ಕಾವ್ಯಸಂಗಾತಿ
ಜೀವಪರಿ ಕವಿತೆ-
ಪ್ರೇಮ ಪಲ್ಲಕಿ…
ಸಿಂಗರಿಸಿದೆ ನನ್ನೆದೆಯ ಭಾವದಲೆಯಲಿ ತೇಲುವಂತೆ
ಸ್ಥಾಪಿಸಿಹೆ ಅದರೊಳು ಮನದರಸನ ನಿತ್ಯ ಪೂಜಿಪಂತೆ
ಮೌನವಿಲ್ಲಿ ಹೊಸಕಾವ್ಯ ಬರೆಯುತಲೆ ನಗುತಲಿದೆ
ಕಣ್ಣೋಟವೆ ರಾಗದಲೆಯ ತರಂಗ ಮೀಟುವಂತೆ||
ತುಡಿತವದು ದುಡಿತವಾಗಿ ನಿನ್ನೊಳಗಿನ ಮಿಡಿತವಾಗಿ
ರೆಕ್ಕೆಹರವಿ ನವಿಲಂತೆ ನಲಿಯುತಿಹುದು ನೋಡು
ನಾಚಿಕೆಯು ಬುವಿಗಿಳಿದು ಬಯಕೆ ಆಕಾಶವಾಗಿ
ನಿಂತ ನೆಲವ ಮರೆತವಳ ವಾಸ್ತವಕೆ ದೂಡು||
ನೀ ಕಂಡ ಕನಸುಗಳಲಿ ಬಣ್ಣ ಮೆತ್ತಿ ಕುಳಿತೆ
ನನಸಿನಲ್ಲಿ ದಿನವೂ ನೀನಾಗುತಿರುವೆ ಒರತೆ
ಇಟ್ಟ ಹೆಜ್ಜೆ ಕೊರೆದಂತೆ ಬುವಿಯಲೆ ಬೆರೆತಂತೆ
ನಿನ್ನ ಪ್ರೀತಿಯೊಳಗೆ ಸೇರೆ ನನ್ನನೇ ಮರೆತೆ||
ಹೇಳು ಬರೆಯಲೇನು ನಿನ್ನ ಕುರಿತು ನಾನು
ನನ್ನನೆ ನಾ ಹೊಗಳಿದಂತೆ ಆದಿತಲ್ಲವೇನು
ನಾನು ನೀನು ಎನುವ ಪದವ ಅಳಿಸಿಬಿಟ್ಟಮೇಲೆ
ಪ್ರೀತಿಯಷ್ಟೇ ಇಲ್ಲಿ ಸವಿಯಲಿರುವ ಜೇನು||
ಜೀವಪರಿ