ಹಮೀದಾ ಬೇಗಂ ದೇಸಾಯಿ-ಗಜ಼ಲ್

ಕಾವ್ಯಸಂಗಾತಿ

ಹಮೀದಾ ಬೇಗಂ ದೇಸಾಯಿ

ಗಜ಼ಲ್

ಜಗದ ಸುಡುನೆತ್ತಿಗೆ ನೆರಳು ಬೇಕಾಗಿದೆ ಖುದಾ
ಕಂಗೆಟ್ಟ ಬದುಕಿಗೆ ಜೀವ ಸಾಕಾಗಿದೆ ಖುದಾ

ವಂಚಕ ತೋಳಗಳು ಗಿರಕಿ ಹೊಡೆಯುತಿವೆ ಅಲ್ಲವೇ
ಕಪಟ ಕಾರಸ್ಥಾನ ಎಲ್ಲೆಡೆ ಚುರುಕಾಗಿದೆ ಖುದಾ

ಹಾಲುಗಲ್ಲದ ಹಸುಳೆಗಳು ಭಯದಿ ನಡುಗಿವೆ ಇದ್ದಲ್ಲೇ
ವೇಷಧಾರಿ ಕಾಮುಕರ ನೀತಿಯಲಿ ಬಿರುಕಾಗಿದೆ ಖುದಾ

ಹಗಲೂ ನಾಚಿ ಮರೆಯಾಗಿದೆ ಮೋಡಗಳ ನಡುವೆ
ಪಿಶಾಚಿಗಳ ಬೆತ್ತಲೆ ಕುಣಿತ ಕುತ್ತಾಗಿದೆ ಖುದಾ

ಏನು ಹೇಳಿಯಾಳು ಬೇಗಂ ಉಡುಗಿದ ದನಿಯಲಿ
ಬಿರಿದೆದೆ ಸುರಿಸಿದ ಕಣ್ಣೀರು ತುತ್ತಾಗಿದೆ ಖುದಾ

ಹಮೀದಾ ಬೇಗಂ ದೇಸಾಯಿ

Leave a Reply

Back To Top