ಎ ಎಸ್. ಮಕಾನದಾರ ಕೃತಿ “ಅಕ್ಕಡಿ ಸಾಲು” ಅವಲೋಕನ ಡಾ. ಹಸೀನಾ ಹೆಚ್ ಕೆ ಅವರಿಂದ

ಪುಸ್ತಕ ಸಂಗಾತಿ

ಎ ಎಸ್. ಮಕಾನದಾರ ಕೃತಿ

“ಅಕ್ಕಡಿ ಸಾಲು” ಅವಲೋಕನ

ಡಾ. ಹಸೀನಾ ಹೆಚ್ ಕೆ ಅವರಿಂದ

ಅಕ್ಕಡಿ ಸಾಲು
ಮೂರು ದಶಕದ ಕಾವ್ಯ
ಲೇಖಕರು : ಎ ಎಸ್. ಮಕಾನದಾರ
ನಿರಂತರ ಪ್ರಕಾಶನ
ಎಂ ಆರ್ ಅತ್ತಾರ ಬಿಲ್ಡಿಂಗ್
ಅಮರೇಶ್ವರ ನಗರ 5ನೇ ಕ್ರಾಸ್, ಗದಗ 582103
9916480291
ಬೆಲೆ ₹ 250/
ಪುಟಗಳು :240

ಬಯಲ ಬೆಳಕಿನ ಕವಿಯ
ಸಂಭ್ರದ್ಧ ಕಾವ್ಯ ಫಸಲು :ಅಕ್ಕಡಿ ಸಾಲು

ಕಳೆದ ಹಲವು ದಶಕಗಳಿಂದ ಸಾಹಿತ್ಯ ಕೃಷಿ ಸೇರಿದಂತೆ ಸಾಹಿತ್ಯ ಪ್ರಕಾಶನ ಮತ್ತು ಸಾಹಿತ್ಯ ಸಂಘಟನೆ ಮೂಲಕ ನಾಡಿನ ಓದುಗರನ್ನು, ಸಾಹಿತ್ಯಾಸಕ್ತರನ್ನು ತಲುಪಿರುವ ಹೆಸರುಗಳಲ್ಲಿ ಎ. ಎಸ್.ಮಕಾನದಾರ ಅವರದು ಪ್ರಮುಖವಾದುದು. ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡದವರಾದ ಇವರು ವೃತ್ತಿಯಿಂದ ಕಾನೂನು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೂ ಸೃಜನಶೀಲತೆಯ ಬೆಳಕು ಕಂಡುಕೊಂಡದ್ದು ಸಾಹಿತ್ಯ ಲೋಕದಲ್ಲಿ.

ಲಾಕ್ ಡೌನ್ ಸಂದರ್ಭ ನಾನು ಓದಿದ ಪುಸ್ತಕಗಳಲ್ಲಿ ಎ.ಎಸ್. ಮಕಾನದಾರ ಅವರ ಅಕ್ಕಡಿಸಾಲು ಕವನ ಸಂಕಲನ ಕೂಡ ಒಂದು.

ಹಾಗೆ ನೋಡಿದರೆ ಈ ಕೃತಿ ನನ್ನ ಕೈ ತಲುಪಿ ಒಂದು ವರ್ಷ ಆಗುತ್ತಲೇ ಬಂದಿತ್ತು. ಆದರೆ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೆಲಸಗಳಲ್ಲಿ ಕಳೆದು ಹೋಗಿದ್ದ ನನಗೆ ಪಟ್ಟಾಗಿ ಕೂತು ಓದಲು ಆಗಿರಲಿಲ್ಲ. ಹಾಗೊಂದು ವೇಳೆ ಈ ಮೊದಲೇ ಈ ಕೃತಿ ಓದಲು ಆರಂಭಿಸಿದ್ದರೆ ಬಹುಶಃ ಮತ್ತೆ ಕೆಳಗಿಡುತ್ತಿರಲಿಲ್ಲ ಅಂತ ನನಗೆ ಆನಂತರ ಅನಿಸಿದೆ.

