ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ-
ಮೌನ ಮುರಿದ ಭಾವ
ಮೌನವು ಮಾತಾಡಿ ಒಳಗೊಳಗೆ ಹೇಳಿತು
ಇಷ್ಟೊಂದು ಹಿಂಸೆ ಕೊಟ್ಟು ಮೌನವನು ಮೌನವಾಗಿಸಿದರೆ ಮೌನದ ಬೆಲೆಗೂ ಬೆಲೆ ಇಲ್ಲ
ಸಹನೆಯ ಕಟ್ಟೆಗೆ ಮೌನ ಲೇಪಿಸದೆ
ಸಾಂತ್ವನದ ನುಡಿಗೆ ಶರಣಾಗಿದಿರು
ಮೌನವೇನು ಅಷ್ಟು ಅಗ್ಗವಲ್ಲ
ಮೌನಕೂ ಮಿತಿಯಿದೆ ಎಂದು ಅರಿತು
ಮೌನದ ಬೆಲೆಗೂ ಬೆಲೆ ಇದೆ ಎಂದು ಸಾಬೀತುಪಡಿಸು
ಮೌನದಲಿ ಎಲ್ಲವನು ನುಂಗಿ ಕರಗಿಸಬೇಡ
ಮೌನಕೆ ಯಾಕೆ ಇಷ್ಟೊಂದು ಸೆರೆವಾಸ
ಮೌನವೇ ರೊಚ್ಚಿಗೆದ್ದು ಅಂತರಾಳದ ಕದವಮುರಿದು ಮೌನಕೂ ಕೂಡ ಮಿತಿಯಿದೆ ಎಂದು ಪಿಸುನುಡಿಯಿತು
ಸಹನೆಗೂ ಮಿತಿಯಿದೆಎಂದು ತೋರಿಸು
ಇಲ್ಲವಾದರೆ ಕಡಲಿನಂತೆ ಬೋರ್ಗರಿವೆ
ಭೂಮಂಡಲವ ಒಡೆದು ಕಂಪಿಸುವೆ
ಕೆಂಡದಾ ಮಳೆ ಸುರಿಸಿ ಜಾಲಾಡುವೆ
ಸಹನೆಯ ಜೊತೆ ಸರಸ ಬೇಡ
ಮೌನದ ವೇದನೆ ಅರಿಯದೆ
ಮೂಕನಾಗಿಸುವ ಮಾಲೀಕರ
ದಬ್ಬಾಳಿಕೆಗೆ ಕೆಲವೊಮ್ಮೆಯಾದರೂ
ಸೆಟೆದುನಿಲ್ಲು
ಇಲ್ಲವಾದರೆ ಮೌನವೇ ಕ್ರಾಂತಿ ಮಾಡೀತು
ಮತ್ತೇರಿಸುವ ಮುತ್ತಿನಂತಹ ಮಾತುಗಳಿಗೆ
ಮರುಳಾಗದಿರು ಮನವೆ ಎಂದು ಮೌನ
ತಿವಿ ತಿವಿದು ಮೌನವನು ಜಾಗ್ರತೆಗೊಳಿಸಿ
ಮೌನದ ಮೂಲೆಯಲಿ ಭಾವಗಳು ಸಂಭಾಷಣೆ ನಡೆಸಿದವು.
ಲಲಿತಾ ಪ್ರಭು ಅಂಗಡಿ
.
ಅರ್ಥಪೂರ್ಣ ಭಾವ