ಸರೋಜ ಪ್ರಭಾಕರ್ ಕವಿತೆ ತಾಯಿ-ತಾಯ್ತನ

ಕಾವ್ಯ ಸಂಗಾತಿ

ಸರೋಜ ಪ್ರಭಾಕರ್

ತಾಯ್ತನ

ನೀನು ನನ್ನ ಗರ್ಭದೊಳಕ್ಕೆ ಬಂದಾಗ
ನನ್ನದಾಗಿತ್ತು ತಾಯ್ತನದ ಒಂದು ಭಾಗ

ನೋವೆಂದು ಕಿರುಚಿ ಹೊರಬಂತು
ಕೆಂಪುಬಣ್ಣದ ರೇಷ್ಮೆಗೂದಲ ಮಗುವು
ನನ್ನ ತಾಯ್ತನಕೆ ಸೇರಿತ್ತು
ಇನ್ನೊಂದು ಭಾಗ

ಮೊದಲ ಸಲ ಎದೆಹಾಲ
ಕುಡಿದು ಹಸುಳೆಗೈ ತಾಯ
ಹೊಟ್ಟೆ ಸವರಿ ಕಾಲು ಬಡಿದಾಗ
ನನ್ನ ತಾಯ್ತನಕೆ ಸೇರಿತ್ತು ಇನ್ನೊಂದು ಭಾಗ

ಮೊದಲ ತುತ್ತನು ತಿನಿಸಿ
ನನ್ನ ಕೈ ಬೆರಳು ನಿನ್ನ ಬಾಯಲಿ
ಆಡಿ ಕಚಗುಳಿ ಇಟ್ಟಾಗ
ನನ್ನ ತಾಯ್ತನಕೆ ಸೇರಿತ್ತು ಇನ್ನೊಂದು ಭಾಗ

ಮೊದಲ ಸಲ ನೀ ನನ್ನ ಕೈಬಿಟ್ಟು
ನಡೆದಾಡಿ ಬಿದ್ದಾಗ
ನಾನೆತ್ತಿ ಸವರಿ ಕೊಡವಿ ತಬ್ಬಿದಾಗ
ನನ್ನ ತಾಯ್ತನಕೆ ಸೇರಿತ್ತು ಇನ್ನೊಂದು ಭಾಗ

ನಿನ್ನ ಕೈ ಹಿಡಿದು ನಡೆದಾಡುವಾಗ
ಜನ್ಮಾನುಬಂಧದ ಪುಳಕ
ನನ್ನ ಮೈ ತುಂಬಿ ತುಳುಕಿದಾಗ
ನನ್ನ ತಾಯ್ತನಕೆ ಸೇರಿತ್ತು ಇನ್ನೊಂದು ಭಾಗ

ಅಜ್ಜಿಕಥೆ ಹುಲಿಯ ಕಥೆ
ಕಾಗೆ ಕಥೆ ಗುಬ್ಬಿ ಕಥೆ
ನಾನು ಬಾಯಿ ಕಿವಿಯು ನೀನಾದಾಗ
ನನ್ನ ತಾಯ್ತನಕೆ ಸೇರಿತ್ತು ಇನ್ನೊಂದು ಭಾಗ

ಶಾಲೆಸಮವಸ್ರ್ತದಲಿ ಮುದ್ದುಮೊಗ ಹೊತ್ತ
ಮೊದಲ ದಿನ ನನ್ನ ಕೈಬಿಟ್ಟ
ನಿನ್ನ ಸ್ನೇಹಿತರ ನೀನೆ ಹುಡುಕಿದ ಗಳಿಗೆ
ನನ್ನ ತಾಯ್ತನಕೆ ಸೇರಿತ್ತು ಇನ್ನೊಂದು ಭಾಗ

ಅಮ್ಮ ನೋಡೆಂದು ನನ್ನ ಮುಂದೆ
ಚಾಚಿ ಹಿಡಿದ ಕೈಯಲ್ಲಿ ಬಹುಮಾನ
ಹೊಗಳಿಕೆಯ ಕಪ್ಪು ಕಾಣಿಕೆ ಫಲಕ
ನನ್ನ ತಾಯ್ತನಕೆ ಸೇರಿತ್ತು ಇನ್ನೊಂದು ಭಾಗ

ಗೆಲುವು ಸಂಭ್ರಮದೊಡನೆ ದುಃಖದಲಿ
ಸ್ನೇಹಿತನ ತೆರದಲ್ಲಿ
ನೀ ಕೊಟ್ಟ ಸಾಂತ್ವನ ಸಮಾಧಾನ
ನನ್ನ ತಾಯ್ತನಕೆ ಸೇರಿತ್ತು ಇನ್ನೊಂದು ಭಾಗ

ನನ್ನ ಏರಿಳಿತದಲಿ ನಿನ್ನ ಏರಿಳಿತದಲಿ
ಜೊತೆಗೂಡಿ ನಿನ್ನೊಡನೆ
ನಾನು ಬೆಳೆದಿದ್ದೆ ಅರ್ಥಕಂಡಿದ್ದೆ
ನನ್ನ ತಾಯ್ತನಕೆ ಸೇರಿತ್ತು ಇನ್ನೊಂದು ಭಾಗ

ಶುಭಗಳಿಗೆಯಲಿ ಮುಗುದೆಕೊರಳಲ್ಲೊಂದು
ನೀ ಕಟ್ಟಿದಾ ತಾಳಿ ಶೋಭಿಸುತ್ತಿರಲು
ದ್ವಿ-ಉಪವೀತನಾಗಿ ನೀ ಬೆಳಗುತಿರಲು
ನನ್ನ ತಾಯ್ತನ ಕಂಡಿತ್ತು ಧನ್ಯತೆಯ ಭಾವ

ತಾಯ್ತನವೆಂದರೆ ನವಮಾಸ
ಹೊತ್ತು ಹೊರಹಾಕುವುದಲ್ಲ
ಬೆಳೆಸುತ್ತ ಬೆಳೆಯುತ್ತ ಬೆಳೆವ ಅನುಬಂಧ

ಭೂಮಿಗೆ ಬಂದು ಬಿದ್ದ ಬೀಜವ
ನೀರು ಅನ್ನವ ಕೊಟ್ಟು ಸಲಹಿ
ಬೆಳೆಸಿದ ಗಿಡದ ಮೇಲಿನ
ಮುಕ್ಕಾಗದ ಮೋಹ
ಅದೇ ತಾಯ್ತನ


ಸರೋಜ ಪ್ರಭಾಕರ್

2 thoughts on “ಸರೋಜ ಪ್ರಭಾಕರ್ ಕವಿತೆ ತಾಯಿ-ತಾಯ್ತನ

Leave a Reply

Back To Top