ಯಾಕೆಂದರೆ ಮೂರು ದಶಕಗಳ ಮಕಾನದಾರ ಅವರ ಕವಿತೆಗಳು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಒಮ್ಮೆ ಓದಲು ಆರಂಭಿಸಿದರೆ ಪುಸ್ತಕ ಮುಗಿಯುವವರೆಗೂ ಕೆಳಗಿಡಲು ಮನಸಾಗುವುದಿಲ್ಲ.
ಮಕಾನದಾರ ಅವರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ. ಮಾತ್ರವಲ್ಲ ಸಾಕಷ್ಟು ಜನ ಯುವ ಬರಹಗಾರರಿಗೆ ಬರೆಯುವಂತೆ ಪ್ರೇರೇಪಿಸಿದ್ದಾರೆ ಮಾತ್ರವಲ್ಲದೆ ಅಂತಹವರ ಪುಸ್ತಕ ಪ್ರಕಟಣೆಗೆ ಬೆಂಬಲವಾಗಿ ನಿಂತಿದ್ದಾರೆ.

ಸೂಫಿ ಸಾಹಿತ್ಯ ಸಂಪಾದನೆ 3 ಕೃತಿಗಳು, ತತ್ವ ಪದ ಸಾಹಿತ್ಯ ಸಂಪಾದನೆಯ 3 ಕೃತಿಗಳು ಮತ್ತು ಕವನ ಸಂಕಲನ ಸಂಪಾದನೆ 3 ಕೃತಿಗಳು ಸೇರಿದಂತೆ ಒಟ್ಟು 30ಕೃತಿಗಳನ್ನು ಸಂಪಾದಿಸಿದ್ದಾರೆ. ಇವರ ಎರಡು ಕವನ ಸಂಕಲನಗಳು ಹಿಂದಿಭಾಷೆ ಗಳಿಗೆ ಅನುವಾದಗೊಂಡಿವೆ. 8 ಸ್ವತಂತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ನುಡಿ ಸಂಪದ ಪಠ್ಯ ಪುಸ್ತಕದಲ್ಲಿ ಇವರ ಕವಿತೆ ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ? ಸೇರಿಸಲಾಗಿದೆ.

ಸಂತ ಶಿಶುನಾಳ ಷರೀಫ ಪ್ರಶಸ್ತಿ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಅಣಿಮಾನಂದಶ್ರೀ ಸದ್ಭಾವನಾ ಪುರಸ್ಕಾರ, ಶಿವಮೊಗ್ಗ ಕರ್ನಾಟಕ ಸಂಘ ನೀಡುವ ಪಿ. ಲಂಕೇಶ್,ಮೊದಲಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇದಿಷ್ಟು ಮಕಾನದಾರ ಅವರ ಕುರಿತು ಸಂಕ್ಷಿಪ್ತ ಪರಿಚಯ. ಇನ್ನು ಅವರ ಅಕ್ಕಡಿ ಸಾಲು ಕೃತಿಯ ಬಗ್ಗೆ ಹೇಳುವುದಾದರೆ.

ಅಕ್ಕಡಿ ಸಾಲು ಕವನ ಸಂಕಲನ ಈ ಕೃತಿಯು 2017 ರಲ್ಲಿ ಪ್ರಕಟಗೊಂಡಿದ್ದು, ಬೆಟಗೇರಿ – ಗದಗನ ನಿರಂತರ ಪ್ರಕಾಶನ ಪ್ರಕಟಿಸಿರುವ ಅಕ್ಕಡಿ ಸಾಲು ಕವನ ಸಂಕಲನದಲ್ಲಿ 211ಕವಿತೆ ಗಳಿವೆ
ಡಾ. ವೈ ಎಂ ಯಾಕೊಳ್ಳಿ ಪುಸ್ತಕಕ್ಕೆ ಮುನ್ನೋಟ ಬರೆದಿದ್ದಾರೆ. ಈ ಸಂಕಲನದ ಮೊದಲ ಕವಿತೆಯೇ ಅವ್ವ ಎಂಬುದಾಗಿದೆ. ಅವ್ವ ಎಂದಾಕ್ಷಣ ಕನ್ನಡದ ಯಾವುದೇ ಓದುಗನಿಗೆ ನೆನಪಿಗೆ ಬರುವುದು ಪಿ.ಲಂಕೇಶ್ ಅವರ ಅವ್ವ ಕವಿತೆ ಮತ್ತೊಂದು ಮ್ಯಾಕ್ಸಿಂ ಗೋರ್ಕಿಯವರ ತಾಯಿ ಕಾದಂಬರಿ. ನಾನು ಮಕಾನದಾರ ಅವರ ಅವ್ವ ಕವಿತೆಯನ್ನು ಈ ಎರಡು ಕೃತಿಗಳೊಂದಿಗೆ ಹೋಲಿಸುತ್ತಿಲ್ಲ. ಆದರೆ ಮಕಾನದಾರ ಅವರ ಅವ್ವ ಕೂಡ ಸಾಕಷ್ಟು ಗಾಢವಾಗಿ ಓದುಗರ ಮನ ಸೆಳೆಯುತ್ತದೆ.

