ಅಂಕಣ ಬರಹ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು
ಶ್ರೀ ಏಣಗಿ ಬಾಳಪ್ಪ
ನಡೆದಾಡುವ ರಂಗ ಭೂಮಿ ರಂಗ ಭೀಷ್ಮ ಶ್ರೀ ಏಣಗಿ ಬಾಳಪ್ಪ
ರಂಗಭೂಮಿಗೆ ಕಿರೀಟ ಪ್ರಧಾನ ಮಾಡಿ ರಂಗಭೂಮಿಯ ಅನಭಿಷಕ್ತ ದೊರೆ ಎನಿಸಿಕೊಂಡ ಏಣಗಿ ಬಾಳಪ್ಪನವರು ನಮ್ಮ ಬಾಳಿ ಬದುಕಿದ ಧೀಮಂತ ರಂಗ ನಾಯಕ. ರಂಗಭೂಮಿಯ ಭೀಷ್ಮ ಏಣಗಿ ಬಾಳಪ್ಪನವರು. ರಂಗಭೂಮಿಯ ವಿಶ್ವಕೋಶ, ನಾಟ್ಯಭೂಷಣ, ನಾಡೋಜ, ಶತಾಯುಷಿ. ಇಂತಹ ಮಹಾನ್ ವ್ಯಕ್ತಿತ್ವ ಹೊಂದಿದ ನಟ ಅಸಾಮಾನ್ಯ ವ್ಯಕ್ತಿಯು ಸಾಮಾನ್ಯ ಜನರಲ್ಲಿ ಸಾಮಾನ್ಯವಾಗಿ ಬಾಳುತ್ತ ತಮ್ಮ
ನಟನಾ ಕೌಶಲದಿಂದ ರಂಗಭೂಮಿಯನ್ನು ಆಳಿ ಬಾಳಿದ ರೀತಿ ಅನುಪಮ ಅನನ್ಯ, ಅಪ್ರತಿಮ ರಂಗಭೂಮಿಯ ಮಹಾನ್ ಚೇತನ ಶ್ರೀಯುತ ಏಣಗಿ ಬಾಳಪ್ಪನವರ ಜೀವನವನ್ನು, ಸಾಧನೆಯ ಹಾದಿಯನ್ನು ಅವರು ನಡೆದು ಬಂಡ ದಾರಿ ಕಂಪನಿ ನಾಟಕಗಳಲ್ಲಿನ ಅನೇಕ ಆವಾಂತರ ಪ್ರಯೋಗಗಳ ಜೀವಂತ ಸಾಕ್ಷಿಯಾಗಿ ನಿಂತ ದಂತ ಕಥೆ. ಕನ್ನಡ ವೃತ್ತಿರಂಗಭೂಮಿ ಕಂಡ ಅವಿಸ್ಮರಣೀಯ ಕಲಾವಿದ.ಸಾವಿಲ್ಲದ ಶರಣ
ಜನನ, ಬಾಲ್ಯ ಮತ್ತು ವೃತ್ತಿಜೀವನ
ಬೆಳಗಾವಿ ಜಿಲ್ಲೆಯ ‘ಸವದತ್ತಿ’ ತಾಲ್ಲೂಕಿನ ‘ಏಣಗಿ’ ಗ್ರಾಮದ ಒಕ್ಕಲುತನದ ಕುಟುಂಬದಲ್ಲಿ 1914ರಲ್ಲಿ ಜನಿಸಿದ ಬಾಳಪ್ಪನವರ ಬಾಲ್ಯ ಅಷ್ಟೇನೂ ಸುಖಕರವಾಗಿರಲಿಲ್ಲ. ಲೋಕುರ ಮನೆತನದ ಬಾಳಮ್ಮ ಹಾಗು ಕರಿಬಸಪ್ಪನವರ ಮಗನಾಗಿ ಜನಿಸಿದರು. ತಂದೆಯವರನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡರು. ಹಣದ ಕೊರತೆಯಿಂದ ಮುಂದೆ ಶಾಲೆಗೆ ಸೇರಲು ಸಾಧ್ಯವಾಗಲಿಲ್ಲ. ಅವರ ಪಾಲಿಗೆ ಬೇಸಾಯ ಹಾಗೂ ಪಶುಪಾಲನೆ ಅವರ ಆದ್ಯತೆಯಾಯಿತು. ಹಳ್ಳಿಯ ಬಯಲಾಟ,ದೊಡ್ಡಾಟದ ಬಗ್ಗೆ ಒಲವು ಬೆಳೆಯಿತು. ಲವ-ಕುಶ ನಾಟಕ ನೋಡಿದ ಮೇಲೆ ಅವರ ಮನಸ್ಸೆಲ್ಲಾ ನಾಟಕದ ಪಾತ್ರಗಳಲ್ಲೇ ಸುತ್ತುತ್ತಿತ್ತು. ಆ ಆಟವನ್ನು ಆಯೋಜಿಲ್ಸಿದ ಗುರುಗಳನ್ನು ಬಾಳಪ್ಪನವರ ಮೈಕಟ್ಟು ಬಹಳ ಆಕರ್ಷಣೀಯವಾಗಿತ್ತು. ಸುಮಧುರ ಕಂಠದ ಸೇರುವಿಕೆಯಿಂದ ಅವರ ಪಾತ್ರಗಳಲ್ಲಿ ಪ್ರಭುದ್ಧತೆ ಕಾಣತೊಡಗಿತು. ತಮ್ಮ ೧೦ ನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಅವರು ರಂಗಮಂಚದ ಸವಿಕಂಡರು. ಅವರ ಮೈಮಾಟ ಸ್ತ್ರೀಪಾತ್ರಗಳಿಗೆ ಹೇಳಿಮಾಡಿಸಿದಂತಿತ್ತು. ಚಿಕ್ಕೋಡಿ ಸಿದ್ಧಲಿಂಗಸ್ವಾಮಿಗಳ ಕಂಪೆನಿಯ ’ಮಹಾನಂಜನಾಟಕದಲ್ಲಿ ಬಾಲನಟನಾಗಿ ಪ್ರಹ್ಲಾದನಾಗಿ, ಬಹಳ ಅದ್ಬುತ ಅಭಿನಯವನ್ನು ಕೊಟ್ಟರು. ಕೌಸಲ್ಯೆಯ ಪಾತ್ರದಲ್ಲಿ ಅವರು ಬಹಳ ಯಶಸ್ಸನ್ನು ಕಂಡರು. ಕಂಪೆನಿ ಮುಚ್ಚಿದಮೇಲೆ ‘ಅಬ್ಬಿಗೇರಿ ಕಂಪೆನಿ’ಗೆ ಸೇರಿ ಅಲ್ಲಿ ಬಾಲನಟನಾಗಿ ಕೆಲಸಮಾದಿದರು. ಅಲ್ಲಿ ಪ್ರದರ್ಶನಕ್ಕೆ ಸಿದ್ಧವಾಗುತ್ತಿದ್ದ ‘ಕಿತ್ತೂರು ರಾಣಿ ಚೆನ್ನಮ್ಮ ನಾಟಕ’ ಬ್ರಿಟಿಷ್ ಸರಕಾರದ ವಿರೋಧದಿಂದ ಲೈಸೆನ್ಸ್ ಕಳೆದುಕೊಂಡು ಕಂಪೆನಿ ನಿಂತಿತು. ಊರಿಗೆ ಹೋಗಿ ನೆಲೆಸಲು ಮನಸ್ಸುಬರಲಿಲ್ಲ. ಸಿದ್ಧಲಿಂಗಸ್ವಾಮಿಗಳೇ ನಡೆಸುತ್ತಿದ್ದ ಮತ್ತೊಂದು ‘ಮಾರಿಕಾಂಬಾ ನಾಟಕ ಮಂಡಲಿ’ಗೆ ಅವರು ಸೇರಿದರು. ಚಿಕ್ಕವರಿದ್ದಾಗ ಊರಿನ ಭಜನಾ ಮಂಡಳಿಯಲ್ಲಿ ಸೇರಿಕೊಂಡು ಹಾಡುತ್ತಿದ್ದರು. ಗುರುಸಿದ್ದಯ್ಯ ಎಂಬುವವರು ಮೊತ್ತಮೊದಲಿಗೆ ಇವರನ್ನು ಸ್ಟೇಜ್ ಹತ್ತಿಸಿದರು. ಊರಲ್ಲೆ ನಡೆದ ‘ಲವ-ಕುಶ’ ಎಂಬ ನಾಟಕದಲ್ಲಿ ಲವನ ಪಾತ್ರ ಮಾಡುವ ಮೂಲಕ ರಂಗ ಪ್ರವೇಶವಾಯ್ತು. ಊರಿನ ಕಲಾವಿದರನ್ನೇ ಸೇರಿಸಿಕೊಂಡು ಆಡಿದ ‘ಪಾದುಕಾಪಟ್ಟಾಭಿಷೇಕ’ ನಾಟಕ ತುಂಬ ಯಶಸ್ವಿ ಆಯಿತು. ನಾಟಕ ಮಾಸ್ತರರಾಗಿದ್ದ ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು ಬಾಳಪ್ಪನವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಉದ್ಧರಿಸಿದರು. ಸ್ತ್ರೀ ಪಾತ್ರದ ಮೂಲಕವೇ ಇವರು ಪ್ರಸಿದ್ಧರಾದವರು. ‘ಕಿತ್ತೂರು ರುದ್ರಮ್ಮ’ ನಾಟಕದ ರುದ್ರಮ್ಮನ ಪಾತ್ರ ಇವರ ಮೊಟ್ಟಮೊದಲ ಸ್ರೀಪಾತ್ರ.
