ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಜಲ್
ಸ್ವರ್ಗವ ತೊರೆದು ಭೂಮಿಗೆ ಇಳಿದು ಮೋದದಿ
ಬಂದಳೇನು ಮುಗುದೆ
ಭಾಗ್ಯದ ಬೆಳಕನು ಚೆಲ್ಲುತಲೀ ಮುದದಿ
ನಾಚುತ ನಿಂದಳೇನು ಮುಗುದೆ
ಹಣ್ಣಿನ ತಟ್ಟೆಯನು ನೆಲದಲಿ ಇರಿಸಿ ಯಾರ
ನಿರೀಕ್ಷೆಯಲ್ಲಿರುವೆ ಹೇಳು
ಕಣ್ಣಲಿ ತುಂಬಿರುವ ಕನಸಿನ ತೊಟ್ಟಿಲಲಿ
ಸಂತಸ ತಂದಳೇನು ಮುಗುದೆ
ಹಸಿರು ಸೀರೆಯಲಿ ಪ್ರಕೃತಿ ಮಾತೆಯೇ ಎದ್ದು
ಬಂದಂತಿದೆ ಇಲ್ಲಿ
ಹುಸಿನಗೆಯ ಬೀರುತಲಿ ಮದನನ ಬಾಣದಿ
ನೋಟದಿ ಕೊಂದಳೇನು ಮುಗುದೆ
ಕಾಲಲಂದುಗೆ ಗೆಜ್ಜೆಯ ಧರಿಸಿ ಕುಳಿತಿರುವೆ
ಗಲ್ಲಕೆ ಕೈಯ ಇರಿಸಿ
ಕಲಾವಿದನ ಕುಂಚದಿ ಅರಳಿರುವ ಚೆಂದವು
ತನ್ನದೇ ಅಂದಳೇನು ಮುಗುದೆ
ಸಿಂಗರಿಸಿ ತನುವ ಮಾಧವನ ಕೊಳಲನಾದ
ಆಲಿಸಿ ಆನಂದದಿ ರಾಧೆ
ಬಂಗಾರದ ಒಡವೆಯಲಿ ಕಂಗೊಳಿಸಿ ರಂಗನ
ಒಲವಲಿ ಮಿಂದಳೇನು ಮುಗುದೆ
ಅನುರಾಧಾ ರಾಜೀವ್ ಸುರತ್ಕಲ್