ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ-
ಗಜಲ್
ಗಜಲ್ (ಮಾತ್ತೆ ೨೫)
ಹೂ ಮತ್ತೆ ಅರಳಿ ನಗಬಹುದೆ ದಳಗಳು ಉದುರಿದ ನಂತರ
ಬಿಸಿಲ ಸುಖ ಸಿಗುವುದೆ ಮುಸ್ಸಂಜೆಗೆ ರವಿ ಮುಳುಗಿದ ನಂತರ
ಚಿನ್ನದ ಹಣತೆ ಹೊಳಪಿಗೆ ಚಿಟ್ಟೆಯು ಸಂತಸದಿ ಕುಣಿಯುತಿದೆ
ಪತಂಗವು ಹಾರ ಬಲ್ಲುದೆ ರೆಕ್ಕೆಗಳು ದಹಿಸಿದ ನಂತರ
ಪ್ರೇಮ ಮಂದಿರದಲಿ ರಾಧೆ ನಿತ್ಯ ಕೃಷ್ಣನ ಪೂಜಿಸುವಳು
ಹೃದಯ ಗೂಡು ಬರಿದಾಗಿದೆ ಅವಳನ್ನು ಅಗಲಿದ ನಂತರ
ಪ್ರಣಯದ ಉಯ್ಯಾಲೆಯನು ಜೊತೆಯಲಿ ಜೀಕುವ ಕನಸು ಕಂಡೆ
ಅಮಲೇರುವುದೆ ಒಲವ ಮದಿರೆಯ ಹೂಜಿ ಉರುಳಿದ ನಂತರ
ಇರುಳು ಬಾಳ ಹಾದಿಗೆ ಕಂದೀಲನು ಇಡ ಬಯಸಿದೆ ಸದಾ
ಒಲುಮೆಯ ಬೆಳಕು ದೊರೆಯುವುದೇ ಪ್ರಭೆಯು ನಂದಿದ ನಂತರ
ಪ್ರಭಾವತಿ ಎಸ್ ದೇಸಾಯಿ