ಒಮ್ಮೆ ತಿರುಗಿ ನೋಡು ನನ್ನ
ಕೊನೆಯ ತಿರುವು ಬರುವ ಮುನ್ನ.
ವಿಷ್ಣು ಭಟ್ ಹೊಸ್ಮನೆ
ನನ್ನ ಮನಸ್ಸು ಅವಳು ತಿರುಗಿ ನೋಡಲೇಬಾರದು. ಮುಂದೆ ಎಂದಿಗೂ ಸಂಧಿಸದ ಹಾದಿಯಲ್ಲಿ ನಾನು ಮತ್ತು ಅವಳು ಸಾಗುತ್ತ ಇರಬೇಕು ಅಂದುಕೊಂಡಿತ್ತು. ಅವತ್ತು ತಿರುಗಿ ನೋಡದೇ ಹೋದರೂ ಎರಡು ದಿನ ಬಿಟ್ಟು ಮತ್ತೆ ಅವಳು ಬಂದಿದ್ದಳು. ಅವಳನ್ನು ಮತ್ತೆ ನೋಡಿದೆ ಎಂಬೊಂದು ಖುಷಿ ಬಿಟ್ಟರೆ ಮತ್ತೇನೂ ನನ್ನಲ್ಲಿ ಹುಟ್ಟಲಿಲ್ಲ. ಆದರೆ ಅವಳು ಎದೆ ತುಂಬ ಪ್ರೀತಿಯನ್ನು ಹೊತ್ತು ತಂದಿದ್ದಳು. ಅವಳು ಕಾದುಕಾದು ಕೇಳಿದ್ದು ಒಂದೇ ಮಾತು “ನನ್ನನ್ನು ಪ್ರೀತಿಸುತ್ತೀಯಾ? ಪ್ಲೀಸ್..” ಇದು ನನಗೆ ಅನಿರೀಕ್ಷಿತ. “ಇಲ್ಲ” ಎಂದು ಬಿಟ್ಟೆ. ಎರಡು ದಿನ ತಲೆ ಕೆಟ್ಟುಹೋಗಿತ್ತು. ಈ ನಿರಾಕರಣೆಗೆ ಕಾರಣವಿರಲಿಲ್ಲ. ಎಷ್ಟು ನೊಂದುಕೊಂಡಳೋ? ಇಲ್ಲ ಎನ್ನುವುದಕ್ಕಾದರೂ ಕೊನೆಯ ಪಕ್ಷ ಎರಡು ದಿನ ಸಮಯ ಕೊಡು ಎಂದು ಬಿಡಬಹುದಿತ್ತು. ಮತ್ತೆ ಎರಡು ದಿನ ಬಿಟ್ಟು ನನ್ನ ಬಳಿ ಬಂದು ನಿಂತಿದ್ದಳು. ಈ ಬಾರಿ ಅವಳು ಕೇಳಲಿಲ್ಲ; ಹೇಳಿದಳು. “ನೀನು ನನ್ನನ್ನು ಪ್ರೀತಿಸಲೇ ಬೇಕು, ಇಲ್ಲ ಅನ್ನಬೇಡ” ಎನ್ನುತ್ತ ನನ್ನ ಕೈಯನ್ನು ಎಳೆದು ಹಿಡಿದುಕೊಂಡು ನಿಂತೇ ಇದ್ದಳು; ಕಣ್ಣಲ್ಲಿ ನೀರು ತುಂಬಿತ್ತು. ಅವಳೆದೆಯಲ್ಲಿ ಮೊಗೆದಷ್ಟೂ ಪ್ರೀತಿ. ನಾನು ಒಪ್ಪಿಕೊಂಡೆ. ನನ್ನ ಹಣೆಗೊಂದು ಮುತ್ತಿಕ್ಕಿ ಹೊರಟು ಹೋದಳು. ನನ್ನಲ್ಲಿ ನಿಜವಾಗಿ ಪ್ರೀತಿ ಹುಟ್ಟಿತ್ತಾ? ಅವಳನ್ನು ನಿರಾಕರಿಸಲಾಗದೇ ಒಪ್ಪಿಕೊಂಡೇನಾ? ಅಥವಾ ಒಳ ಮನಸ್ಸಿನಲ್ಲಿ ಅವಳನ್ನು ಇಷ್ಟ ಪಡದೆ ಒಪ್ಪಿಕೊಳ್ಳಲು ಸಾಧ್ಯವಾ? ಎಂದು ಕೇಳಿಕೊಳ್ಳುತ್ತಾ ಹೋದೆ. ಎಲ್ಲವೂ ಗೊಂದಲ. ಮುಂದೇನು? ಎಂಬ ಪ್ರಶ್ನೆ. ಪ್ರೀತಿಗೆ ಕಾರಣಗಳನ್ನು ಹುಡುಕಬಾರದು; ಪ್ರೀತಿ ಬೇಗನೆ ಸತ್ತು ಬಿಡುತ್ತದೆ. ನಾನೂ ಪ್ರೀತಿಸಿದೆ; ಮುಂದಿನದನ್ನು ಯೋಚಿಸದೆ.