ಬದುಕಿನ ಪಾಠಶಾಲೆಯಲ್ಲಿ “ರಂಗಭೂಮಿಯ ನಡೆದಾಡುವ ವಿಶ್ವಕೋಶ” ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೀವನದಲ್ಲಿ ಬಾಲ್ಯದಿಂದಲೇ ಅನೇಕ ಕಷ್ಟಕೋಟಲೆಗಳನ್ನು ಅನುಭವಿಸಿದರು. ತಂದೆ ಹಾಗೂ ಒಡಹುಟ್ಟಿದವರನ್ನು ಕಳೆದುಕೊಂಡ ಇವರು ತಮ್ಮ
ತಾಯಿಯೊಂದಿಗೆ ಬೇರೊಬ್ಬರ ಹೊಲದಲ್ಲಿ ದುಡಿದು ತಿನ್ನುವಂತಹ ಪ್ರಸಂಗ ಬಂದಿತು. ಕಿತ್ತು ತಿನ್ನುವ ಬಡತನ, ಜೀವನದ ಕುಲುಮೆಯಲ್ಲಿ ಬೇಯುತ್ತಲೇ ಬದುಕು ಬಂಗಾರವಾಗಿಸಿಕೊಂಡಂತಹ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
ಅವರ ಬಾಲ್ಯ ಜೀವನದ ಘಟನೆಯೊಂದು ಹೀಗಿದೆ. ಬಾಳಪ್ಪನವರು ಆರೇಳು ವರ್ಷದ ಬಾಲಕನಿರುವಾಗ ನಡೆದಂತಹ ಘಟನೆ ಇದು. ಒಮ್ಮೆ ಬೈಲಹೊಂಗಲದಲ್ಲಿ ನಡೆಯುವ ಸಂತೆಗೆ ಅವರ ತಾಯಿ ಹೋದಾಗ ಅವ್ವನನ್ನು ಕಾಣಲು ಹಸಿವಿನಿಂದ ಬಳಲುತ್ತಿದ್ದ ಬಾಲಕ ಬಾಳಪ್ಪ ಹೊರಟಾಗ ಸುರಿಯುವ ಮಳೆಯಲ್ಲಿ ಕಾಲುಜಾರಿ ಕಾಲುವೆಗೆ ಬಿದ್ದರಂತೆ. ಮೇಲೆ ಬರಲು ಶಕ್ತಿ ಇರದೇ ನಿತ್ರಾಣದಿಂದ ತೇಲುತ್ತ ಹೊರಟ ಅವರನ್ನು ಅಲ್ಲಿಯೇ ಸಮೀಪದ ಕಟ್ಟೆಯ ಮೇಲೆ ಕುಳಿತ ಹಿರಿಯರೆಲ್ಲ ಅವರನ್ನು ಮೇಲೆತ್ತಿ ಉಪಚರಿಸಿ, “ಬಾಳಪ್ಪ, ನೂರು ವರ್ಷ ಬಾಳಪ್ಪ” ಎಂದು ಹರಸಿದರಂತೆ. ಆ ಹಿರಿಯರ ಹರಕೆಯಂತೆಯೇ ಮುಂದೆ ಬಾಳಪ್ಪನವರು ಶತಾಯುಷಿಗಳಾಗಿ ಬಾಳಿ ಬದುಕಿ ಜೀವನ ಸುಮಧುರ ಕಂಠಶ್ರೀ, ಸ್ತ್ರೀ ಪಾತ್ರಕ್ಕೆ ಹೇಳಿ ಮಾಡಿಸಿದಂಥ ಮೈಕಟ್ಟು, ನಟನಾ ಕೌಶಲ ಎಲ್ಲವೂ ಇವರಿಗೆ ದೇವರು ಕೊಟ್ಟ ದೇಣಿಗೆಗಳಾಗಿದ್ದವು. ಸಂಘರ್ಷದ ಜೀವನ ಪಥದಲ್ಲಿ ನಡೆಯುತ್ತ ಸಾಗಿದ ಅವರು ಅನೇಕ ಕಷ್ಟಕೋಟಲೆಗಳನ್ನು ಅನುಭವಿಸಿದವರು. ಮುಂದೆ ಜೀವನದಲ್ಲಿ ಐಶ್ವರ್ಯ ಬಂದಾಗ ಅವರಿಗೆ ಗರ್ವ ಬರಲಿಲ್ಲ, ದುಡ್ಡಿನ ಮದವಿರಲಿಲ್ಲ. ಶಿವ ಕೊಟ್ಟದ್ದನ್ನೆಲ್ಲವನ್ನು ವಿನೀತರಾಗಿಯೇ ಸ್ವೀಕರಿಸಿ ನಿಗರ್ವಿಗಳಾಗಿ ಬಾಳಿದ ಜೀವವದು. ಜೀವನದಲ್ಲಿ ಯಾವ ವ್ಯಸನಕ್ಕೂ ಬಲಿಯಾಗದೇ ಸರಳ, ಸಾತ್ವಿಕ ಜೀವನವನ್ನು ನಡೆಸಿದ ನಾಟ್ಯಭೂಷಣರವರು. ಬದುಕು ಬಿತ್ತಿದ ಬೇವನ್ನೇ ಬೆಲ್ಲವಾಗಿಸಿ, ಎಲ್ಲರೊಡನೆ ಮೆಲ್ಲುತ್ತ ಎಲ್ಲೆಡೆಯೂ ಸಲ್ಲುವವರಾಗಿ ಬೆಳೆದು ನಿಂತು ಬದುಕಿದಂತಹ ಹಿರಿಯ ಚೇತನ ಅವರು. ಚಿಕ್ಕೋಡಿಯ ಶಿವಲಿಂಗ ಸ್ವಾಮಿಗಳು ಬಾಳಪ್ಪನವರ ನಾಟಕದ ಗುರುಗಳು. ‘ಪಾದುಕಾ ಪಟ್ಟಾಭಿಷೇಕ’ ನಾಟಕದಲ್ಲಿ ಬಾಲಕಲಾವಿದನಾಗಿ ಮುಂದೆ ಭರತನ ಪಾತ್ರದಲ್ಲಿ ಅಭಿನಯಿಸಿ ಗರುಡ ಸದಾಶಿವರ ಪ್ರೀತಿ ಭರವಸೆಗಳಿಗೆ ಪಾತ್ರರಾದರು. ಮುಂದೆ 1946 ರಲ್ಲಿ ತಮ್ಮದೇ ಆದ “ಕಲಾವೈಭವ ನಾಟ್ಯಸಂಘ” ವೆಂಬ ನಾಟಕ ಸಂಸ್ಥೆಯನ್ನು ಹುಟ್ಟು ಹಾಕಿದರು. ಪೌರಾಣಿಕ, ಐತಿಹಾಸಿಕ ನಾಟಕಗಳ ಜೊತೆಜೊತೆಯಲ್ಲೇ ಸಮಕಾಲೀನ ಸಮಸ್ಯೆಗಳ ಬಗ್ಗೆ ನಾಟಕ ಬರೆಯಿಸಿ, ಹೊಸ ಪ್ರಯೋಗ ನಡೆಸಿ, ಅವುಗಳನ್ನು ಪ್ರದರ್ಶನ ಮಾಡಿದರು. ಜಗಜ್ಯೋತಿ ಬಸವೇಶ್ವರ, ಕಿತ್ತೂರು ರುದ್ರಮ್ಮ, ರಾಜಾಹರಿಶ್ಚಂದ್ರ, ಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ, ಶಾಲಾ ಮಾಸ್ತರ ಇನ್ನೂ ಮುಂತಾದ ನಾಟಕಗಳು ಬಹಳ ಪ್ರಸಿದ್ಧಿಯನ್ನು ಪಡೆದವು. ಹೇಮರೆಡ್ಡಿ ಮಲ್ಲಮ್ಮ ಹಾಗೂ ಕಿತ್ತೂರು ರುದ್ರಮ್ಮ ನಾಟಕದಲ್ಲಿ ಅವರು ಮಾಡಿದ ಸ್ತ್ರೀಪಾತ್ರಗಳು ಜನಾನುರಾಗಿಗಳಾದವು. ಸುಮಧುರ ಕಂಠಶ್ರೀಯಿಂದ ಹೊರಹೊಮ್ಮಿದ ಹಾಡುಗಳು ಪ್ರೇಕ್ಷಕರ ಹೃನ್ಮನಗಳನ್ನು ಸೂರೆಗೊಂಡವು.