ಅಪ್ಪನ ಫಲವತ್ತಾದ ಎದೆaಯ ಹೊಲ
ಅವ್ವ ತನ್ನ ಕಣ್ಣೀರಿನಿಂದ ಹದಗೊಳಿಸಿದ್ದಾಳೆ…


ಎನ್ನುತ್ತಾರೆ ಕವಿ. ಇದರರ್ಥ ಹಲವು. ಅಪ್ಪನ ಎದೆಯನ್ನು ಹದಗೊಳಿಸಿದ್ದು ಅವ್ವನ ಕಣ್ಣೀರು. ಇದು ಆನಂದಭಾಷ್ಪವೋ? ಸುಖದ ಸಾಕ್ಷಿಯೋ? ಅಥವಾ ನೋವಿನ ಕಂಬನಿಯೋ? ಆದರೆ, ಅಪ್ಪ ಎದೆಯ ಹೊಲ ಮಾತ್ರ ಹದಗೊಂಡಿದೆ. ಹೀಗೆ ಆರಂಭದಲ್ಲಿ ವೈಯಕ್ತಿಕ ಎಂದು ತೋರುವ ಕವಿತೆ ಮೂರನೇ ಸಾಲಿಗೆ ಸಾಗುತ್ತಲೇ ಸಮಷ್ಠಿಯ ಅರ್ಥವನ್ನು ಪಡೆಯುತ್ತದೆ. ಅದೆ ಹೇಗೆಂದರೆ –


ಪ್ರೀತಿಯ ಬದುವಿನಲ್ಲಿ ನೆಟ್ಟಿದ್ದಾಳೆ
ಸಾಲು ಸಾಲು ಶ್ರೀಗಂಧದ ಮರ…


ಅರೆ ಇದು ಕನ್ನಡ ನಾಡಿಗೆ ಕನ್ನಡಾಂಬೆಯನ್ನು ನಿಮ್ಮ ಕಣ್ಮುಂದೆ ತರುವ ಸಾಲಲ್ಲವೇ? ಹೌದು, ನನಗನಿಸಿದ್ದು ಹಾಗೆಯೇ. ಅವ್ವ ಕನ್ನಡಾಂಬೆಯೂ ಹೌದು, ಕನ್ನಡಾಂಬೆಯಲ್ಲೇ ನಮ್ಮವ್ವ ಕೂಡ ಕಾಣುತ್ತಾಳೆ ಎಂಬಂತಹ ಸಮಷ್ಠಿಯ ರೂಪಕ ಕಾಣುತ್ತದೆ.

ಮುಂದುವರೆದು ಬದುಕಿನಲ್ಲಿ ಬರುವ ಕಷ್ಟ ನಷ್ಟಗಳನ್ನು ಎದುರಿಸಿ ಆ ಕಷ್ಟವನ್ನೇ ಬೇರಾಗಿಸಿಕೊಂಡು ಚಿಗಿಯುವ ಅವ್ವನ ಜೀವನೋತ್ಸಾಹದ ಬಗ್ಗೆ ಹೇಳುತ್ತಲೇ ಆಕೆ ತನ್ನ ಕುಡಿಗಳನ್ನು ಕಷ್ಟಪಟ್ಟು ಬೆಳೆಯುವುದನ್ನು ಚಿತ್ರಿಸಿದ್ದಾರೆ ಕವಿ. ತಾಯಿ ತನಗೆ ಎಷ್ಟೇ ಕಷ್ಟ ಬಂದರೂ ತಾನು ಉಪವಾಸ ಇದ್ದರೂ ಮಕ್ಕಳನ್ನು ಬೆಳೆಸಲು ಮಾತ್ರ ತನ್ನ ಎಲ್ಲದನ್ನೂ ಧಾರೆ ಎರೆಯುತ್ತಾಳೆ. ಅಂತಹ ಮಮತಾಮೂರ್ತಿಯ ಬಗ್ಗೆ ಮಕಾನದಾರ ಅತ್ಯಂತ ಸರಳ ಪದಗಳಲ್ಲಿ ಅವ್ವ ಎಂಬ ಆಕೃತಿಯ ಕುರಿತು ಚಿತ್ರಿಸುತ್ತಾರೆ.

