ಕಾವ್ಯ ಸಂಗಾತಿ
ಮಧುಸೂದನ ಮದ್ದೂರು ಕವಿತೆ-
ಸಾವು ಎಂದರೆ ಗೊತ್ತಿಲ್ಲ…
ನನಗೆ ಸಾವು ಎಂದರೆ ಗೊತ್ತಿಲ್ಲ…
ನಾನು ಹಾಲುಗಲ್ಲದ ಹಸುಳೆ..
ಅದೆಲ್ಲೋ ದೂರದಲ್ಲಿ ಶೆಲ್ ಸಿಡಿಯುತ್ತಿದೆ..
ಈಗಷ್ಟೆ ದೊಡ್ಡ ಶಬುದ…
ನನಗೆ ಆ ಶಬುದು ಗೊತ್ತಿಲ್ಲ..
ಬೆಚ್ಚುವೆ ಅಷ್ಟೆ…
ನಾ ಎರಡು ವರುಷದ ಹಸುಳೆ..
ಈಗಷ್ಟೆ ಜಗತ್ತಿಗೆ ಕಣ್ಣಾಗಿದ್ದೇನೆ…
ಇದ್ಯಾನಾಗುತ್ತಿದೋ
ನನಗಂತೂ ಗೊತ್ತಿಲ್ಲ..
ಅಮ್ಮ ಚೀರುತ್ತಿದ್ದಾಳೆ.
ಅಪ್ಪ ಶರಪರ ತಿರುಗುತ್ತಿದ್ದಾನೆ ಅಷ್ಟೆ..
ನನ್ನ ಒಡಲ ಹಸಿವಿಗೆ ಹಾಲು ಹುಡುಕಿತ್ತಿದ್ದಾನೋ?
ಬ್ರೆಡ್ ತಡುಕುತ್ತಿದ್ದಾನೋ ಗೊತ್ತಿಲ್ಲ…
ನನ್ನ ಕಂಗಳಲೀ ಇಂದಿಗೂ ಬದುಕುವ ಭರವಸೆಯಿದೆ…
ಧರ್ಮವಂತೆ.. ಧರ್ಮವೇ ದೊಡ್ಡದಂತೆ…
ದೊಡ್ಡದು ಚಿಕ್ಕದು ನನಗೆ ಗೊತ್ತಿಲ್ಲ…
ನಮ್ಮ ಅಮ್ಮನ ಮೊಲೆ ಹಾಲು ಸಿಕ್ಕರೆ ಸಾಕು…
ನನಗಷ್ಟೆ ಸಾಕು…
ಕುಡಿಯುತ್ತೇನೆ..
ಬೆಚ್ಚಗೆ ಅಮ್ಮನ ಮಡಿಲಿನಲಿ ಮಲಗುತ್ತೇನೆ…
ಮಧುಸೂದನ ಮದ್ದೂರು.