ಸ್ತ್ರೀಪಾತ್ರದಲ್ಲಿ ರಂಜಿಸಿದರು
ಉತ್ತರ ಕನ್ನಡದ ಸಿರಸಿಯಲ್ಲಿ ’ವೀರರಾಣಿ ರುದ್ರಮ್ಮ’ ಪ್ರದರ್ಶನವಾಯಿತು. ಅದರ ನಾಯಕಿಯ ಪಾತ್ರ ಅಪಾರಮನ್ನಣೆಗೆ ಪಾತ್ರವಾಯಿತು. ಒಂದು ದಿನ ನಾಯಕಿಯ ಪಾತ್ರಧಾರಿಣಿ ಮುನಿಸಿಕೊಂಡು ನಾಟಕದಲ್ಲಿ ಭಾಗವಹಿಸಲು ನಿರಾಕರಿಸಿದಳು. ಸ್ವಾಮಿಗಳು ಹರಸಾಹಸಮಾಡಿ ಒಪ್ಪಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆಗ ಬಾಳಪ್ಪನವರಿಗೆ ರಾಣಿಯ ವೇಶ ಹಾಕಿ ರಂಗಮಂಚದಮೇಲೆ ಕಳಿಸಲಾಯಿತು. ಮಹಿಳಾ ವೇಶದಲ್ಲಿ ಖಡ್ಗಹಿಡಿದು ರಂಗವನ್ನು ಪ್ರವೇಶಿಸಿದ ಬಾಳಪ್ಪನವರ ಅಭಿನಯ ಅತ್ಯಂತ ಸಮರ್ಪಕವಾಗಿತ್ತು. ಸಭಿಕರೆಲ್ಲಾ ಅವರ ಅಭಿನಯದಿಂದ ಹರ್ಷಿತರಾದರು. ಈನಾಟಕ ಸಂಸ್ಥೆಯೂ ಸ್ವಲ್ಪದಿನಗಳ ಬಳಿಕ ಬಂದಾದರೂ ರಾಣಿಯ ಪಾತ್ರದಿಂದ ಬಾಳಪ್ಪನವರು ಅತಿ ಜನಪ್ರಿಯರಾದರು. ಪದೇ ಪದೇ ಬಂದಾಗುತ್ತಿದ್ದ ವೃತ್ತಿ ರಂಗಮಂದಿರಗಳ ವಹಿವಾಟು ಬಾಳಪ್ಪನವರಿಗೆ ಸರಿಬೀಳಲಿಲ್ಲ. ‘ಹುಚ್ಚಪ್ಪ ಸೂಡಿ’ಯವರ ಜೊತೆಗೂಡಿ ಅವರೊಂದು ಹೊಸ ‘ನಾಟಕ ಮಂಡಾಳಿಯನ್ನು ರಚಿಸಿದರು. ಅದೇ ‘ಗುರುಸೇವಾ ಸಂಗೀತ ನಾಟಕ ಮಂಡಳಿ’. ’ಹೇಮರೆಡ್ಡಿ ಮಲ್ಲಮ್ಮ ಎಂಬ ನಾಟಕ ಕರ್ನಾಟಕದ ಮನೆಮಾತಾಯಿತು. ‘ಗುರುಸೇವಾ ಸಂಸ್ಥೆ’ಯ ವತಿಯಿಂದ ಪುರಾಣ, ಐತಿಹಾಸಿಕ ಕಥೆಗಳ ಆಧಾರದಮೇಲೆ, ಸಂಸ್ಥ್ಯೆ ಹಲವಾರು ನಾಟಕಗಳು ಪ್ರದರ್ಶಿತಗೊಂಡವು.
ಪರಕಾಯ ಪ್ರವೇಶ
ಅಣ್ಣ ಬಸವಣ್ಣನವರ ಬಗ್ಗೆ ಅಪಾರ ಭಕ್ತಿ, ಗೌರವ ಹೊಂದಿದ ಬಾಳಪ್ಪನವರು ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು. ಅಷ್ಟೊಂದು ತಾದಾತ್ಮ್ಯತೆ. ‘ಜಗಜ್ಯೋತಿ ಬಸವೇಶ್ವರ’ ನಾಟಕದ ಬಗ್ಗೆ ಹೇಳುವುದಾದರೆ ಇದರಲ್ಲಿ ಬಸವೇಶ್ವರ ಪಾತ್ರ ಮಾಡಿದ ಬಾಳಪ್ಪನವರನ್ನು ಹಗಲು ಹೊತ್ತಿನಲ್ಲಿ ಕಂಡ ಜನರೆಲ್ಲರೂ ಬಸವಣ್ಣನೆಂದೇ ಭಾವಿಸಿ ಕೈಮುಗಿದಿದ್ದಾರೆ. ಆ ಪಾತ್ರ ನೋಡಿದ ಬಹಳಷ್ಟು ಜನ ಅವರಿಗೆ ಸಾಷ್ಟಾಂಗ ನಮಸ್ಕಾರ ಕೂಡ ಮಾಡಿದ್ದಾರೆ. ಇವೆಲ್ಲವೂ ಬಸವಣ್ಣನಿಗೆ ಸಂದ ಗೌರವ ಎಂದು ಬಾಳಪ್ಪನವರು ವಿನೀತರಾಗಿ ನುಡಿಯುತ್ತಾರೆ. ಒಮ್ಮೆ ಜಗಜ್ಯೋತಿ ಬಸವೇಶ್ವರ ನಾಟಕ ಮುಗಿಸಿ ಮರುದಿನ ಬೆಳಿಗ್ಗೆ ಶ್ರೀ ಏಣಗಿ ಬಾಳಪ್ಪನವರು ಕಂಪನಿಯ ಪಕ್ಕದ ಚಹಾದ ಅಂಗಡಿಯಲ್ಲಿ ಚಹಾ ಕುಡಿಯುವಾಗ ಒಬ್ಬ ರೈತ ಅಯ್ಯ ಬಸವಣ್ಣ ಚಹಾ ಕುಡ್ಯಾಕ ಹತ್ತ್ಯಾನಾ ಎಂದಿದ್ದರಂತೆ. ಅಂದಿನಿಂದ ತಮ್ಮ ಜೀವನದ ಕೊನೆಯವರೆಗೂ ಶ್ರೀ ಏಣಗಿ ಬಾಳಪ್ಪನವರೂ ಚಹಾ ಕುಡಿಯಲಿಲ್ಲ.