ಗುಡಿಯ ಗೋಪುರ ಮಸೀದಿಯ ಮಿನಾರ್
ಊರ ಶಿಖರವೆಂದೆ ಭಾವಿಸಿದವಳು


ಅವ್ವ ಆಕೆಗೆ ಯಾವುದೇ ಜಾತಿ ಧರ್ಮ ಎಂಬುದಿಲ್ಲ. ವಾಸ್ತವದಲ್ಲಿ ಆಕೆಯೇ ಒಂದು ಧರ್ಮ. ಮಾತೆ ಎಂಬುದೇ ಒಂದು ಜಗತ್ತು. ಇಂತಹ ಅವ್ವ ಯಾವುದೇ ಜಾತಿ ಧರ್ಮದ ಕಟ್ಟುಪಾಡುಗಳಿಗೆ ತನ್ನನ್ನು ಒಗ್ಗಿಸಿಕೊಂಡವಳಲ್ಲ. ಆಕೆಗೆ ರಾಮನೂ ರಹೀಮನೂ ಒಂದೇ, ಅಲ್ಲಾ ಅಲ್ಲಮ ಇಬ್ಬರಲ್ಲೂ ಆಕೆಗೆ ಬೇಧವಿಲ್ಲ.


ಸವೆದ ಡುಬ್ಬ ಮೊಣಕಾಲು ಚಿಪ್ಪು
ನಿಶಾನೆಯಾಗುವ ತನಕ
ಸುಕ್ಕುಗಟ್ಟಿದ ಚರ್ಮ ಕುಡುಗೋಲು
ಕುರ್ಚಿಗಿ ಆಸರೆಯಾಗುವ ತನಕ
ನಂಜು ಕುಡಿದರೂ ಅವ್ವನಿಗೆ
ಸದಾ ಅಮೃತವ ಹಂಚುವ ಇರಾದೆ
ಗಂಡುಗಚ್ಚಿ ಹಾಕಿದರೆ ಬಾರದು ಅವಳ ಬಳಿ
ಜಾತೀಯತೆಯ ಗೊಡವೆ


ಇಡೀ ಜಗತ್ತಿನಲ್ಲಿ ನೀವು ಎಲ್ಲೇ ಹೋಗಿ, ತಾಯ್ತನ ಎಂಬುದೇ ಹೀಗೆ. ತಾಯ್ತನ ಉಳ್ಳವರು ತನ್ನ ಮಕ್ಕಳಿಗೆ ತನ್ನ ಕುಟುಂಬಕ್ಕೆ ತನ್ನ ನೆರೆಹೊರೆಯವರಿಗಾಗಿ ತಮ್ಮ ಜೀವನವನ್ನೇ ತೇಯ್ದು ಬಿಡುತ್ತಾರೆ. ಮತ್ತೆ ಹೀಗೆ ಈ ಬದುಕನ್ನು ಸವೆಸುವಾಗ ಮಕ್ಕಳೇ ಇರಬಹುದು, ಪತಿಯೇ ಇರಬಹುದು, ಕುಟುಂಬ ದ ಇತರ ಸದಸ್ಯರೇ ಇರಬಹುದು, ಬೀಗರು ನೆರೆಯವರು ಯಾರೇ ಇರಬಹುದು ಆಕೆಗೆ ಕಹಿ ಮಾತುಗಳನ್ನಾಡಿದರೆ ಅದನ್ನೆಲ್ಲ ನುಂಗಿಕೊಳ್ಳುತ್ತಾಳೆ. ಮಾತ್ರವಲ್ಲ ಅವರೆಲ್ಲರಿಗೂ ಪ್ರತಿಯಾಗಿ ಪ್ರೀತಿಯನ್ನೇ ಹಂಚುತ್ತಾಳೆ. ಇಂತಹ ಅವ್ವ ತಾನು ಗಂಡಿನಂತೆ ಕಚ್ಚೆ ಹಾಕಿ ನಿಂತರೆ ತನ್ನ ಬಳಿ ಜಾತಿಯತೆ ಗೊಡವೆ ಮಾಡದಂತೆ ಎಚ್ಚರ ವಹಿಸುತ್ತಾಳೆ.