*
“ಇನ್ನು ಹದಿನೈದು ದಿನಕ್ಕೆ ನನ್ನ ಮದುವೆ. ನನ್ನನ್ನು ಹುಡುಕಿಕೊಂಡು ಮನೆಯ ತನಕ ಬರಬೇಡ. ನಮ್ಮದು ಮರ್ಯಾದಸ್ಥ ಕುಟುಂಬ. ನೀನು ಬಂದರೂ ನೀನು ಯಾರೆಂದು ಗೊತ್ತಿಲ್ಲ ಎಂದೇ ಹೇಳುವ ಪರಿಸ್ಥಿತಿಯಲ್ಲಿ ನಾನಿದ್ದೇನೆ. ಹೇಳಿದರೂ ನಿನಗೆ ನನ್ನನ್ನು ಕೊಟ್ಟು ನನ್ನಪ್ಪ ಮದುವೆ ಮಾಡುವುದಿಲ್ಲ. ನೀನು ನನ್ನನ್ನು ಪ್ರೀತಿಸಿದ್ದು ನಿಜವೇ ಆಗಿದ್ದರೆ ನನ್ನನ್ನು ಮರೆತು ಬಿಡು. ಸಾಧ್ಯವಾದರೆ ಕ್ಷಮಿಸಿಬಿಡು.”
ಇದು ಅವಳ ಕೊನೆಯ ಮಾತು. ಅದೂ ಫೋನಿನಲ್ಲಿ. ಅವತ್ತೇ ಅವಳ ಮೊಬೈಲ್ ನಂಬರ್ ಬದಲಾಗಿತ್ತು. ನನಗೆ ಸಿಟ್ಟು ಬರಬೇಕಿತ್ತು. ಆದರೆ ಅಳು ಬರುತ್ತಿತ್ತು. ಗಂಡಸು ಅಳಬಾರದಂತೆ. ನೋವು ಮತ್ತು ಸಾವಿಗೆ ಗಂಡು ಹೆಣ್ಣೆಂಬ ಭೇದವಿಲ್ಲ. ಪ್ರೀತಿ ಸತ್ತು ಶವವಾಗಿ ಬಿದ್ದ ಮೇಲೆ, ಅಳುವೊಂದೇ ಉಳಿದ ಭಾವ. ಕಣ್ಣಿಗೆ ಕಣ್ಣಿಟ್ಟು ಬಂದವಳೇ ಕೊಟ್ಟ ಕಣ್ಣೀರು. ನನ್ನ ನೆನಪುಗಳೊಂದಿಗೆ ನಾನು ಏಕಾಂಗಿ.