“ಕಲಾವೈಭವದ ಕಲಾಯಾತ್ರೆ” ಯಲ್ಲಿ ‘ಜಗಜ್ಯೋತಿ ಬಸವೇಶ್ವರ’ ನಾಟಕದ ಪ್ರಯೋಗಗಳು ಸಿಂದಗಿ, ಬಾಗಲಕೋಟೆ, ಹುಬ್ಬಳ್ಳಿ, ಹೊಳೆಆಲೂರು ಊರುಗಳಲ್ಲಿ ದಾಖಲೆ ನಿರ್ಮಿಸಿದವು. ಹುಬ್ಬಳ್ಳಿಯಲ್ಲಿ 208 ಪ್ರಯೋಗಗಳಾದಾಗ ಬಾಳಪ್ಪನವರನ್ನು “ನಾಟ್ಯಭೂಷಣ” ಬಿರುದು ನೀಡಿ ಸನ್ಮಾನಿಸಿದರು. ಹೊರನಾಡಾದ ಮುಂಬಯಿಯಲ್ಲಿ ಕೂಡ ‘ಬಸವ ಸಮಿತಿ’ ಯವರು ‘ಕಲಾವೈಭವ’ ತಂಡವನ್ನು ಆಮಂತ್ರಿಸಿ, ಬಸವೇಶ್ವರ ಅಷ್ಟಶತಮಾನೋತ್ಸವ ಸಮಾರಂಭದ ನಿಮಿತ್ಯ ಅಂದಿನ ಕರ್ನಾಟಕದ ಮುಖ್ಯ ಮಂತ್ರಿಗಳಾದ ದಿ. ವೀರೇಂದ್ರ ಪಾಟೀಲರು ಬಾಳಪ್ಪನವರನ್ನು ಸನ್ಮಾನಿಸಿದರು. ಮುಂಬಯಿ ಕಲಾಭಿಮಾನಿಗಳು ಕಿತ್ತೂರು ಚೆನ್ನಮ್ಮ, ಜಗಜ್ಯೋತಿ ಬಸವೇಶ್ವರ, ಕ್ಕಮಹಾದೇವಿ ನಾಟಕಗಳನ್ನು ನೋಡಿ ಅಭಿನಂದಿಸಿ ಪ್ರೋತ್ಸಾಹಿಸಿದರು. ಬಸವೇಶ್ವರ ನಾಟಕಕ್ಕೆ ಮಂಗಲವಾದ ನಂತರ ಬಾಳಪ್ಪನವರು ಬಸವೇಶ್ವರ ಪಾತ್ರದಲ್ಲಿಯೇ ಮುಖ್ಯದ್ವಾರದ ಬಳಿ ಜೋಳಿಗೆ ಹಿಡಿದು ನಿಲ್ಲುತ್ತಿದ್ದರು. ಪ್ರೇಕ್ಷಕರು ಭಕ್ತಿಯ ಕಾಣಿಕೆ ಜೋಳಿಗೆಗೆ ಸಮರ್ಪಿಸುತ್ತಿದ್ದರು. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಬಸವೇಶ್ವರ ದೇವಸ್ಥಾನಕ್ಕೂ ಜೋಳಿಗೆಯ ಹಣ ಅರ್ಪಿಸಿದರು. ಈ ರೀತಿ ಸಂಗ್ರಹವಾದ ಹಣವನ್ನು ವಚನ ಪಿತಾಮಹ ದಿ. ಫ.ಗು. ಹಳಕಟ್ಟಿಯವರಿಗೆ ಹಾಗೂ ಧಾರವಾಡದ ರೆವರೆಂಡ್ ಉತ್ತಂಗಿ ಚೆನ್ನಪ್ಪನವರಿಗೆ ಅವರ ಆರ್ಥಿಕ ಸಂಕಷ್ಟದ ದಿನಗಳಲ್ಲಿ ನೀಡಿ ನೆರವಿನ ಹಸ್ತ ಚಾಚಿದ್ದರು. ಇದನ್ನುಅತ್ಯಂತ ವಿನೀತಭಾವದಿಂದ ಸಮಾಜದಿಂದ ಬಂದ ಹಣವನ್ನು ಸಮಾಜಕ್ಕೆ ನೀಡೆನು ಎನ್ನುವ ಅವರ ಧನ್ಯತಾ ಭಾವ ಕಂಡಾಗ ಅವರ ಘನವ್ಯಕ್ತಿತ್ವದ ಇನ್ನೊಂದು ಮುಖ ನಮಗೆ ಪರಿಚಯವಾಗುತ್ತದೆ . ಯಾವ ಊರಿನಲ್ಲಿ ಕ್ಯಾಂಪ್ ಮಾಡುತ್ತಿದ್ದರೋ ಅಲ್ಲಿಂದ ಹೊರಡುವ ಮೊದಲು ನಾಟಕ ಪ್ರಯೋಗವನ್ನು ಉಚಿತವಾಗಿ ಮಾಡಿ ಆ ಊರಿನ ಸಾರ್ವಜನಿಕ ಕಾರ್ಯಗಳಿಗಾಗಿ ನೀಡುತ್ತಿದ್ದರು. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಸಮರ್ಪಿಸಬೇಕೆಂಬ ಉದಾರಗುಣ ಅವರಲ್ಲಿತ್ತು. ಸಮಾಜದ ಅಂಧಕಾರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಾಡುವ ಕಾಯಕವನ್ನು ರಂಗಮಂಟಪದ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಲು ಅನುವು ಮಾಡಿಕೊಟ್ಟ ಪಾತ್ರ ಬಸವೇಶ್ವರರದು. ಒಂದು ಸಲ ಧಾರವಾಡದ ಮುರುಘಾಮಠದ ಮೃತ್ಯುಂಜಯ ಸ್ವಾಮಿಗಳು ‘ಜಗಜ್ಯೋತಿ ಬಸವೇಶ್ವರ’ ನಾಟಕ ನೋಡಲು ಬಂದಾಗ ನಡೆದಂತಹ ಒಂದು ಪ್ರಸಂಗವಿದು. ರಂಗದ ಪಕ್ಕದಲ್ಲೇ ಕುಳಿತ ಸ್ವಾಮಿಗಳು ಅನುಭವ ಮಂಟಪದ ಸನ್ನಿವೇಶ ನಡೆದಾಗ ಎದ್ದು ಬಸವೇಶ್ವರ ಪಾತ್ರಧಾರಿಗಳಾದ ಬಾಳಪ್ಪನವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದರಂತೆ. ಎಲ್ಲರೂ ಗಾಬರಿಯಾಗಿ ನಾಟಕ ನಿಲ್ಲಿಸಿ ಶ್ರೀಗಳನ್ನು ಆಸನದಲ್ಲಿ ಕೂಡ್ರಿಸಿ, “ಇದು ನಾಟಕರೀ ಅಪ್ಪಾರ……” ಎಂದಾಗ ಅವರು “ಹ್ಞೂಂ….. ಹ್ಞೂಂ….” ಅಂದರಂತೆ. ಮೃತ್ಯುಂಜಯ ಸ್ವಾಮಿಗಳು ಅಷ್ಟೊಂದು ಭಾವಪರವಶರಾಗಿ ತಲ್ಲೀನರಾಗಿದ್ದರಂತೆ. ನಟನೊಬ್ಬನು ತನ್ನ ನಟನಾ ಸಾಮರ್ಥ್ಯದಿಂದ ಪಾತ್ರದ ಪರಕಾಯ ಪ್ರವೇಶ ಮಾಡಿ ಪ್ರೇಕ್ಷಕನನ್ನು ತಲ್ಲೀನಗೊಳಿಸಿ ತಾದಾತ್ಮ್ಯದ ಕೊಂಡಿಯನ್ನು ಬೆಸೆದುದಕ್ಕೆ ಸಾಕ್ಷಿಯಾದ ಪ್ರಸಂಗವೆಂದೇ ಇದನ್ನು ಹೇಳಬಹುದು. ಹುಬ್ಬಳ್ಳಿಯಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ನಾಟಕದ 151 ನೆಯ ಪ್ರಯೋಗಕ್ಕೆ ಕರ್ನಾಟಕ ರಾಜ್ಯದ ಆಗಿನ ಮುಖ್ಯಮಂತ್ರಿ ದಿ. ಎಸ್. ನಿಜಲಿಂಗಪ್ಪನವರು ಬಂದಿದ್ದರು. 