ಕಂದಾಚಾರಕೆ ಕ್ಯಾಕರಿಸಿದ್ದಾಳೆ
ಮುರಿದ ಕನಸು ಕಟ್ಟುತ್ತಾಳೆ
ಹೊಳೆದಂಡಿ ಸಾಲಿನಲಿ
ಸೀಗೆ ಹುಣ್ಣಿಮೆಯ ಹಾಡಾಗುತ್ತಾಳೆ
ಬೆವರ ಹನಿಗಳ ಆಭರಣ ಧರಿಸಿ
ವಿಶ್ವಸುಂದರಿಯಂತೆ ಶೋಭಿಸುತ್ತಾಳೆ


ಆಕೆ ಅಕ್ಷರಸ್ಥೆಯೋ? ಅನಕ್ಷರಸ್ಥೆಯೋ? ಎಂಬುದು ಇಲ್ಲಿ ಅಮುಖ್ಯ. ಆದರೆ ಕಂದಾಚಾರದ ಬಗೆಗೆ ಆಕೆ ತನ್ನ ಜೀವನಾನುಭವದಿಂದ ಕಲಿತಿದ್ದಾಳೆ. ಹೀಗಾಗಿ ಕಂದಾಚಾರಕೆ ಆಕೆ ಕ್ಯಾಕರಿಸಿದ್ದಾಳೆ, ಬದುಕಿನ ಬಂಡಿ ಎಳೆಯುತ್ತ ಎಳೆಯುತ್ತ ಕಾಲನ ಹೊಡೆತಕ್ಕೆ ಮುರಿದು ಹೋದ ಕನಸುಗಳನ್ನು ಮತ್ತೆ ಮತ್ತೆ ಕಟ್ಟಿಕೊಳ್ಳುತ್ತಾಳೆ. ಇನ್ನು ಸೀಗೆ ಹುಣ್ಣಿಮೆಯಲ್ಲಿ ಹೆಣ್ಣುಮಕ್ಕಳು ಸಕ್ಕರೆಯ ಅಚ್ಚುಗಳಿರುವ ತಟ್ಟೆಯಲ್ಲಿ ಹಣತೆ ಹೂವು ಇಟ್ಟುಕೊಂಡು ಹಾಡು ಹಾಡುತ್ತ ಸಂಜೆ ವೇಳೆ ದೇವರಿಗೆ ಪೂಜೆ ಸಲ್ಲಿಸುವುದು ಉತ್ತರ ಕರ್ನಾಟಕದಲ್ಲಿ ಜಾರಿಯಲ್ಲಿರುವ ಹಬ್ಬ. ಇಂತಹ ಹಬ್ಬ ಆಚರಿಸುವಂತಹ ಸವಲತ್ತು ಆಕೆಗಿಲ್ಲ. ಆಕೆ ಬಡವಿ, ದುಡಿಯುತ್ತ ದಿನದೂಡಬೇಕು. ಹೀಗಾಗಿ ಆಕೆ ಜಮೀನಿನಿಂದ ಪ್ರತಿನಿತ್ಯ ಮನೆಗೆ ತೆರಳುವ ಸಮಯ ಸೀಗೆ ಹುಣ್ಣಿಮೆಯಲ್ಲಿ ಹಾಡುವ ಹಾಡುಗಳನ್ನು ಹಾಡುತ್ತಾಳೆ, ಪ್ರತಿನಿತ್ಯ ಸಂಭ್ರಮವನ್ನು ಭೂಮಿ ಕರೆ ತರುತ್ತಾಳೆ. ಇಡೀ ದಿನದ ಶ್ರಮದ ಫಲವಾಗಿ ಆಕೆಯ ಮುಖದಲ್ಲಿ ಕಾಣುವ ಶ್ರಮದ ಬೆವರ ಹನಿಗಳು ಆಕೆಯನ್ನು ವಿಶ್ವಸುಂದರಿಯಂತೆ ಶೋಭಿಸುವ ಹಾಗೆ ಮಾಡಿವೆ ಎನ್ನುತ್ತಾರೆ ಕವಿ. ಹೀಗೆ ಅವ್ವಳ ಕುರಿತು ತುಂಬ ಸಶಕ್ತ ರೀತಿಯಲ್ಲಿ ಗಾಢ ಅನುಭೂತಿಯನ್ನುಂಟು ಮಾಡುವಂತಹ ಕವಿತೆ ಇದಾಗಿದೆ.

