ಕಾವ್ಯ ಸಂಗಾತಿ
ಬಾಗೇಪಲ್ಲಿ-
ಗಜಲ್
ತುಸು ರಮ್ಯ ಭಾವವ ದಾಖಲಿಸ ಯತ್ನಿಸುವೆಯಾ ಗಜಲ್ ಶೈಲಿಗಿಂತ ಚಂದವಾದ್ದು ಯಾವುದುಂಟು
ಚೂರು ಸತ್ವ ಭರಿತವಾದುದ ಬರೆಯಬೇಕೆ ಹೇಳು ನೀನು ವಿರಹಕಿಂತ ಭಾರವಾದ್ದು ಯಾವುದುಂಟು
ಸ್ವಲ್ಪ ಹಗುರಾದ್ದು ಬರೆಯೆ ಸಕಲರಿಗೆ ಸುಲಭ ಸಾಧ್ಯವಲ್ಲವೇ ಯೋಚಿಸಿ ಹೇಳು ಏನದೆಂದು
ಜಗವೆಲ್ಲಾ ಜಾಲಿಸಿ ನೋಡೆ ಚೆಲುವೆಯ ತುಟಿ ಮೇಲಿನ ಕಿರು ನಗೆಗಿಂತ ಹಗುರಾದ್ದು ಯಾವುದುಂಟು
ಪ್ರಚಲಿತ ವಿದ್ಯಮಾನ ಬರೆಯ ಹೊರಟರೆ ಅನಾಹುತವೇನೂ ಆಗೊಲ್ಲ ಮಧುಶಾಲಿನಿ
ಬೇರ್ಪಟ್ಟ ಪ್ರೇಮಿಗಳ ಮನದಾಳದ ನೋವ ಗಜಲ್ ಆಗಿಸುವುದಕಿಂತ ಕ್ಲಿಷ್ಟವಾದ್ದು ಯಾವುದುಂಟು
ಅಲಕ್ಷಿತ ಅಗಣ್ಯವಾದ ವಿಷಯವ ಹೆಕ್ಕಿ ತೆಗೆದು ಬರೆದು ಶಾಯರ್ ಆಗಲೂ ಬಹುದೇ ಗಾಲಿಬ್ ಸಾಬ್
ಈ ಪ್ರಕೃತಿಯಲಿ ಅಪ್ರಮುಖ ಅನವಶ್ಯಕ ದೂಳಾದ ನನಗಿಂತ ಕ್ಷುಲ್ಲಕವಾದ್ದು ಯಾವುದುಂಟು
ಸುಗಂಧ ಪರಿಮಳ ಲೇಪಿಸಿದಂತೆ ತೋರುವ ಬರಹ ಸನ್ಮೋಹನಾಸ್ತ್ರದಂತೆ ಶ್ರೀ ಸಾಮಾನ್ಯರಿಗೆ
ಸುಳ್ಳು ಮಾತನು ಹಲವು ಬಾರಿ ಹೇಳುತ್ತಾ ಅದುಸತ್ಯ ಎನಿಸುವುದಕಿಂತ ಸುಲಭವಾದ್ದು ಯಾವುದುಂಟು.
ಅಗಾಧ ಬಾನು ಸಾಗರಾಳಗಳ ಬಗ್ಗೆ ಅರುಹಲು ವರ್ಣಮಯ ಪದಪುಂಜಗಳಿಂದ ಪ್ರಯತ್ನಿಸಲೇ
ಆತ್ಮಸಖಿಯ ಪ್ರೀತಿ ಪ್ರೇಮ ಅನುರಾಗ ಭರಿತ ಕಣ್ಣಾಲಿಗಳಿಗಿಂತ ಆಳವಾದ್ದು ಯಾವುದುಂಟು
ಕೃಷ್ಣಾ! ಗೀತೋಪದೇಶಕ ದೇವ ನಿನ್ನ ಮಹಿಮೆಯ ಬರೆಯಲು ಅನುವಾದೆ ತೋಚದೆ ಏನೂ!
ನಿನ್ನ ಜೀವನ ಚರಿತೆಯಲಿ ಬರುವ ಹಿರಿಯೆ ಗರತಿ ರಾಧೆಯ ಪ್ರೇಮಕಿಂತ ದೃಷ್ಯವಾದ್ದು ಯಾವುದುಂಟು
ಬಾಗೇಪಲ್ಲಿ