ಕಾವ್ಯ ಸಂಗಾತಿ
ಅಮರೇಶ.ಮ.ಗೊರಚಿಕನವರ
ನಗಬೇಕು ಹೂವೇ ನಿನ್ನಂತೆ
ನಗಬೇಕು ಹೂವೇ ನಿನ್ನಂತೆ
ಚಿವುಟುವವರ ಚಿಂತೆಯು ಮರೆಯುವಂತೆ
ಚಿಗುರೊಡೆಯುವ ಕನಸ್ಸಿಗೆ ನೀರೆರೆಯುವಂತೆ
ಕಲಿಸುವೆಯಾ ಹೂವೇ ಹೇಳು
ನಿನ್ನಂತೆ ನಾವು ನಗಲು
ನಿನ್ನಂತೆ ನಾವು ನಗಲು||೧||
ಅರಳಬೇಕು ಹೂವೇ ನಿನ್ನಂತೆ
ಬಾಡುವೆನೆಂಬ ದುಃಖ ದೂರಸರಿಯುವಂತೆ
ಪುಟಿದೇಳುವ ಸಂತಸಕ್ಕೆ ಜೀವ ಕಳೆ ತುಂಬುವಂತೆ
ತಿಳಿಸುವೆಯಾ ಹೂವೇ ಹೇಳು
ನಿನ್ನಂತೆ ನಾವು ಅರಳಲು
ನಿನ್ನಂತೆ ನಾವು ಅರಳಲು||೨||
ಬೆಳೆಯಬೇಕು ಹೂವೇ ನಿನ್ನಂತೆ
ಆಸೆ ಮೋಹಗಳ ಬದಿಗಿಟ್ಟು ಬದುಕುವಂತೆ
ಬಂದದ್ದು ಬರಲಿ ಬರುವದೆಲ್ಲಾ ಒಳ್ಳೆಯದಕ್ಕೆ ಎಂಬಂತೆ
ಸ್ಫೂರ್ತಿ ಚಿಲುಮೆಯಾಗುವೆಯಾ ಹೂವೇ ಹೇಳು
ನಿನ್ನಂತೆ ನಾವು ಬೆಳೆಯಲು
ನಿನ್ನಂತೆ ನಾವು ಬೆಳೆಯಲು ||೩||
ಸಾರ್ಥಕತೆ ಮೆರೆಯಬೇಕು ಹೂವೇ ನಿನ್ನಂತೆ
ಅಲ್ಪಾಯುಷಿಯಾಗಿ ಬದುಕಿ,ಸಂತಸ ಪಡುವಂತೆ
ದೇವರ ಮುಡಿಗೋ,ಜೇನು-ದುಂಬಿಗೋ ನಿನ್ನ ಬದುಕು ಮುಡಿಪಿಟ್ಟಂತೆ
ಕಲಿಸುವೆಯಾ ಹೂವೇ ಹೇಳು
ನಿನ್ನಂತೆ ನಾವು ನಿಸ್ವಾರ್ಥಿಯಾಗಲು
ನಿನ್ನಂತೆ ನಾವು ನಿಸ್ವಾರ್ಥಿಯಾಗಲು ||೪||
ಅಮರೇಶ.ಮ.ಗೊರಚಿಕನವರ
Beautiful
ಜೀವನದ ನಿಜ ತತ್ವವನ್ನ ಎಳೆಯಾಗಿಸಿಕೊಂಡು ಹೆಣೆದಿರುವ ಪುಷ್ಪಮಾಲೆ ಈ ಕವನ
ಅಮರೇಶನ ಕನ್ನಡದ ಕಂಪು ಹೀಗೆ ಎಲ್ಲೆಡೆ ಘಮಿಸುತ್ತಿರಲಿ….
Nice
❤️Beautiful