ಡಾ ಅನ್ನಪೂರ್ಣ ಹಿರೇಮಠ-ವಿಕೃತ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ-

ವಿಕೃತ

ವಿಕೃತ ಮನಗಳ ಹುಚ್ಚಾಟ ಹೆಚ್ಚಾಗಿದೆ
ವಿಕೃತಿಯ ವಿಲಕ್ಷಣವೇ ತುಂಬಿದೆ
ನಲಿಯಬೇಕೆನ್ನುವ ನಂದನ ನಲಗುತಿದೆ
ಹಾರೋ ಹಕ್ಕಿಯ ರೆಕ್ಕೆಯ ಶಕ್ತಿಗುಂದಿದೆ//

ತರುಲತೆಗಳು ಅರಳದಾಗಿ ಅಳುತಿವೆ
ತಿಳಿನೀರಲಾಡಬೇಕೆಂಬ ಹಂಸಗಳು ನರಳುತಿವೆ
ಗೆಜ್ಜೆಯ ಹೆಜ್ಜೆಗಳ ಸದ್ದು ಅಡಗುತಿದೆ
ಗಿಡ ಮರದ ಎಲೆಗಳ ಬಣ್ಣಗಳು ಕುಂದುತಿದೆ//

ನೊಂದ ಮನಗಳು ವೇದನೆಯಲಿ
ಬೆಂದ ಜೀವಗಳು ಚಿತ್ಕಾರದಲಿ
ಕುಂದುಕೊರತೆಗಳು ತೀರದಲೆ
ಬಯಕೆಗಳು ಕೊರಗುತಲಿವೆ ಸಿಲುಕಿ ವಿಕೃತಿಯಲಿ //

ನಡೆವ ಹಾದಿಗೆ ಮುಳ್ಳು ಹಾಸಿ
ಬಯಕೆ ಬಾಂದಳಕೆ ಬಿರುಗಾಳಿ ಬೀಸಿ
ಶ್ರಮದ ದುಡಿಮೆಗೆ ವಿಷ ಬೆರೆಸಿ
ಆಸೆ ಕಂಗಳ ಹಂಬಲವ ವಿಕೃತಿಯಲಿ ಬತ್ತಿಸಿ//

ಸಮಾಜ ನೆಮ್ಮದಿಯ ಕದಡುತಾ
ಶಾಂತಿ ಸಮಾಧಾನಕ್ಕೆ ಕಿಚ್ಚು ಹಚ್ಚುತಾ
ಸತ್ಯ ನಿಷ್ಠೆಗಳ ಕಾಲಡಿ ಹೊಸಕುತಾ
ಸಾಗುತಿದೆ ವಿಕೃತ ಮನಗಳ ಅಟ್ಟಹಾಸ ಮೆರೆಯುತಾ//


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top