*
ಅವಳಲ್ಲಿ ಕೇಳಬೇಕಿತ್ತು. ಈ ಪ್ರೀತಿಯನ್ನು ಹೇಗೆ ಕೊಂದುಕೊಳ್ಳಲಿ? ನೀನಾದರೂ ಹೇಗೆ ಅಷ್ಟು ಸುಲಭವಾಗಿ ಸಾಯಿಸಿಬಿಟ್ಟ? ಕಾರಣವೇ ಅಲ್ಲದ ಕಾರಣಗಳನ್ನು ಕೊಟ್ಟು ಹೊರಟು ಬಿಟ್ಟೆ? ಆದರೆ ನಿಜವಾದ ಕಾರಣಗಳನ್ನು ಕೇಳಿಯಾದರೂ ಏನು ಮಾಡಲಿ? ಬನದ ತುಂಬ ಘಮವ ಪಸರಿಸಿ ತೊಟ್ಟು ಕಳಚಿಕೊಂಡು ಬಿದ್ದ ಹೂವಿನಂಥಾದ ಪ್ರೀತಿಗೆ ಇನ್ನು ಏನೆಂದು ಕರೆಯಲಿ? ಕರೆಯದೇ ಕಾಯದೇ ಬಂದವಳು ತೊರೆದ ರೀತಿಗೆ ನಾನೀಗ ನನ್ನ ಪ್ರೀತಿಯನ್ನು ಕೊಲ್ಲಬೇಕು. ಆದರೆ ಅವಳ ನೆನಪುಗಳು ಸಾಯುವುದಿಲ್ಲ.
ಕನಸುಗಳನ್ನು
ಕಸಿದುಕೊಂಡು
ನೆನಪುಗಳನ್ನು
ಬಿಟ್ಟುಹೋಗಿದ್ದು ಸರಿಯೇನು?
ಎಷ್ಟೊಂದು ಕನಸುಗಳು ಹುಟ್ಟಿದ್ದವು. ನಾನು ಅವಳು ಒಟ್ಟೊಟ್ಟಿಗೆ ಪೇರಿಸಿ ಇಟ್ಟ ಕನಸುಗಳಿಗೆ ಲೆಕ್ಕವಿಲ್ಲ. ಇವತ್ತು ಎಲ್ಲವೂ ಹಾಗೇ ಸುರುಳಿ ಸುತ್ತಿಕೊಂಡು ನೆನಪಿನ ಮೂಟೆಯಾಗಿ ಮನದೊಳಗೆ ಕಾಡುತ್ತಿವೆ. ನೆನಪಿನ ಮೊಟ್ಟೆಯೊಡೆದ ಕವನ ಕಣ್ಣಿರು. ಅವಳ ನೆನಪುಗಳಿಂದ ಬಿಡಿಸಿಕೊಳ್ಳಲು ಮಾಡಿದ ಸಾಹಸಗಳು ಸಾವಿರಾರು. ಒಂದಿಷ್ಟು ದಿನ ಯಾರ ಜೊತೆಗೂ ಮಾತನಾಡಲಿಲ್ಲ. ಅದಕ್ಕಿಂತ ಹೆಚ್ಚಾಗಿ ನನ್ನ ದನಿಯಲ್ಲಿ ನೋವಿತ್ತು. ಇವತ್ತಿನಿಂದ ಅವಳು ನನ್ನ ಜೊತೆಗಿಲ್ಲ ಎಂದುಕೊಳ್ಳುವಾಗಲೆಲ್ಲ ಎದೆನೋವು. ಹೃದಯಯವೂ ಅಷ್ಟೊಂದು ಭಾರ ಎಂಬುದು ಅರಿವಾದದ್ದೇ ಅವಳು ಹೋದ ಬಳಿಕ. ಈ ನೋವು ಸಾವಿಗಿಂತಲೂ ತೀವ್ರ ಮತ್ತು ಭಯಾನಕ. ಎದೆಗೆ ಚುಚ್ಚಿಕೊಂಡೇ ನಲಿವ ಮುಳ್ಳುಗಳು. ನನಗೆ ಒಂದು ಸಂಶಯ ಕಾಡುತ್ತಿದೆ; ಈ ಪ್ರೀತಿ ಎಂದರೇ ನೆನಪುಗಳಾ? ಅಥವಾ ಸತ್ತ ಕನಸುಗಳು ಭೂತವಾಗಿ ಕಾಡುವ ಬಗೆಯಾ? ಇವತ್ತಿನಿಂದ ಅವಳನ್ನು ಮರೆತು ಈ ನೋವುಗಳನ್ನೇ ಪ್ರೀತಿಸಬೇಕು.