ಅವ್ವಳ ಕುರಿತು ಮಕಾನದಾರ ಅವರು ಇನ್ನೂ ಕೆಲವು ಕವಿತೆಗಳನ್ನು ಬರೆದಿದ್ದಾರೆ. ಲಾಂದ್ರದ ಬೆಳಕಲ್ಲಿ ಅವ್ವ, ಕೆಳಗಲ ಮನಿ ಮಾಬವ್ವ, ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ? ಅವ್ವ ನಡೆದೇ ಬಿಟ್ಟಳು ಎಂಬ ಕವಿತೆಗಳು ಕೂಡ ನಿಮ್ಮನ್ನು ಸೆಳೆಯುತ್ತವೆ. ಅಪ್ಪ ನ ಕುರಿತು ಕೂಡ ಅಪ್ಪ ಎಂಬ ಕವಿತೆಯು ನಿಮಗೆ ಅಪ್ಪನ ಕುರಿತಾದ ಗಾಢ ಅನುಭೂತಿಯನ್ನು ಒದಗಿಸುತ್ತದೆ. ಆದರೆ ಮಕಾನದಾರ ಅವರ ಕಾವ್ಯ ವಿಶಿಷ್ಟವಾದುದು. ಯಾಕೆಂದರೆ ಈಗಾಗಲೇ ನಾನು ತಿಳಿಸಿದಂತೆ ಅವರ ಈ ಅಕ್ಕಡಿಸಾಲು ಕವನ ಸಂಕಲನದಲ್ಲಿ ಏನಿದೆ ಏನಿಲ್ಲ? ಅನ್ನೋ ಥರ ಇಲ್ಲಿ, ಸೂಫಿ ಅನುಭಾವವನ್ನು ತಮ್ಮ ಕವನಗಳ ಮೂಲಕ ಕಟ್ಟಿ ಕೊಡುತ್ತಾರೆ. ಬುದ್ಧ ಬುರಡಿ, ಮದೀನದ ಬೆಳಕು, ಅಪ್ಪಣ್ಣನಿಗೊಂದು ಮನವಿ, ಕರುನಾಡ ಕನಕ, ಸಂತನ ಕರೆ, ಕನಕನೇಕಾಗಿ, ಭೀಮದೀಪ, ಪುಟ್ಟರಾಜ, ಹೀಗೆ ಹಲವು ಜನ ಪುಣ್ಯ ಪುರುಷರ ಕುರಿತು ಬರೆಯುತ್ತಲೇ ಅವರೊಂದಿಗೆ ಸಂವಾದಕ್ಕೆ ಇಳಿಯುವ ಕವಿ ಪ್ರಸಕ್ತ ದಿನಮಾನಗಳಲ್ಲಿ ಹಾಳಾಗಿ ಹೋಗಿರುವ ಮನುಷ್ಯನ ನೈತಿಕತೆ, ಸೌಹಾರ್ದತೆ, ಜವಾಬ್ದಾರಿ, ಮೊದಲಾದ ವಿಷಯಗಳ ಕುರಿತು ಮನೋಜ್ಞವಾಗಿ ಬರೆಯುತ್ತಾರೆ. ಶರಣರು, ಸಾಧುಗಳು, ವಚನಕಾರರು, ಸೂಫಿಗಳು, ಸಿದ್ಧರು ಹೀಗೆ ಭಕ್ತಿ ಪಂಥ ಸೂಫಿಜಂ ನ ಶಕ್ತಿಯಿರುವ ನಾಡಿನಿಂದ ಬಂದ ಮಕಾನದಾರ ಅವರು ಈ ಎಲ್ಲ ತತ್ವಾದರ್ಶಗಳನ್ನು ತಮ್ಮ ರಚನೆಯ ಮೂಲಕ ನಮಗೆ ಉಣಬಡಿಸುತ್ತಾರೆ. ಸ್ವತಃ ತಮ್ಮ ಮನೆತನದ ಹಿರೀಕರಲ್ಲಿ ಈ ಹಿಂದೆ ಆಗಿ ಹೋದ ಸೂಫಿಗಳ ಸಾಂಸ್ಕೃತಿಕ ಬೇರುಗಳು ಮಕಾನದಾರ ಅವರಲ್ಲಿ ಗಾಢವಾಗಿ ಉಳಿದಿವೆ. ಹಾಗೆ ಉಳಿದಿವೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಅವರು ತಮ್ಮ ಹಲವು ಕವಿತೆಗಳಲ್ಲಿ ದೇವರು ಧರ್ಮದ ಅಸ್ತಿತ್ವವನ್ನು ವಿಮರ್ಶೆ ಮಾಡುತ್ತಲೇ ಭಕ್ತಿ ಶ್ರದ್ಧೆ ಎಂಬ ತಮ್ಮ ಅನುಭಾವವನ್ನು ಓದುಗರಿಗೆ ತಮ್ಮ ಕವಿತೆಗಳ ಮೂಲಕ ದಾಟಿಸುತ್ತಾರೆ. ದೇವರು ಧರ್ಮ, ಮತ್ತು ಧಾರ್ಮಿಕತೆಯನ್ನು ಸಂಕೇತಕ್ಕೆ ಸೀಮಿತಗೊಳಿಸಿದ ಮನುಷ್ಯನ ಸಂಕೀರ್ಣತೆಯನ್ನು ಅವರ ಮಾಯವಾದ ದೇವರು ಕವಿತೆಯಲ್ಲಿ ಕಾಣಬಹುದು.

