ಕಾವ್ಯ ಸಂಗಾತಿ
ಈರಪ್ಪ ಬಿಜಲಿಯವರ ಕವಿತೆ
ಇಂಚರದ ಸಂಭ್ರಮ…
ಹಕ್ಕಿಗಳ ಗೂಡೊಳಗೆ
ಮೊಟ್ಟೆಗಳ ಸಂಗ್ರಹವು
ಮರಿಯಾಗಿ ಹೊರಬರಲು
ತಾಯಿಗದು ಸಂಭ್ರಮವು ||
ಪರ್ಣಗಳ ಮರೆಯಲ್ಲಿ
ಬೀಸುತಿರೊ ತಂಗಾಳಿ
ತೇಲುತಿವೆ ತರಂಗವು
ಹಕ್ಕಿಗಳ ಕಲರವವು ||
ಹೊಸಆಸೆ ಹೊಸಭಾಷೆ
ಹೊತ್ತಿಹವು ಎದೆಯಲ್ಲಿ
ಹೊಸರಾಗ ಸಂಯೋಗ
ಮಾಡುತಿದೆ ಇಂಚರವು ||
ಆಲಿಸಿದ ಕರ್ಣಗಳು
ಆನಂದ ಹೊಂದುತಲಿ
ಮೈಮರೆತು ಜಗಮರೆತು
ತೇಲುತಿವೆ ಸ್ವರ್ಗದಲಿ||
ಪ್ರಕೃತಿಯ ರಮ್ಯತೆಗೆ
ಮಾನವನು ಮಗುವಾಗಿ
ಸೋಜಿಗದಿ ಕೂಸಾಗಿ
ಶಿರಬಾಗಿ ನಮಿಸಿದನು ||
ಈರಪ್ಪ ಬಿಜಲಿ.ಕೊಪ್ಪಳ