ಕಾವ್ಯಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಭಾಸ್ಕರನು ಬಂದಂತೆ ಬಾನದಾರಿಯಲಿ ನಗುವ ಸೂಸಿ ಬಂದುಬಿಡು ನೀನೊಮ್ಮೆ
ಚಂದಿರನು ಕಂಡಂತೆ ಗಗನಪಥದಲಿ ಬೆಳದಿಂಗಳ ಹಾಸಿ ಬಂದುಬಿಡು ನೀನೊಮ್ಮೆ
ಓ ಮುದ್ದು ಮನಸೇ ಸದ್ದು ಮಾಡದೆ ಅಂತರ್ಯದೊಳಗೆ ಅಡಗಿ ಹಾಯಾಗಿರು
ಇಂದಿರನು ನಿಂದಂತೆ ಬೆಳ್ಳಿರಥದಲಿ ನಲಿವ ಬೀಸಿ ಬಂದುಬಿಡು ನೀನೊಮ್ಮೆ
ಜೀವಕಣದಲಿ ಪ್ರೀತಿ ಪಾರಿಜಾತವಾಗಿ ಹಂಬಲದ ಎದೆಯೊಳಗೆ ಹರಡುತಿರು
ಭೃಂಗರಾಜನು ಹಾಡಿದಂತೆ ಪ್ರೇಮಗೀತೆಯಲಿ ರಾಗವ ಬೆರೆಸಿ ಬಂದುಬಿಡು ನೀನೊಮ್ಮೆ
ಮನಸ ಜಪಮಾಲೆಯ ರುದ್ರಾಕ್ಷಿಯಾಗಿ ಕೈಯೊಳಗೆ ನಿತ್ಯವೂ ರಾರಾಜಿಸುತಿರು
ಮನ್ಮಥನು ಸೆಳೆದಂತೆ ರೂಪ ಮಾಲಿಕೆಯಲಿ ಅಂದವ ತೋರಿಸಿ ಬಂದುಬಿಡು ನೀನೊಮ್ಮೆ
ಸಖ ಅನುಳ ಒಲವ ಪಯಣದ ಸಾರಥಿಯಾಗಿ ಅನುದಿನ ರಥವ ನಡೆಸುತಿರು
ರಘುರಾಮನು ರಮಿಸುವಂತೆ ಹೂಬಾಣಗಳಲಿ ಪೌರುಷ ಕಾಣಿಸಿ ಬಂದುಬಿಡು ನೀನೊಮ್ಮೆ
ಡಾ ಅನ್ನಪೂರ್ಣ ಹಿರೇಮಠ