ಭಾವಯಾನಿ-ನಾನೂ ಮತ್ತು ಕನ್ನಡಿ

ಕಾವ್ಯ ಸಂಗಾತಿ

ಭಾವಯಾನಿ

ನಾನೂ ಮತ್ತು ಕನ್ನಡಿ

ನನಗೂ ಕನ್ನಡಿಗೂ ಅಪರಿಮಿತ ನಂಟು
ಅದೆಷ್ಟೋ ಸಲ ಸುಮ್ಮನೆ ಮುಂದೆ ನಿಂತು
ಅತ್ತು ಬಿಟ್ಟಿದ್ದೇನೆ
ಹರಿವ ಕಂಬನಿಗೆ ಆನಂದ ಭಾಷ್ಪ ಎಂಬ ಹೆಸರಿಟ್ಟು ನಕ್ಕುಬಿಟ್ಟಿದ್ದೇನೆ
ನನ್ನೊಳಗಿನ ಭಾವಾಲಾಪಗಳನ್ನು ಮುಚ್ಚಿಡುವ ಪ್ರಯತ್ನದಲ್ಲಿ
ಪ್ರತೀ ಸಲ ಸೋಲುವಾಗಲೂ
ಕನ್ನಡಿ ಅನುಕಂಪದ ನೋಟ ಬೀರಿದಂತಾಗಿ
ತಲೆ ತಗ್ಗಿಸಿದ್ದೇನೆ
ಆದರೂ ಒಣ ಜಂಭ ನನ್ನದು,
ಸೋತಿಲ್ಲ ಅನ್ನುವ ಹಾಗೆ
ಮತ್ತೆ ತುಟಿಗಳಿಗೆ ನಗುವಿನ ಬಣ್ಣ ಹಚ್ಚುತ್ತಿರುತ್ತೇನೆ!!

ದಿನ ಬೆಳಗಾದರೆ ಬದುಕಲ್ಲಿ ಬಂದವರ ಜೊತೆಗೆಲ್ಲ
ಭಾವಗಳ ನೈಜತೆಯನ್ನು ಹುಡುಕುವ ಯತ್ನಕ್ಕೆ ಬಿದ್ದು ಬಿಡುತ್ತೇನೆ
ಬದುಕು… ಬರಿಯ ಕೊಂಡು ಕೊಳ್ಳುವಿಕೆಯ ಸಂತೆ
ಅರ್ಥವಾದಾಗಲೆಲ್ಲ, ಅದೆ ಕನ್ನಡಿ ಆಪ್ತ ಸಂಗಾತಿಯಾಗುತ್ತದೆ
ಹುಚ್ಚು ಹುಡುಗಿ ಅನ್ನುವಂತೆ ನಗು ಬೀರುತ್ತದೆ!!

ನಾಟಕೀಯ ನಡೆಗೊಮ್ಮೆ
ಪರದೆ ಎಳೆದು ಬಿಡಬೇಕು ಅನಿಸುತ್ತದೆ
ಜಗದ ಸಂತೆಯಲ್ಲಿ ಒಂಟಿ ನಾನು…
ಸ್ವಾರ್ಥ, ಮೋಸ ವಂಚನೆಗಳ ಬಲೆಯೊಳಗೆ
ಹುಡುಕುತ್ತಾ ಹೊರಟಷ್ಟು
ಬರಿಯ ಮುಖವಾಡಗಳೇ ಕಾಣುತ್ತವೆ
ನಿಜ ಒಲವು ಕನ್ನಡಿಯೊಳಗಿನ
ನಿಧಿಯಾಗುತ್ತದೆ!!


ಭಾವಯಾನಿ

Leave a Reply

Back To Top