208 ಪ್ರಯೋಗಗಳನ್ನು ಕಂಡ ಯಶಸ್ವೀ ನಾಟಕ ‘ಜಗಜ್ಯೋತಿ ಬಸವೇಶ್ವರ’ ನಾಟಕವಾಗಿತ್ತು. ಬಸವೇಶ್ವರ ನಾಟಕದ ಮೂಲಕ ಶರಣರ ವಚನಗಳು ಪ್ರಚಾರವಾದವು. ಇದಕ್ಕಾಗಿಯೇ ಧಾರವಾಡದ ಮೃತ್ಯುಂಜಯ ಸ್ವಾಮಿಗಳು, ಸೊಲ್ಲಾಪುರ ಕಿರೀಟಮಠದ ಮೃತ್ಯುಂಜಯ ಸ್ವಾಮಿಗಳು, ಧಾರವಾಡದ ಕುಮಾರ ಸ್ವಾಮಿಗಳು ಬಾಳಪ್ಪನವರನ್ನು ಸನ್ಮಾನಿಸಿದರು. ಇದಕ್ಕಿಂತ ಮೊದಲು ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಮಾತ್ರ ಬಸವಣ್ಣನವರ ವಚನಗಳನ್ನು ಉದಾಹರಿಸುತ್ತಿದ್ದರು. ನಾಟಕಗಳಲ್ಲಿ ವಚನಗಳನ್ನು ಬಳಸಿದಾಗ ಅವುಗಳ ವ್ಯಾಪಕ ಪ್ರಚಾರವಾಯಿತು. ಅಕ್ಕಮಹಾದೇವಿಯ ವಚನ, “ಪುರುಷನ ಮುಂದೆ ಮಾಯೆ ಸ್ತ್ರೀ ಎಂಬ ಅಭಿಮಾನವಾಗಿ ಕಾಡಿತ್ತು ನೋಡಾ…..” ಬಿಜ್ಜಳನ ದರ್ಬಾರಿನ ಕಲಾವತಿ ಎಂಬ ಗಾಯಕಿ ಹಾಡುತ್ತಾಳೆ. “ಕಲ್ಯಾಣವೆಂಬ ಪ್ರಣತಿಯಲ್ಲಿ ಭಕ್ತಿರಸವೆಂಬ ತೈಲವನೆರೆದು ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತಯ್ಯ ಶಿವನ ಪ್ರಕಾಶ, ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯ ಅಸಂಖ್ಯಾತ ಪ್ರಮಥರು”. ಇನ್ನೊಂದು ಅಕ್ಕಮಹಾದೇವಿಯ ವಚನ, “ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತಯ್ಯಾ…..” ಈ ರೀತಿ ಇನ್ನೂ ಕೆಲವು ವಚನಗಳನ್ನು ಬಸವಣ್ಣ ನಾಟಕದಲ್ಲಿ ಸನ್ನಿವೇಶಕ್ಕೆ ಅನುಗುಣವಾಗಿ, ಸಂಗೀತ ಸಂಯೋಜನೆ ಮಾಡಿ, ಅಲ್ಲಲ್ಲಿ ಅಳವಡಿಸಿದ್ದರು. ಪ್ರೇಕ್ಷಕನಿಗೆ ಅಭಿನಯ, ಸಂಗೀತ, ಹಾಡು ಎಲ್ಲವನ್ನೂ ಒಂದೇ ಹರಿವಾಣದಲ್ಲಿ ಬಡಿಸಿ ರಸದೌತಣ ನೀಡಿದಂತಾಗಿತ್ತು. ಈ ರೀತಿ ಶರಣರ ವಚನಗಳು ಜನರ ಕಿವಿಯ ಮೇಲೆ ಬೀಳುತ್ತ ವಚನಗಳಿಗೆ ಪ್ರಚಾರ ದೊರೆಯಿತು. ಈ ರೀತಿ ಬಸವೇಶ್ವರ ನಾಟಕದ ಮುಖಾಂತರ ಜನಮಾನಸದಲ್ಲಿ ಶರಣರ ವಚನಗಳು ಮನೆಮಾಡಿ ಅವರ ನಾಲಿಗೆಯ ಮೇಲೆ ನಲಿದಾಡತೊಡಗಿದವು. ಈ ರೀತಿ ಬಾಳಪ್ಪನವರು ನಾಟಕಗಳ ಮುಖಾಂತರ ಸಮಾಜದಲ್ಲಿ ತಿಳುವಳಿಕೆ ನೀಡುತ್ತ ಅರಿವಿನ ಜ್ಯೋತಿಯನ್ನು ಬೆಳಗಿಸಿದರು. ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಜನರಿಗೆ ತಿಳಿಸಿ ಹೇಳುವುದರಲ್ಲಿಯೂ ಕೂಡ ರಂಗಭೂಮಿಯ ಪಾತ್ರ ಮಹತ್ವದ್ದಾಗಿತ್ತು. ಶಿವಲಿಂಗ ಸ್ವಾಮಿಗಳ ವೀರರಾಣಿ ಕಿತ್ತೂರ ಚೆನ್ನಮ್ಮ, ಗರುಡ ಸದಾಶಿವರಾಯರ ಎಚ್ಚಮ ನಾಯ್ಕ, ಹುಯಿಲಗೋಳ ಅಚ್ಯುತರಾಯರ ನರಗುಂದ ಬಂಡಾಯ ಮುಂತಾದ ನಾಟಕಗಳು ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಜನರಲ್ಲಿ ಅರಿವು ಬಿತ್ತುವುದರಲ್ಲಿ ರಂಗಭೂಮಿಯ ಮಹತ್ವದ ಕೊಡುಗೆಗಳಾಗಿವೆ ಎಂದರೆ ತಪ್ಪಾಗಲಾರದು. ಅಂದಿನ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಬಾಳಪ್ಪನವರ ನಾಟಕ ಕಂಪೆನಿ ಆಶ್ರಯತಾಣವಾಗಿತ್ತು. ಪೋಲೀಸರು ಬೆನ್ನು ಹತ್ತಿದಾಗ ಅವರು ಗಡ್ಡ ಮೀಸೆ ಹಚ್ಚಿಕೊಂಡು ನಾಟಕದ ಪಾತ್ರಧಾರಿಗಳಾಗಿ ವೇಷಧರಿಸಿ ಅವರಿಂದ ಪಾರಾಗುತ್ತಿದ್ದರು. ಅದಕ್ಕೆ ಯಾವಾಗಲೂ ಬ್ರಿಟಿಷ್ ಸರಕಾರದ ಕಣ್ಣು ಇವರ ಮೇಲೆ ಸದಾ ಇರುತ್ತಿತ್ತು. ನಾಟಕ ಎಂದರೆ ಅದು ಒಂದುಗೂಡಿ ಆಡುವ ಕಲೆಯಾಗಿತ್ತು.
“ಕಲಾವೈಭವ” ಎಂಬುದು ಒಂದು ಕುಟುಂಬವಾಗಿತ್ತು. ವೃತ್ತಿ ಮತ್ತು ಹವ್ಯಾಸಿ ಗಭೂಮಿಗಳೆರಡರ ಕಂದರ ಆಳವಾಗುತ್ತಲೇ ಸಾಗಿತು. ಈ ಸಮಸ್ಯೆ ಮೊದಲಿದ್ದುದೇ ಆದರೂ ಇವೆರಡು ರಂಗಭೂಮಿಗಳ ನಡುವೆ ಸಮನ್ವಯ ಸಾಧಿಸುವ ಬಾಳಪ್ಪನವರ ಪ್ರಾಮಾಣಿಕ ಪ್ರಯತ್ನಕ್ಕೆ ಯಶಸ್ಸು ದೊರೆಯಲಿಲ್ಲ. ಈ ಕಂದರ ಕಡಿಮೆ ಮಾಡುವ ಪ್ರಯತ್ನ ‘ಕಲಾವೈಭವ’ ತಂಡದಿಂದ ನಡೆದೇ ಇದ್ದವು. ಮಗ ನಟರಾಜ ನಾಟಕ ನಿರ್ದೇಶಕನಾಗಿ ಜಿ.ಟಿ. ಸ್ವಾಮಿಯವರು ಬರೆದ ಅಥಣಿ ಶಿವಯೋಗಿ ನಾಟಕದಲ್ಲಿ ಹವ್ಯಾಸಿ ರಂಗದ ತಂತ್ರಗಳನ್ನು ಅಳವಡಿಸಿ, ಹೊಸ ರಂಗಪರಿಕರಗಳೊಂದಿಗೆ ನಾಟಕ ಪ್ರದರ್ಶನ ನೀಡಿದಾಗ ಪ್ರೇಕ್ಷಕರ ಪ್ರತಿಕ್ರಿಯೆ ನಿರಾಶಾದಾಯಕವಾಗಿತ್ತು. ತಜ್ಞ ರಸಿಕ ಪ್ರೇಕ್ಷಕ ವರ್ಗ ವೃತ್ತಿರಂಗಭೂಮಿಯತ್ತ ಸಂಪೂರ್ಣ ಬೆನ್ನು ತಿರುಗಿಸಿದಾಗ “ಕಲಾವೈಭವ” ದ ಭವಿಷ್ಯದ ಮೇಲೆ ಗಾಢ ಪರಿಣಾಮವಾಯಿತು.