ಅಂದು ನೀನಿತ್ತ
ಮುತ್ತಿನ ಅಮೃತ ಬಿಂದು
ಎದೆ ಚುಚ್ಚಿ ಕೊಲ್ಲುತಿದೆ
ನೀ ಮರಳ ಬಾರದೇ ಸಾವುಯುವುದರ ಒಳಗೆ.
ಅವಳನ್ನು ಕರೆಯುತ್ತಲೇ ಇದ್ದೆ. ಖಾಲಿ ಬಿದ್ದಿದ್ದ ಹೃದಯದಲ್ಲಿ ಉಳಿದುಕೊಂಡು ಈಗ ಅನಾಥವಾಗಿಸಿ ಹೋದದ್ದು ಅವಳಿಗೆ ಕಾಡದೇ ಹೋಯಿತೇಕೋ?
ಒಮ್ಮೆ ತಿರುಗಿ ನೋಡು ನನ್ನ
ಕೊನೆಯ ತಿರುವು ಬರುವ ಮುನ್ನ
‘ಒಮ್ಮೆ ತಿರುಗಿ ನೋಡು, ಈಗ ಹುಟ್ಟಿಕೊಂಡ ಪ್ರೀತಿ ಏಳೂ ಜನ್ಮಗಳಿಗೆ ಸಾಕು. ನಾನು ನಾನಾಗಿ, ನೀನು ನೀನಾಗಿ, ನಿನ್ನೊಳಗೆ ನಾನೂ ನನ್ನೊಳಗೆ ನೀನೂ, ಇಬ್ಬರೂ ಒಂದೇ ಆಗಿ ಬದುಕಿ ಬಿಡೋಣ. ಈ ಪ್ರೀತಿ ಸಹಿ ಇಲ್ಲದ ಒಪ್ಪಿಗೆ, ಬಾ ಹಿಂದಿರುಗು’ ಎಂದು ಹೇಳಲು ಕಾಯುತ್ತಲೇ ಇದ್ದೆ. ಅವಳು ಹೋಗಿಯಾಗಿತ್ತು. ತಿರುಗಬಾರದ ತಿರುವ ದಾಟಿ; ಎದೆಯೊಳಗಿನ ತಂತಿಯ ಮೀಟಿ.
*
ಅವಳು ಬರೆದ ಪತ್ರಗಳ ರಾಶಿಯಲ್ಲಿ ನಾನು ಕಳೆದು ಹೋಗಿದ್ದೆ. ಮರೆಯಲೇ ಬೇಕೆಂದು ನಿರ್ಧರಿಸಿದೆ. ಅವಳು ಕೊಟ್ಟ ಗಿಫ್ಟುಗಳು ನನ್ನ ಕಣ್ಣ ದಂಡೆಯನ್ನು ಚುಚ್ಚುತ್ತಿದ್ದವು. ಎದೆನೋವು ಸ್ವಲ್ಪ ಕಡಮೆಯಾದಂತೆ ಕಂಡುಬಂದ ಬೆಳದಿಂಳಿಲ್ಲದ ಒಂದು ರಾತ್ರಿ ಅವಳು ಕೊಟ್ಟಿದ್ದೆಲ್ಲವನ್ನು ಮನೆಯ ಅಂಗಳದಲ್ಲಿ ಚೆಲ್ಲಿ ಬೆಂಕಿಕೊಟ್ಟೆ. ಎದೆಯೊಳಗೆ ಉರಿ ಹೆಚ್ಚಿತು. ಎದೆ ಬರಿದಾಗಲೇ ಇಲ್ಲ. ಆ ರಾತ್ರಿ ನಿದ್ರೆ ಬರಲಿಲ್ಲ. ಮರೆಯಲಾಗದ ಹೊತ್ತಲ್ಲಿ ದ್ವೇಷಿಸಬೇಕೆಂಬ ಹಠಕ್ಕೆ ಬಿದ್ದೆ. ಈ ಪ್ರೀತಿ ದ್ವೇಷಿಸಲೂ ಬಿಡಲೊಲ್ಲದು. ಮತ್ತೆ ಎದೆನೋವು. ಎದೆಯನ್ನು ಹಗುರ ಮಾಡಿಕೊಳ್ಳಲೇ ಬೇಕಿತ್ತು. ಒಂದು ಡೈರಿಯನ್ನು ಎತ್ತಿಕೊಂಡು ಗೀಚಿದೆ. ಪದಪದಗಳ ನಡುವೆ ಕಾಡಿದ ಅವಳು ವಿರಹದ ವಿರಾಟ್ ರೂಪ.
