ಶಂಕರಾನಂದ ಹೆಬ್ಬಾಳ-ಪರ್ಸ್ ವೃತ್ತಾಂತ

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಪರ್ಸ್ ವೃತ್ತಾಂತ


ಅನಾಥನಂತೆ ಬಿದ್ದ
ಪರ್ಸೊಂದು ಕಾಯುತ್ತಿತ್ತು

ಯಾರದ್ದೋ ಇರಬೇಕು,
ಪಾಪ, ಅವಸರದಲ್ಲಿ ಬಿದ್ದಿರಬೇಕು
ಇಲ್ಲವೆ, ಬೈಕಿನಿಂದ ಪ್ಯಾಂಟಿನ
ಹಿಂದಿನ ಜೇಬಿನಿಂದ ಹಾರಿರಬೇಕು,,,

ನಾನಂದುಕೊಂಡೆ,
ಪರ್ಸ ತುಂಬಿರಬೇಕು
ನೋಟಿನ ಕಂತೆಗಳಿರಬೇಕು
ಏನು ಇಲ್ಲ….
ಖಾಲಿ ಖಾಲಿ….
ಒಳಗೆ ನಾಲ್ಕು ಹಳೆಯ
ಬಣ್ಣಮಾಸಿದ
ಪಾಸಪೋರ್ಟ ಸೈಜಿನ
ಭಾವಚಿತ್ರ,
ಮಡಿಚಿ ಮುದ್ದೆಯಾದ
ಒಂದು ಕೈಬರಹದ ಪತ್ರ…!

ಮತ್ತೇನು ಇಲ್ಲ,
ಎಂದುಕೊಂಡೆ
ಮೂಲೆಯಲ್ಲಿ
ಮಾತ್ರೆಯ ಚೀಟಿಯೊಂದು
ನೋಡುತ್ತಲೆ ಇತ್ತು
ಕಣ್ಣು ಮೀಟುಕಿಸದೆ ಇಂದು…

ಅದು ಚರ್ಮದ ಪರ್ಸು
ಪೋನ್ ನಂಬರಿನ
ಡೈರಿ ಅದರಲ್ಲೊಂದಿಷ್ಟು
ಹಳೆ ನಂಬರ,
ಮೊದಲನೆ ನಂಬರ
ಸ್ನೇಹಿತನ ಅಪ್ಪನದೆ ಆಗಿತ್ತು,
ಮುಂದೆ ಸಾಗಿದೆ,

ಅಲ್ಲೊಬ್ಬ ಮುದುಕ
ಹುಡುಕಾಡುತ್ತಿದ್ದ,
ಕಳೆದುಕೊಂಡ ಪರ್ಸನ್ನು,
ಹೋಗಿ ಕೊಟ್ಟೆ
ಖುಷಿ ಪಟ್ಟ
ಆತ ನನ್ನ ನಂಬರನ್ನು
ಡೈರಿಯಲ್ಲಿ ಬರೆದುಕೊಂಡ
ನೆನಪಿಗೆ ಇರಲೆಂದು,

ಕರುಳು ಚುರಕ್ಕೆನ್ನುವ
ಮರೆಯದ ಸಂಬಂಧ..
ಇದು ಬರಿ ಪರ್ಸಲ್ಲ
ಬಾಂಧವ್ಯದ ಕೊಂಡಿ


ಶಂಕರಾನಂದ ಹೆಬ್ಬಾಳ

3 thoughts on “ಶಂಕರಾನಂದ ಹೆಬ್ಬಾಳ-ಪರ್ಸ್ ವೃತ್ತಾಂತ

Leave a Reply

Back To Top