ಕಾವ್ಯ ಸಂಗಾತಿ
ಪ್ರೊ ಸಿದ್ದು ಸಾವಳಸಂಗ-
ಹೆಣ್ಣು ಹೊನ್ನು ಮಣ್ಣು ಯಾರನ್ನೂ ಬಿಟ್ಟಿಲ್ಲ
ದೊಡ್ಡ ದೊಡ್ಡ ಮಠಗಳನ್ನು ಕಟ್ಟಿ
ವಿದ್ಯಾ ಕಾಶಿಯನ್ನಾಗಿ ಮಾಡಿ !
ಹಗಲಿರುಳು ಅನ್ನದಾಸೋಹ ನೀಡಿ
ಪುರಾಣ ಪ್ರವಚನಗಳ ಮೂಲಕ
ಭಕ್ತರಿಗೆ ಆಶೀರ್ವಚನ ಮಾಡಿ !
ಹೆಂಗಳೆಯರಿಗೆ ಮಕ್ಕಳಾಗುವಂತೆ ಹರಿಸಿ
ಪ್ರಮುಖ ರಾಜಕಾರಣಿಗಳಿಗೆ ಸಲಹೆ ನೀಡಿ !
ಜಾತ್ರೆ ಉತ್ಸವಗಳಲ್ಲಿ ಅಡ್ಡ ಪಲ್ಲಕ್ಕಿಯಲ್ಲಿ
ಕುಳಿತು ಮೆರವಣಿಗೆ ನಡೆಸಿ !
ಅನೇಕ ಹೋರಾಟಗಳಲ್ಲಿ ಭಾಗವಹಿಸಿ
ಮಹಾನ್ ಮಠಾಧೀಶರೆಂದು ಗುರುತಿಸಲ್ಪಟ್ಟ
ಸನ್ಯಾಸಿ ಗುರುಗಳು ಏಕೋ ಬದಲಾಗುತ್ತಿದ್ದಾರೆ !!
ರಾತ್ರೋರಾತ್ರಿ ಮಠದಲ್ಲಿ ನಡೆಯುವ
ಅಕ್ರಮಗಳು ಯಾರಿಗೂ ಗೊತ್ತಾಗದಂತೆ ಬಚ್ಚಿಟ್ಟು !
ಬಲು ಹೆಮ್ಮೆಯಿಂದ ಇರುತ್ತಿದ್ದ ಇವರು
ಮುಂದೊಂದು ದಿನ ಮಠದಲ್ಲಿ ನಡೆಯುವ ಚಟುವಟಿಕೆಗಳು ಭಕ್ತ ಸಮೂಹಕ್ಕೆ
ಗೊತ್ತಾದರೆ ಮಾನ ಮೂರು ಕಾಸಿಗೆ
ಹರಾಜಾಗುವುದೆಂದು ಹೆದರಿ !
ಹಲವರು ಆತ್ಮಹತ್ಯೆಗೆ ಶರಣಾದರೆ !
ಇನ್ನು ಕೆಲವರು ಮಠವನ್ನೇ ತೊರೆದು
ಓಡಿ ಹೋದರು ! ಮತ್ತೆ ಇನ್ನುಳಿದವರು
ಜನಸಾಮಾನ್ಯರಂತೆ ಸಂಸಾರಿಯಾದರು !
ಸಂಸಾರಿಯಿಂದ ಸನ್ಯಾಸಿಯಾಗಿ ಜಗವ
ಉದ್ಧರಿಸುತ್ತೇನೆಂಬುದು ಬರೀ ಭ್ರಮೆಯೇ ?
ಅಥವಾ ಮನೆಯವರ ಒತ್ತಾಯಕ್ಕೆ
ಮಣಿದು ಮಠಾಧೀಶರಾಗುತ್ತಾರೆಯೇ ?
ಸುಖ ಸುಪ್ಪತ್ತಿಗೆ ಅನುಭವಿಸಬಹುದೆಂಬ
ಮನದ ಮುಂದಣ ಆಸೆಯೇ ?
ಆಸೆ ಆಮಿಷಗಳನ್ನು ಗೆಲ್ಲುತ್ತೇನೆಂಬುದು
ಹುಸಿ ಕಲ್ಪನೆಯೇ ? ಯಾರಿಗೊತ್ತು ?
ಕಾಮಕ್ರೋಧಗಳನ್ನು ಗೆಲ್ಲಲಾಗದೆ
ಮರಳಿ ಸಂಸಾರಿಯಾಗುತ್ತಾರೆಂದರೆ
ಹೆಣ್ಣು ಹೊನ್ನು ಮಣ್ಣು ಯಾರನ್ನೂ ಬಿಟ್ಟಿಲ್ಲ !!
ಪ್ರೊ ಸಿದ್ದು ಸಾವಳಸಂಗ-