ಡಾ ಮೀನಾಕ್ಷಿ ಪಾಟೀಲ್-ಸಂಜೆ ಮೊಗ್ಗು

ಕಾವ್ಯಸಂಗಾತಿ

ಡಾ ಮೀನಾಕ್ಷಿ ಪಾಟೀಲ್-

ಸಂಜೆ ಮೊಗ್ಗು

ಸಂಜೆಯಲಿ ಮೊಗ್ಗಾಗಿ ಬಿರಿದು
ಮುಂಜಾವಿನಲಿ ಅರಳಿ
ಕಂಪು ಸೂಸುವ ನಿನ್ನ ಗುಣ
ಬಂದೀತೆ ಮನುಜರಿಗೆ

ರವಿ ಕಿರಣ ಸೋಂಕೆ
ಉದಯರಾಗದಿ ಮೈ ಬಿಚ್ಚಿ
ಬಿಸಿಲೇರಿ ಬಂದಾಗ
ಸೊರಗಿದ ನಿನ್ನ ಮುಖ ನೋಡಲಾಗದು

ಹಸಿ ಮೊಗ್ಗಿನಲಿ ಮೈ ಅರಳಿ
ಅರೆದೆರೆದ ದಳಗಳು
ಎಲ್ಲೆಡೆಗೂ ಸೂಸುವ ಸುಗಂಧ
ನಿನ್ನ ನೋಡಲು ಬಲು ಅಂದ

ಮೊಗ್ಗಾಗಿ ಹಲವು ದಿನ
ಅರಳುತ್ತ ಅನುದಿನ
ಮೆರೆಯುವುದು ಲತೆಯಲಿ
ಅನುಗಾಲವು ಋತುವಿನಲಿ

ಜಾಜಿ ಮಲ್ಲಿಗೆ ಸೂಜಿ ಮಲ್ಲಿಗೆ
ದುಂಡು ಮಲ್ಲಿಗೆ
ಶ್ರಾವಣ ಮಲ್ಲಿಗೆ
ಹೆಸರುಗಳು ವಿಧವಿಧ ಗುಣವೊಂದೇ

ಅರೆ ದಿನದ ಕಿರಿಬಾಳು
ನಗುನಗುತ ಸಾಗುವುದು
ಕಿರಿದವಧಿಯಲಿ ಸಾರ್ಥಕ
ಬದುಕು ನಿನ್ನದು

ನೀನೇ ಮಾದರಿ ಹುಲು ಮಾನವರಿಗೆ
ಬಿರಿದರಳಿದ ಹೂವಂತೆ
ಕಿರಿ ಬಾಳಿನಲೂ ಮಲ್ಲಿಗೆಯ
ಸುವಾಸನೆಯ ಬೀರುವಂತಿರಬೇಕು


ಡಾ ಮೀನಾಕ್ಷಿ ಪಾಟೀಲ್

One thought on “ಡಾ ಮೀನಾಕ್ಷಿ ಪಾಟೀಲ್-ಸಂಜೆ ಮೊಗ್ಗು

  1. ಸಂಜೆ ಮೊಗ್ಗು…. ಕವನದ ತುಂಬ ಅದರ ಪರಿಮಳ ಬೀರಿ… ತನ್ನ ಮಹತ್ವವನ್ನೂ ಸಾರುತ್ತ ಹೊರಟಿದೆ…

    ಸುಶಿ

Leave a Reply

Back To Top