
ಮರಿ ಪೈಲ್ವಾನ

ಯಾವದೂ ಅವನಿಗಿಂತ ದೊಡ್ಡದಲ್ಲ. ಎಲ್ಲವೂ ಅವನ ಮುಂದೆ ನಗಣ್ಯ. ಅಮ್ಮನ ಪಕ್ಕದಲ್ಲಿ ಮಲಗಿದ್ದ ಅತ “ಚಂದ್ರನ ಪಕ್ಕದಲ್ಲಿ ಹೊಳೆವ ನಕ್ಷತ್ರದಂತೆ” ಕಾಣಿಸುತ್ತಾನೆ. ಆತ ಅತ್ತರೂ ನಕ್ಕರೂ ಅಲ್ಲಿ ಕಾವ್ಯ ಸ್ಪುರಿಸುತ್ತದೆ.
ಹೀಗೆ ಮಗು ವಿದ್ದಾಗಿನ ತರಹೇವಾರಿ ಐವತ್ತಾರು ಚಿತ್ರಗಳನ್ನು ಕವಿಯಿತ್ರಿ ಕೊಡುತ್ತಾರೆ

       ಆದಿ ಕವಿ ಪಂಪ ‘ಮಕ್ಕಳೊಳಮಾದ ಮೋಹಂ ಎಲ್ಲ ಜೀವಕ್ಕ ಸಮಾನಂ’ ಎಂಬ ಮಾತನ್ನು ಹೇಳಿದ್ದನಂತೆ. ಅದರ ಅರ್ಥ ಮಕ್ಕಳ ಮೇಲೆ ಮೋಹ ಮೂಡುವದು  ಎಲ್ಲರಿಗೂ ಸಮಾನವೇ.ಕವಿ ಜೀವಕೆ ಅದು ಕವಿತೆಯಾಗಿ ಹೊರಬರಲು ಪ್ರೇರಣೆ  ನೀಡುತ್ತದೆ.
ಎಚ್ .ಎಸ್. ವಿ ಯವರ ಸೋನಿ ಪದ್ಯಗಳ ಪಾಲಿಗೆ ಸೇರುವ ನೀರಜ್ ಪದ್ಯಗಳು ಕನ್ನಡದಲ್ಲಿ ಒಂದು ಅಪರೂಪದ ಸಂಕಲನವಾಗಿದೆ..ಚುಟುಕು ಕಾವ್ಯಪ್ರಕಾರಕ್ಕೆ ಒಂದು ಅಪರೂಪದ ಕೊಡಗೆಯಾಗಿದೆ. ಮತ್ತಾವ ಕವಿಯೂ ಹೀಗೆ ಪ್ರಯೋಗಗಳನ್ನು ಮಾಡಿದ್ದಾರೆ ಎನ್ನವುದಕ್ಕೆ ಮತ್ತೊಂದು ಹೆಸರು ತಕ್ಷಣಕ್ಕೆ ಸಿಗುತ್ತಿಲ್ಲ. ಇಲ್ಲಿನ ಕೆಲವು ಪದ್ಯಗಳು ಚೆಲುವಾಗಿವೆ.ಕೆಲವು ಪೂರ್ಣವಾಗಿ ಅರಳಿಕೊಳ್ಳದ ಹಸಿರು ಮೊಗ್ಗು .ಆದರೆ ಹೂವಿನ ಯಾನದಲ್ಲಿ ಮೊಗ್ಗಗೂ ಒಂದು ಹಿಗ್ಗಿನ ಸ್ಥಾನಮಾನ ಇದೆ” ಎಂದು ಈ ಕವಿತೆಯ ಬೆಲೆ ಗಟ್ಟಿದ್ದಾರೆ