1983 ರಲ್ಲಿ ಕಲಾತಂಡದಲ್ಲಿ ತಾವು ಬೆಳೆಸಿ, ಪೋಷಿಸಿಕೊಂಡು ಬಂದ ಮೌಲ್ಯಗಳನ್ನು ಬಿಡಲು ಇಚ್ಛಿಸದ ಬಾಳಪ್ಪನವರು ಕಂಪೆನಿಯನ್ನು ಮುಚ್ಚಲು ತೀರ್ಮಾನಿಸಿದರು. ಬಾಳಪ್ಪನವರ ದೇಹಕ್ಕೂ ಮುಪ್ಪು ಆವರಿಸತೊಡಗಿತ್ತು, ಕಂಪೆನಿಯ ಕಲಾವಿದರಿಗೂ ವಯಸ್ಸಾಗಿತ್ತು. 36 ವರ್ಷಗಳ ಕಾಲದ ಆತ್ಮೀಯ ನಂಟಿನ ಗಂಟನ್ನು ಬಿಚ್ಚಿಕೊಂಡು ಹೋಗುವುದು ಅಷ್ಟು ಸುಲಭ ಸಾಧ್ಯವಾದ ಕೆಲಸವಾಗಿರಲಿಲ್ಲ. ಆದರೂ ಅದು ಅನಿವಾರ್ಯ ಅಗಲಿಕೆಯಾಗಿತ್ತು. ಕಲಾವಿದರಿಗೆಲ್ಲ ಪಗಾರ ಹಾಗೂ ಬಸ್ ಚಾರ್ಜ್
ಕೊಟ್ಟು ತಮ್ಮೂರು ಏಣಗಿಗೆ ಮರಳಿದರು ಬಾಳಪ್ಪನವರು. ತಮಗೆ ದೊರೆತ ಪ್ರಶಸ್ತಿ ಸನ್ಮಾನಗಳಿಗಿಂತ ಪ್ರೇಕ್ಷಕರಿಂದ ದೊರೆತ ಪ್ರಶಂಸೆ, ಪ್ರೋತ್ಸಾಹಗಳಿಂದ ಹೆಚ್ಚಿನ ಆನಂದ ದೊರೆತಿದೆ ಎಂದು ಪ್ರೇಕ್ಷಕ ವರ್ಗವನ್ನು ಮನದುಂಬಿ ನೆನೆದಿದ್ದಾರೆ. ಒಬ್ಬ ಕಲಾವಿದನಿಗೆ ದೊರೆತ ಪ್ರೋತ್ಸಾಹದ ಚಪ್ಪಾಳೆಗಿಂತ ಹೆಚ್ಚಿನ ಸನ್ಮಾನ, ಗೌರವ ಬೇರೊಂದಿಲ್ಲ ಅಲ್ಲವೇ.ಬಾಳಪ್ಪನವರು ತಮ್ಮ ಬಾಳನ್ನು ರೂಪಿಸಿದ ಸರ್ವ ಶ್ರೇಯಸ್ಸನ್ನು ಬಾಳಿನ ಕಣ್ಣಾಗಿರುವ ಹೆಣ್ಣಿನ ಜೀವಕ್ಕೇ ಅರ್ಪಿಸಿರುವುದು ಇಡೀ ಹೆಣ್ಣು ಕುಲಕ್ಕೇ ಸಂದ ಗೌರವವಾಗಿದೆ. ಅಂದರೆ ಅವರ ತಾಯಿ, ಹೆಂಡತಿ ಸಾವಿತ್ರಮ್ಮ, ಕಲಾವಿದೆ ಪತ್ನಿ ಲಕ್ಷ್ಮೀಬಾಯಿ ಹಾಗೂ ಮಗಳು (ಹೆಣ್ಣು ಮಕ್ಕಳು).
“ಮೂರು ವರ್ಷದ ಎಳೆ ಕಂದನನ್ನು ನೂರು ವರ್ಷ ಬಾಳು” ಎಂದು ಹರಸಿ, ಸಾಕಿ ಸಲುಹಿದ ಅವರ ಹೆತ್ತವ್ವ, ಊರಿನಲ್ಲಿ ಹೊಲ ಖರೀದಿ ಮಾಡಿ ಆಸ್ತಿಯನ್ನು ಬೆಳೆಸಿದರೆ, ಆ ಆಸ್ತಿಯನ್ನು ಉಳಿಸಿಕೊಳ್ಳಲು ಕಾರಣರಾದವರು ಹೆಂಡತಿ ಸಾವಿತ್ರಮ್ಮನವರು. ಮಕ್ಕಳನ್ನು ಸಾಕಿ ಸಲುಹುತ್ತ, ಬಿಸಿಯೂಟ ನೀಡುತ್ತ ಬಾಳಪ್ಪನವರ ಆರೋಗ್ಯ ಸರಿಯಾಗಿರುವಂತೆ ನೋಡಿಕೊಂಡರು. ಈ ವಾತ್ಸಲ್ಯಭರಿತ ನಿರ್ವಾಜ್ಯ ಪ್ರೇಮದ ಕಾಳಜಿಯಿಂದಲೇ ತಾವು “ಇಂದ್ರ ಚಂದ್ರನಾಗಿ ಮೆರೆದೆ” ಎಂದು ಬಾಳಪ್ಪನವರು ತಮ್ಮ ಬಾಳ ಸಂಗಾತಿಯನ್ನು ಮನದುಂಬಿ ನೆನೆದಿದ್ದಾರೆ. ಬಾಳಪ್ಪನವರ ಕಲೆ ಹಾಗೂ ಸಂಘ ಉಳಿಯಲು ಪತ್ನಿ ಕಲಾವಿದೆ ಲಕ್ಷ್ಮೀಬಾಯಿ ಕಾರಣರಾಗಿದ್ದು, ಅವರಿಂದ ತಮ್ಮ ನಟನೆಗೆ ಮಾರ್ಗದರ್ಶನ ದೊರೆತು ಕಲಾಜೀವನ ಇನ್ನಷ್ಟು ಮೆರುಗು ಪಡೆಯಿತು ಎಂದು ಹೇಳಿದ್ದಾರೆ. ಅತ್ಯಂತ ಸರಳಜೀವಿ ಲಕ್ಷ್ಮೀಬಾಯಿಯವರು ಈ ರೀತಿಯಾಗಿ ಹೇಳಿದ್ದಾರೆ, “ಕಲಾದೇವತೆಯನ್ನು ಒಲಿಸಿಕೊಳ್ಳುವುದು ಸಾಧ್ಯವೇ ಇಲ್ಲ. ನಾಟಕದಲ್ಲಿ ಅಭಿನಯಿಸುವುದನ್ನು ಒಂದು ತಪಸ್ಸಿನ ಹಾಗೆ ಸ್ವೀಕರಿಸಬೇಕು. ಅಂದಾಗ ಮಾತ್ರ ಶ್ರೇಷ್ಠ ನಟ ನಟಿಯರಾಗಲು
ಸಾಧ್ಯ” ಎಂದು ಅವರ ಅಭಿಮತವಾಗಿತ್ತು.