ಇನ್ನು ಪ್ರೇಮ ಕವಿತೆಗಳಂತೂ ಈ ಕವನ ಸಂಕಲನದಲ್ಲಿ ಭೋರ್ಗರೆವ ನದಿಯಂತೆ ಹರಿದಿವೆ. ತತ್ವ ಅನುಭಾವ, ಜೀವನಾನುಭವದ ಕುರಿತು ಕವಿ ಬರೆದಿರುವ ಕವಿತೆಗಳು ಮತ್ತು ಪ್ರೇಮ ಕವಿತೆಗಳು ಒಂದಕ್ಕೊಂದು ಸ್ಪರ್ಧೆಗಿಳಿದಿವೆ ಎನ್ನುವ ರೀತಿಯಲ್ಲಿ ಇವೆ. ಈ ಪ್ರೇಮ ಕವಿತೆಗಳಲ್ಲಿ ಚಿಗುರೊಡೆದು ಬಾ, ಕಣ್ಣ ಬಟ್ಟಲು, ಒಂದು ಹಿಡಿ ಕರುಣೆ, ಹೊಸ ಹೆಜ್ಜೆ ಹಾಕುತ ಬಾ, ಜೊತೆಗೂಡಿ ಎಳೆಯೋಣ, ಕಾಣೆಯಾದ ಇನಿಯ, ಪ್ರೇಮದ ನೂಲು, ಪ್ರೇಯಸಿಯ ದುವಾ, ಪ್ರೇಮ ಪತ್ರಗಳ ಲೆಕ್ಕ, ಒಲವ ಚಿತ್ತಾರ, ಪ್ರೀತಿ, ತಾಕೀದಿ, ಕಾವ್ಯ ಕನ್ನಿಕೆ, ಸಖಿ, ಬಾಡದರಿಲಿ ಸುಗಂಧ, ಪ್ರೇಮ ಮಳೆ, ಆದರೆ, ಹೂ ಹಡದಿ ಹಾಸುವೆ, ಆಕಾಶವಲ್ಲವೆ ಅವಳ ಹಾಡು, ನಿನಗ್ಯಾರು ಸಾಟಿ?, ಒಲವ ಕಡಲಲಿ ಪುಟ್ಟ ಹಾಯಿದೋಣಿ ಹೀಗೆ ಪಟ್ಟಿ ಸಾಗುತ್ತಲೇ ಹೋಗುತ್ತದೆ.