     ಯಾರ ಮನೆಯಲ್ಲಿ ಮಕ್ಕಳಾಟವಿಲ್ಲ.? ಅದರೆ ಅದನ್ನೆಲ್ಲ ಕವಿತೆ ಮಾಡುವ,ಚಂದದ ನುಡಿಚಿತ್ರ ಗಳಾಗಿಸುವ ಕೌಸಲ ನುರಿತ ಕವಿಯಿಂದ ಮಾತ್ರ ಸಾಧ್ಯ. ಹೀಗಾಗಿ ವಯಕ್ತಿಕವಾಗಿ ಬೇಸರ ಮೂಡಿಸುವಂತಿದ್ದ ಎಷ್ಟೋ ವಿಷಯಗಳು ಕವಿಯ ಕೌಶಲದಿಂದಾಗಿ ಸುಂದರ ಕವಿತೆಯಾಗಿ ಅಚ್ಚರಿ ಮೂಡಿಸುತ್ತದೆ. ಇಲ್ಲಿನ ಎಲ್ಲ ಚಿತ್ರಗಳೂ ಚೇತೋಹಾರಿಯಾದರೂ ಒಂದೇ ವಿಷಯವನ್ನು ಬೇರೆ ಬೇರೆ ತೆರದಲ್ಲಿ  ಬಣ್ಣಿಸಲೇ ಬೇಕು ಎಂಬ ಕಟ್ಟೊತ್ತಾಯಕ್ಕೆ ಬಿದ್ದಾಗ ವಿಷಯದಲ್ಲಿ ಪುನರುಕ್ತಿಯಾದಂತೆ ಅನಿಸುತ್ತದೆ. ಅದು ಸಹಜವೂ ಕೂಡಾ .ತಮ್ಮ ಮಗುವಿನ ಖಾಸಗಿ ಚಿತ್ರಗಳನ್ನು ರಸವತ್ತಾಗಿ ಬಿಡಿಸಿ ಅವು ಎಲ್ಲರ ಅನುಭವವಾಗುವಂತೆ ಮಾಡಿದ ಚಿತ್ರಗಳ ಸಮೂಹವೇ ಈ ಸಂಕಲನವಾಗಿದೆ. ತಾಯ್ತನದ ಪ್ರೀತಿ ಮಗುವ ಎಷ್ಟು ಬಣ್ಣಿಸಿದರೂ ಅದಕ್ಕೆ ತ್ರಪ್ತಿಯಿಲ್ಲ. ಪ್ರತಿ ಪದ್ಯದಲ್ಲಿ ತುಂಬಿದ್ದು ಪ್ರೀತಿ, ಪ್ರೀತಿಯೊಂದನ್ನು ಮಾತ್ರ!


ವೈ.ಎಂ.ಯಾಕೊಳ್ಳಿ

ಸಮಕಾಲಿನ ಸಂದರ್ಭದ ಮಹತ್ವದ ಕವಿ,ವಿಮರ್ಶಕರಾಗಿರುವ ಇವರು ಕಾವ್ಯ,ವಿಮರ್ಶೆ,ಸಂಶೋಧನೆ,ಸಂಪಾದನೆ ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ೪೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಸದ್ಯಕ್ಜೆ ಬೆಳಗಾವಿ ಜಿಲ್ಲೆಯ ಸವದತದತಿ ತಾಲೂಕಿನ ಯಕ್ಕುಂಡಿ ಸರಕಾರಿ ಪದವಿ‌ಪೂರ್ವ ಕಾಲೆಜಿನಲ್ಲಿ ಪ್ರಾಚಾರ್ಯರರಾಗಿದ್ದಾರೆ.೧೯೯೨ ರಲ್ಲಿ ಮೊದಲ ಸಂಕಲನ ನಿಟ್ಟುಸಿರು ಬಿಡುತ್ತಿದೆ ಕವಿತೆ ಕವನ ಸಂಕಲನ ಪ್ರಕಟಿಸಿದ ಇವರು ಏಳು ಕವನ ಸಂಕಲನ ಒಂದು ಕಥಾ ಸಂಕಲನ ಹತ್ತಕ್ಕು ಹೆಚ್ಚು ವಿಮರ್ಶಾಕೃತಿಗಳು ,ಪ್ರಾಚೀನ ಕನ್ನಡ ಸಂಕಲನ ಕಾವ್ಯಗಳು ಸಂಶೋಧನ ಮಹಾ ಪ್ರ ಬಂಧಮೊದಲಾದ ಕೃತಿಗಳನ್ನು ಹೊರತಂದಿದ್ದಾರೆ.
ಸಂಚಯ,ಸಂಕ್ರಮಣ ಕಾವ್ಯ ಪ್ರಶಸ್ತಿ,ಡಾ ಹಿರೆಮಲ್ಲೂರು ಈಶ್ವರನ್ ಪುರಸ್ಕಾರ,ಕರ್ನಾಟಕ ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿ,ಇನ್ನು ಅನೇಕ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.ಈಗಲೂ ನಾಡಿನ ಹಲವು ಪತ್ರಿಕೆ,ಸಾಮಾಜಿಕ ಜಾಕತಾಣಗಳಲ್ಲಿ ನಿರಂತರ ಬರವಣಿಗೆಯಲ್ಲಿ ತೊಡಗಿದ್ದಾರೆ.

2 thoughts on “

  1. ಸುಂದರವಾಗಿ ಕೃತಿ ಕುರಿತು ವಿಷಯ ಕಟ್ಟಿ ಕೊಟ್ಟಿದ್ದೀರಿ. ಧನ್ಯವಾದಗಳು ತಮಗೆ.

    1. ಕೃತಿ ಕುರಿತು ಓದುತ್ತಾ ಸಾಗಿದಾಗ,ನನ್ನ ಅನುಭವ ಕವನವಾಗಿ ಮತ್ತೆ ಕವನಗಳು ನಿಮ್ಮ ಓದಿಗೆ ಸಿಲುಕಿ, ನನ್ನನ್ನೇ ನಾನು ಕನ್ನಡಿಯಲ್ಲಿ ನೋಡಿಕೊಂಡಂತೆ ಭಾಸವಾಯ್ತು.sir.

Leave a Reply

Back To Top