ಡಾ.ಪ್ರೇಮಾ.ಯಾಕೊಳ್ಳಿ-ಬರೆಯದ ಕವಿತೆ

ಕಾವ್ಯ ಸಂಗಾತಿ

ಡಾ.ಪ್ರೇಮಾ.ಯಾಕೊಳ್ಳಿ-

ಬರೆಯದ ಕವಿತೆ

ಬರೆಯಲೆ ಇಲ್ಲ ಅದೆಷ್ಟೋ ಕವಿತೆ
ಬರೆಯದೆ ಹಾಗೆಯೆ ಉಳಿದು ಹೋದವು
ಹದಿಹರೆಯದೊಳಗೆ
ಹೆಗಲಿಗೆ ಕಟ್ಟಿದ ತಾಳಿಯಂಬ
ಹೊಣೆಗಾರಿಕೆಯ ನಡುವೆ ಉಳಿದೇ ಹೋದವು

ಸರಿಯಾಗಿ ಇಪ್ಪತ್ತು ತುಂಬದ
ಒಡಲಿಗೆ
ಎರಡು ಕಂದಮ್ಮಗಳ ಭಾರ
ಅರೈಕೆ , ಬೆಳೆಸುವಿಕೆ,
ಶಾಲೆಗೆ ಹೋಗುವ ತಾಯಿಯ ಜೊತೆಗೆ
ಮತ್ತೆರಡು ಕೈಗಳ ಹಿಡಿದು
ಶಾಲೆ ಕಟ್ಟೆಯ
ಹತ್ತಿಸುವ ಹೊಣೆಗಾರಿಕೆ,
ನಿತ್ಯ ಸಂಜೆಗೊಮ್ಮೆ ಮುಂಜಾನೆಗೊಮ್ಮೆ
ಹೊತ್ತಿ ಉರಿಯಬೇಕು ಒಲೆ
ತಪ್ಪಲಾರದ ದಾಂಪತ್ಯದ ಕಟ್ಟುಪಾಡು
ಮಲಗಿ ಎದ್ದು ಹೋಗುವ ಯಜಮಾನರ ಕಾಳಜಿ.

ಬರೆಯಲೆಲ್ಲಿತ್ತು ಕವಿತೆ ?
ನಿನ್ನ ಕರೆದರೆ ಸಾಲುತ್ತಿತ್ತೆ ದಿನರಾತ್ರಿ!
ನೀನೇನೋ ಕಣ್ಣಂಚಲ್ಲಿ ಆಗಾಗ ತುಳುಕುತ್ತಿದ್ದೆ
ಎದೆಯೊಡಲ ದನಿಯಾಗಿ ಉಲಿಯುತ್ತಿದ್ದೆ
ನಿನ್ನ ಮಾತಿಗೆ ಕಿವಿಯಾಗಲೂ ಸಮಯವಿಲ್ಲದ ನಾನು
ನಿನ್ನಿಂದ ದೂರವೆ ಉಳಿದೆ.

ಬೆಳೆಯುವ ಒಡಲ ಕುಡಿಗಳಿಗೆ
ಅದೇ ಸೀತೆ ದ್ರೌಪತಿಯರ ಕಥೆ ಹೇಳುತ್ತ ನಾನು
ಸಾವಿತ್ರಿಯಾದುದನೇ ಮರೆತೆ ಹೋದೆ

ಯಮನೊಡನೆ ಮತ್ತೆ ಮತ್ತೆ ನಾನು
ಹೋರಾಡಬೇಕಿದೆ ಕವಿತೆ
ಜನಕ ಉಳಿಸಿಕೊಳ್ಳುವದಕ್ಕಾಗಿ

ನಿನ್ನ ಬರೆಯದೆ ಹೋದುಕ್ಕಾಗಿ ನನಗೆ ಈಗ ವಿಷಾದವಿಲ್ಲ
——–;——-

ಡಾ.ಪ್ರೇಮಾ.ಯಾಕೊಳ್ಳಿ-

2 thoughts on “ಡಾ.ಪ್ರೇಮಾ.ಯಾಕೊಳ್ಳಿ-ಬರೆಯದ ಕವಿತೆ

  1. ವಾಸ್ತವಿಕ ನೆಲೆಯಲ್ಲಿ ಮೂಡಿದ ಸುಂದರ ಅಭಿವ್ಯಕ್ತಿಯ ಕವಿತೆ ಮೇಡಂ, ಧನ್ಯವಾದಗಳು

Leave a Reply

Back To Top