ಕನವರಿಕೆಯ ಹೋಯ್ದಾಟದಲ್ಲಿ ಒದ್ದೆಯಾಗುತ್ತಲೇ ಇದ್ದೆ.
ಕತ್ತಲಲ್ಲಿ
ಬಿಟ್ಟು ಹೋಗ ಬೇಡ
ನನಗೆ ಭಯ ಇರುವುದು
ಹಗಲಿನಲ್ಲೇ..
ತೊರೆದವರ ಬಗೆಗೆ ಬರೆದರೆ ಬರುವರೇನು? ಬರೆಯುತ್ತ ಹೋದಂತೆ ನಾನು ಖಾಲಿಯಾಗಬೇಕಿತ್ತು. ಆದರೆ ನೆನಪುಗಳು ಮತ್ತೆಮತ್ತೆ ಸುತ್ತಿಕೊಂಡವು. ಮೊದಲು ಈ ನೆನಪುಗಳಿಂದ ಬಿಡುಗಡೆ ಹೊಂದಬೇಕೆಂಬ ನಿರ್ಧಾರಕ್ಕೆ ಬಂದೆ.
ಸಾಯದ ನೆನಪುಗಳಿಗೆ ಅಹಂಕಾರ ಜಾಸ್ತಿ.
ಅವಳು ಬಂದಲ್ಲಿಂದ ಹೋದಲ್ಲಿಯ ತನಕ ಬರೆದೆ. ಆ ಡೈರಿ ಕಣ್ಣಿಗೆ ಬಿದ್ದಾಕ್ಷಣ ಮತ್ತೆ ಮತ್ತೆ ಸಾಯುತ್ತಿದ್ದೆ. ಮತ್ತೊಂದು ಕಪ್ಪಗಿನ ರಾತ್ರಿಗಾಗಿ ಕಾದೆ. ಒಂದೊಂದೇ ಪುಟವನ್ನು ಹರಿದು ಬೆಂಕಿಗೆ ಹಾಕುತ್ತ ಪೂರ್ತಿಯಾಗಿ ಸುಟ್ಟುಬಿಟ್ಟೆ.
ನೆನಪುಗಳು ಸುಟ್ಟು ಹೋಗಲಿಲ್ಲ. ಮಂದಾಗ್ನಿ ಎದೆಯೊಳಗೆ ಉರಿಯುತ್ತಲೇ ಇದೆ!
==========================================
ವಿಷ್ಣು ಭಟ್ ಹೊಸ್ಮನೆ.
ಪರಿಚಯ:
ಲಘು ಹಾಸ್ಯದ ಲೇಖನ ಮತ್ತು ಇತರ ಲೇಖನಗಳನ್ನು ಬರೆಯುವುದು, ಓದುವುದು ಹಾಗೂ ಚಿತ್ರ ಬಿಡಿಸುವುದು, ಜೇಡಿಮಣ್ಣಿನಲ್ಲಿ ಗಣಪತಿ ಮಾಡುವುದು ನನ್ನ ಹವ್ಯಾಸ. ಹುಟ್ಟಿದ ಊರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡೀಬೈಲ್ ಎಂಬ ಹಳ್ಳಿ. ಪ್ರಸ್ತುತ ಮಣಿಪಾಲ್ ಟೆಕ್ನೋಲೋಜೀಸ್ ಲಿಮಿಟೆಡ್ ನಲ್ಲಿ ಉದ್ಯೋಗಿ.
ಲಹರಿ ಅದ್ಭುತವಾಗಿದೆ.. ವಿಫಲ ಪ್ರೇಮದ ವಿರಹದ ಕಾವು ತುಳುಕುತ್ತಿದೆ ಪ್ರತಿ ಅಕ್ಷರದಲ್ಲು..
Thanks