ಸಿಂಧೂರ ಲಕ್ಷ್ಮಣ,ಕಡ್ಲಿ ಮಟ್ಟಿ ಸ್ಟೇಷನ್ ಮಾಸ್ತರ, ಕುರುಕ್ಷೇತ್ರ, ಮಾವ ಬಂದಾನಪ್ಪೋ ಮಾವ ಇವು ಬಾಳಪ್ಪನವರ ಕೆಲವು ಪ್ರೀತಿಯ ನಾಟಕಗಳು. 1973 ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, 1976 ರಲ್ಲಿ ಕರ್ನಾಟಕ ನಾಟಕ ಪ್ರಶಸ್ತಿ, 1978 ರಲ್ಲಿ ಕರ್ನಾಟಕ ಸಾಹಿತ್ಯ ಪ್ರಶಸ್ತಿ, 1995 ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2005 ರಲ್ಲಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, 2006 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಇನ್ನೂ ಮುಂತಾದ ಅನೇಕ ಗೌರವ ಪ್ರಶಸ್ತಿಗಳು ಅವರ ಅಮೋಘ ಅಭಿನಯ ಹಾಗೂ ರಂಗಭೂಮಿಯ ಕಲಾಸೇವೆಗಾಗಿ ಅವರನ್ನು ಅರಸುತ್ತ ಬಂದು ಅವರಿಗೆ ಸಂದವು. 103 ವರ್ಷಗಳ ಕಾಲ ತುಂಬು ಜೀವನ ನಡೆಸಿದ ಶತಾಯುಷಿ. ರಂಗಭೂಮಿಯ ತಪಸ್ವಿ. 2017, ಆಗಸ್ಟ್ 18 ಶತಮಾನದ
ಅಪ್ರತಿಮ ಅನನ್ಯ ಅದ್ಭುತ ಕಲಾವಿದ ಕರ್ಪೂರದಂತೆ ಕರಗಿ ಬೆಳಕಿನಲ್ಲಿ ಬೆಳಕಾದರು. ರಂಗಭೂಮಿಯ ಧೃವತಾರೆ ಅಸ್ತಂಗತವಾಯಿತು. ಹಿರಿಯ ರಂಗಕರ್ಮಿ ರಂಗಪಯಣ ಮುಗಿಸಿ ನೇಪಥ್ಯಕ್ಕೆ ಸರಿದ ರಂಗಭೂಮಿಯ ‘ಭೀಷ್ಮ’, ‘ನಾಟ್ಯಭೂಷಣ’ ಬಾಳಪ್ಪನವರ ನಟನೆಯನ್ನು ನೋಡುವುದೇ ಪ್ರೇಕ್ಷಕರಿಗೆ ಹಬ್ಬದೂಟವಿದ್ದಂತೆ. ಹೋಲಿಕೆಯೇ ಇಲ್ಲದ ಅಭಿನಯ ಸಾಮ್ರಾಟರು. ಅವರಿಗೆ ಅವರೇ ಸರಿಸಾಟಿ. ಪಾತ್ರಗಳ ಪರಕಾಯ ಪ್ರವೇಶ ಮಾಡಿ, ತನ್ಮಯತೆಯಿಂದ ಅಭಿನಯಿಸಿ, ಪ್ರೇಕ್ಷಕರ ಅಂತರಂಗದ ಕದ ತೆರೆಯಿಸಿ ಅವರ ಅಂತರಾಳಕ್ಕಿಳಿದು ಮಿಡಿಯುವ ಕಲೆ ಸಿದ್ಧಿಸಿದ ಅಪರೂಪದ ಅನನ್ಯ ಕಲಾವಿದರು ಅವರು. ಕನ್ನಡ ರಂಗಭೂಮಿ ಕಂಡಂತಹ ಅಪರೂಪದ ಮಹಾನ್ ಅಭಿನಯ ದಿಗ್ಗಜರು. ರಂಗಭೂಮಿಯ ದೈತ್ಯ ಪ್ರತಿಭೆ. ರಂಗಗೀತೆಗಳಿಗೆ ತಮ್ಮ ಕಂಚಿನ ಕಂಠದಿಂದ ಮರುಜೀವ
ನೀಡಿದರು. ಇವರ 300 ರಂಗಗೀತೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಧ್ವನಿಮುದ್ರಣ ಮಾಡಿಕೊಂಡಿದ್ದಾರೆ, ಸಾಕ್ಷ್ಯ ಚಿತ್ರ ತಯಾರಿಸಿದ್ದಾರೆ. ಬಾಳಪ್ಪನವರ ಕುರಿತು ಸುಮಾರು ಹತ್ತಾರು ಪುಸ್ತಕಗಳು ಪ್ರಕಟವಾಗಿವೆ. ಬೇರೆಯವರಿಂದಲೂ ರಂಗಗೀತೆಗಳನ್ನು ಹಾಡಿಸಿ, ಧ್ವನಿಮುದ್ರಣ ಮಾಡಿಸಿ ರಂಗಭೂಮಿಯ ಸಾಂಸ್ಕೃತಿಕ ಪಾವಿತ್ರತೆಯನ್ನು ಕಾಪಿಟ್ಟಿದ್ದಾರೆ. ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸಿದ ಏಣಗಿ ಬಾಳಪ್ಪನವರು ಮಾಡಿ ಮಡಿದವರು. ಜನುಮದ ಜೋಡಿ, ಗಾನಯೋಗಿ ಪಂಚಾಕ್ಷರಿ ಗವಾಯಿ ಮುಂತಾದ ಚಲನಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ.
ನಡೆದಾಡುವ ರಂಗಮಂದಿರ ಏಣಗಿ ಬಾಳಪ್ಪನವರನ್ನು ಕುರಿತು ಎಷ್ಟು ಬರೆದರೂ ಕಡಿಮೆಯೇ. ಪಿ.ಎಚ್.ಡಿ. ಮಾಡುವಷ್ಟು ವಿಷಯ ಸಾಮಗ್ರಿ ಹಾಗೂ ಜೀವನದ ಹರುಹಾಗಿದೆ. ಈ ಪುಟ್ಟ ಲೇಖನದಲ್ಲಿ ಅವರ ಘನ ವ್ಯಕ್ತಿತ್ವ, ಶತಮಾನದ ಸಾಧನೆಯನ್ನು ಕಟ್ಟಿಕೊಡುವುದು ಅಸಾಧ್ಯದ ಮಾತು. ಅವರ ಜೀವನ ಬುತ್ತಿಯ ಕೆಲವು ತುತ್ತುಗಳನ್ನು ಮಾತ್ರ ನಾನಿಲ್ಲಿ ಓದುಗರಿಗೆ ಉಣಬಡಿಸಲು ಪ್ರಯತ್ನಿಸಿದ್ದೇನೆ. ಅಷ್ಟೇ.‘ರಂಗಭೀಷ್ಮನಿಗೆ ಆ ಮಹಾನ್ ಚೇತನಕ್ಕೆ ಶರಣು ಶರಣೆಂಬೆ’. ಜೋಳದರಾಶಿ ದೊಡ್ಡನಗೌಡರು ರಚಿಸಿದ ಹಾಡಿದು. ಇದನ್ನು ಬಾಳಪ್ಪನವರು ತಮ್ಮ ಪ್ರತಿ ನಾಟಕದ ಕೊನೆಯ ಪ್ರದರ್ಶನದ ಅಂತ್ಯದಲ್ಲಿ ಹಾಡುತ್ತಿದ್ದರು. ಎಲ್ಲ ಕಲಾವಿದರಿಗೂ ಅನ್ವಯಿಸುವ ಹಾಡಿದು.
“ಹೋಗಿ ಬರ್ತೀನ್ರಯ್ಯ ನಮ್ಮೂರಿಗೆ
ಎಲ್ಲರಿಗೂ ಶರಣಾರ್ಥಿ ದಯೆತೋರಿ ಕಳುಹಿಸಿರಿ
ಏಸೋ ಕಾಲದಿಂದ ಊರೂರು ತಿರುಗುತ
ನಿಮ್ಮೂರಿಗೆ ಬಂದೆ ಕಲಾವಿದನಾಗಿ
ಹಿಂದಿಲ್ಲ, ಮುಂದಿಲ್ಲ, ನಾ ತಂದದ್ದೇನಿಲ್ಲ
ಎಲ್ಲ ನೀವೇ ಮಾಡಿ ನೆರವಾದಿರಿ ಎನಗೆ…..
ತಂದೆ ತಾಯಿ ಅಣ್ಣ ತಮ್ಮಂದಿರಾಗುತ
ತಂದೆ ತಾಯಿ ಅಕ್ಕ ತಂಗಿಯರಾಗುತ
ಹಾಲು ಸಕ್ಕರೆ ತುಪ್ಪ ಇಕ್ಕಿ ಸಲುಹಿದಿರಿ
ಹೆಂಡತಿ ಮಕ್ಕಳ ಸಂಸಾರ ಬೆಳೆಸಿದಿರಿ
ಮಮಕಾರವಿದ್ದರೇನು ಬಿಟ್ಟು
ಹೋಗಲೇಬೇಕು
ನಾ ವಾಸವಾಗಿದ್ದ ಮನೆಯು ಹಳೆಯದಾಯಿತು
ಇದ್ದಷ್ಟು ಕಾಲ ಸಂಸಾರಕ್ಕೆ ನೆರವಾಯಿತು
ಬಿಟ್ಟು ಹೋಗುವುದೆಲ್ಲ, ನಾ ತಂದದ್ದೇನಲ್ಲ
ನೀವಿತ್ತಿದುದನೆಲ್ಲ ನಿಮಗೊಪ್ಪಿಸುವೆನಯ್ಯ
ಬದುಕಿದ್ದ ಕಾಲದಲ್ಲಿ ಏನೇನೋ ಹಾಡಿದೆ
ತಪ್ಪೇನೋ ಒಪ್ಪೇನೋ ಒಪ್ಪಿಸಿಕೊಳ್ಳಿರಯ್ಯ
ಹೋಗೆಂದ ದೇವನು ಬಾ ಎಂದು ಕರೆವನು
ಎಲ್ಲರಿಗೂ ಶರಣಾರ್ಥಿ, ಎಲ್ಲರಿಗೂ ಶರಣಾರ್ಥಿ….