ಕಾವ್ಯ ರಚನೆಯಲ್ಲಿ ತೊಡಗಿರುವ ಪ್ರಾಥಮಿಕ ಹಂತದಲ್ಲಿರುವವರು ಓದಲೇಬೇಕಾದ ಕೃತಿ ಇದು. ಮಾತ್ರವಲ್ಲದೇ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಮಕಾನದಾರ ಅವರು ಕವಿತೆಗಳನ್ನು ರಚಿಸಿರುವುದು ಅವರ ಹೆಗ್ಗಳಿಕೆ. ಉತ್ತರ ಕರ್ನಾಟಕ ಗ್ರಾಮೀಣ ಭಾಷೆ ಅದರಲ್ಲೂ ಉರ್ದು ಬಾಷೆಯ ಪದಗಳನ್ನು ಮಕಾನದಾರ ಸುಲಲಿತವಾಗಿ ಬಳಸಿದ್ದಾರೆ. ಭಾಷೆಯನ್ನು ಸಮರ್ಥವಾಗಿ ದುಡಿಸಿದ್ದಾರೆ. ಅಕ್ಕಡಿ ಸಾಲು ಎಂದರೆ ಸಿರಿಧಾನ್ಯಗಳನ್ನು ಮಿಶ್ರಬೆಳೆಯಾಗಿ ಬೆಳಯುವ ಪದ್ಧತಿಯನ್ನು ಅಕ್ಕಡಿ ಸಾಲು, ಅಥವಾ ಅಕ್ಕಡಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಮಳೆಯಾಶ್ರಿತ ಕೃಷಿಕರು ಈ ಮಿಶ್ರಬೆಳೆಯನ್ನು ಹೆಚ್ಚು ಅವಲಂಬಿತರು. ಈ ಅಕ್ಕಡಿ ಸಾಲಿನಲ್ಲಿ ಬೆಳೆಯುವ ಬೆಳೆಯನ್ನು ಮಾರುವುದಕ್ಕಿಂತ ಮನೆ ಬಳಕೆಗೆ ಅದರಲ್ಲೂ ನೆರೆ ಹೊರೆಯವರಿಗೆ ಸಂಬಂಧಿಕರಿಗೆ ಸ್ನೇಹಿತರಿಗೆ ಹಂಚುವುದು ವಾಡಿಕೆ. ಈ ಕ್ರಿಯೆಯಲ್ಲಿ ಸಾಕಷ್ಟು ಅರ್ಥಗಳನ್ನು ಹುಡುಕಬಹುದಾಗಿದೆ. ಮಿಶ್ರ ಬೆಳೆ ಬೆಳೆಯುವದನ್ನು ದೇಶದ ವಿವಿಧತೆ ಸಂಕೇತಿಸಿದರೆ, ಹಂಚಿಕೊಂಡು ತಿನ್ನುವುದು ಸೌಹಾರ್ದತೆಯನ್ನು ಸಂಕೇತಿಸುತ್ತದೆ. ಅದೇ ರೀತಿ ಮಕಾನದಾರ ಅವರ ಅಕ್ಕಡಿ ಸಾಲು ಭಾರತದ ವೈವಿಧ್ಯತೆ ಏಕತೆ ಮತ್ತು ಸೌಹಾರ್ದತೆಯ ಸಂದೇಶಗಳನ್ನೇ ಸಾರುತ್ತದೆ. ನಾನು ಓದಿದ ಉತ್ತಮ ಕೃತಿಗಳಲ್ಲಿ ಒಂದು ಎಂದು ತುಂಬ ಸಂತೋಷದಿಂದ ಹೇಳುತ್ತೇನೆ.


ಡಾ. ಹಸೀನಾ ಹೆಚ್ ಕೆ

2 thoughts on “ಎ ಎಸ್. ಮಕಾನದಾರ ಕೃತಿ “ಅಕ್ಕಡಿ ಸಾಲು” ಅವಲೋಕನ ಡಾ. ಹಸೀನಾ ಹೆಚ್ ಕೆ ಅವರಿಂದ

  1. ಮಾನ್ಯರೆ,
    ಅಕ್ಕಡಿ ಸಾಲು ಕೃತಿ ಅವಲೋಕನ ಮಾಡಿದ ಹಿರಿಯ ಸಾಹಿತಿ ಡಾ. ಹಸೀನಾ ಮೇಡಂ ಅವರಿಗೆ ಹಾಗೂ ಸಂಗಾತಿ ಬಳಗಕ್ಕೆ ಅಭಾರಿ ಯಾಗಿದ್ದೇನೆ

Leave a Reply

Back To Top