’
ಎಂದು ಹಾದಿ ಪ್ರೇಕ್ಷಕರ ಕಣ್ಣೀರು ಬರುವಂತೆ ಅತ್ಯಂತ ವಿನಮ್ರ ಭಾವದಿಂದ ವಪರವಶರಾಗಿ ಹಾಡುತ್ತಿದ್ದರು. ನನಗೂ ಶ್ರೀ ಏಣಗಿ ಬಾಳಪ್ಪನವರಿಗೂ ಅತ್ಯಂತ ನಿಕಟ ಸಂಬಂಧವಿತ್ತು ನಾನು ಜವಾಹರಲಾಲ ಮೆಡಿಕಲ್ ಕಾಲೇಜಿನ ಫಾರ್ಮಸಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೆ . ಅವರಿಗೆ 1995 ರಲ್ಲಿ ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಮುಂದಿನ ವರುಷವೇ ಗುಬ್ಬಿ ವೀರಣ್ಣ ಪ್ರಶಸ್ತಿ ಬಂದಾಗ ಅವರ ಸತ್ಕಾರವನ್ನು ನಮ್ಮ ಕಾಲೇಜಿನ ಕನ್ನಡ ಬಳಗದ ಆಡಿಟೋರಿಯಂ ನಲ್ಲಿ ಭವ್ಯವಾಗಿ ಏರ್ಪಡಿಸಿ ಸನ್ಮಾನಿಸಿದೆವು. ಶ್ರೀನಗರ ಮನೆಯಿಂದ ಕೇವಲ ಕೆಲವು ಮೀಟರ್ ಅಂತರ ದಲ್ಲಿರುವ ಶಿವಬಸವನಗರ ಅವರ ಮಗ ಶ್ರೀ ಸುಭಾಸ್ ಅವರ ಮನೆಯಿಂದ ಆಗಾಗ ನಡೆದುಕೊಂಡೇ ಬರುತ್ತಿದ್ದರು ನಿಗರ್ವಿ .ಅವರ ಜೊತೆಗೆ ಮಾತಿಗೆ ಇಳಿದರೆ ಸಾಕು ದೇಶ ಸ್ವಾತಂತ್ರ್ಯ ಮತ್ತು ನನ್ನ ಅಜ್ಜ ಶ್ರೀ ಮಹದೇವಪ್ಪ ಪಟ್ಟಣನವರ ಬಗ್ಗೆ ರಾಮದುರ್ಗ ದುರಂತದ ಬಗ್ಗೆ ಮಾತನಾಡುತ್ತಿದ್ದರು ಶುಭ್ರ ರುಮಾಲು ದೋತುರ ಅಂಗಿ ಮೇಲೆ ಒಂದು ಶಲ್ಯೆ ಯಾವಾಗಲೂ ಮುಗುಳು ನಗೆ ಮುಖದ ಮೇಲೆ .ಆ ನಗೆಯು ಈಗ ಮಾಯವಾಗಿ ಏಳು ವರುಷ ಕಳೆದವು ,ರಂಗ ಭೂಮಿಯೆಯ ಭಾಸ್ಮಾ ಶ್ರೀ ಏಣಗಿ ಬಾಳಪ್ಪ ಕನ್ನಡವೂ ಕಂಡ ಶ್ರೇಷ್ಠ ಕಲಾವಿದ ರಂಗ ಗೀತೆಗಳ ಗಾಯಕ.
ಡಾ ಶಶಿಕಾಂತ ಪಟ್ಟಣ
ಡಾ ಶಶಿಕಾಂತ ಪಟ್ಟಣ – ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸ್ವಾತಂತ್ರ ಹೋರಾಟದ ಮನೆತನದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಸೈನಿಕ ಶಾಲೆವಿಜಯಪುರದಲ್ಲಿ ಪೂರೈಸಿದರು. ವೃತ್ತಿಯಲ್ಲಿ ಔಷಧ ವಿಜ್ಞಾನಿ ಪ್ರವೃತ್ತಿಯಲ್ಲಿ ಸಾಹಿತಿ ವಿಮರ್ಶಕ ಸಂಶೋಧಕ ಮತ್ತು ಹೊರಾಟಗಾರರು. ಇವರು ಇಲ್ಲಿಯವರೆಗೆ 37 ಪುಸ್ತಕಗಳನ್ನು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಇವರ ಗಾಂಧಿಗೊಂದು ಪತ್ರ ಡಾ ಡಿ ಎಸ ಕರ್ಕಿ ಸಾಹಿತ್ಯ ಪ್ರತಿಷ್ಠಾನದ 2022 ಶಾಲಿನ ಶ್ರೇಷ್ಠ ಕವನ ಸಂಕಲನ ಪ್ರಶಸ್ತಿ ಪಡೆದಿದ್ದಾರೆ. ಜನೆವರಿ 2023 ರಲ್ಲಿ ಡಾ ಎಂ ಎಂ ಕಲಬುರ್ಗಿ ಅವರ ಸಮಗ್ರ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಪ್ರಸಕ್ತ ಸಂಗಾತಿಯಲ್ಲಿ ಸಾವಿಲ್ಲದ ಶರಣರು ಎಂಬ ಮಾಲಿಕೆಯಲ್ಲಿ ಪ್ರತಿ ವಾರ ತಮ್ಮ ಲೇಖನವನ್ನು ಪ್ರಕಟಿಸುವರು, ಅವರ ಜ್ಞಾನ ವಿದ್ವತ್ತು ಅನುಭವಗಳನ್ನು ಮುಂಬರುವ ದಿನಗಳಲ್ಲಿ ಓದಿ ಆನಂದಿಸಿರಿ
ಅರ್ಥಪೂರ್ಣ ಲೇಖನ ಸರ್
ಏಣಗಿ ಬಾಳಪ್ಪ ನವರ ಜೀವನ ಚರಿತ್ರೆ ಕಟ್ಟಿಕೊಡುವ ಉತ್ತಮ ಲೇಖನ ಸರ್…
ನಮ್ಮವರೇ ಆದ ರಂಗಭೂಮಿಯ ಭೀಷ್ಮ
ಹುಕ್ಕೇರಿ ಬಾಳಪ್ಪನವರನ್ನು ಅಗಾಧವಾಗಿ ಮತ್ತು ಅಭಿಮಾನದಿಂದ
ನಿಮ್ಮ ಲೇಖನದಲ್ಲಿ ಹಿಡಿದಿಟ್ಟು
ಸಾವಿಲ್ಲದ ಶರಣರ ಮೂಲಕ ಇನ್ನೊಮ್ಮೆ ನಮ್ಮ ಮುಂದೆ ತಂದು ನಿಲ್ಲಿಸಿದ್ದೀರಿ… ಧನ್ಯವಾದಗಳು ಸರ್
ಏಣಗಿ ಬಾಳಪ್ಪರವರ ಕುರಿತು ಅದ್ಭುತವಾಗಿ ಎಳೆ ಎಳೆಯಾಗಿ ,ಅವರ ಬದುಕಿನ ಪ್ರತಿಯೊಂದು ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದೀರಿ
ಸೂಪರ್ ಲೇಖನ ಸರ್
ಸರ್ ನಿಮ್ಮ ಬರವಣಿಗೆ ಅದ್ಭುತ ಸರ್ ಏಣಗಿ ಬಾಳಪ್ಪ ನವರ ಬಗ್ಗೆ ತುಂಬಾ ಸೊಗಸಾಗಿ ಬರದಿದ್ದರಿ ಅದರಲ್ಲೂ ನಮ್ಮ ಸಿಂದಗಿ ನಲ್ಲಿ ನಾಟಕ ಆಡಿದ್ದಾರೆ ಅಂತ ನಮ್ಮ ತಂದೆಯವರು
ಹೇಳುತಿದ್ದರು ಅವರ ಬಗ್ಗೆ ನಿಮ್ಮ ಬಗ್ಗೆ ಯಷ್ಟು ಬರೆದರು ಕಮ್ಮಿನೆ ಸರ್
Wow excellent Article Sir