ಮಧು ವಸ್ತ್ರದ್-ಹೀಗೊಂದು ನದಿ

ಕಾವ್ಯ ಸಂಗಾತಿ

ಮಧು ವಸ್ತ್ರದ್-

ಹೀಗೊಂದು ನದಿ

ಕಾಲದ ಪರಿವೆಯಿಲ್ಲದೆ ಹೀಗೊಂದು ನದಿ ಮುಂದೆ ಮುಂದೆ ಹರಿದಿದೆ
ಜಾಲದಲೆಲ್ಲೂ ಅಡಕದಂತೆ ತನ್ನ ಗುರಿಯತ್ತ ಏಕಚಿತ್ತದಿಂದ ಸರಿದಿದೆ..

ಹುಟ್ಟಿದ ಸ್ಥಳ ತೊರೆದು ಕಾನನದಲಿ‌ ಹರಿದು ಮನದಿನಿಯನ ಅರಸಿದೆ
ಕಟ್ಟಳೆಗಳಿಲ್ಲದೆ ಪ್ರೀತಿಸುವ ಆ ಪ್ರಿಯತಮನ ಬೆರೆಯಲು ಕಾತರಿಸಿದೆ..

ಬಳುಕುತ ತುಳುಕುತ ಬದಿಯ ಹಸಿರಿನೆಡೆಗೆ ಮೈತ್ರಿ ಹಸ್ತವನು ಚಾಚುತಿದೆ
ಬಳಸಿ ವಕ್ರಹಾದಿಯ,ಬಿಂಕ ವಯ್ಯಾರದಿ ಸಾಗಿ ನಲ್ಲನ ನೆನೆದು ನಾಚುತಿದೆ..

ಗಿರಿಯಿಂದ ಧುಮುಕುತ ಓರೆಕೋರೆಯಾಗಿ ನುಗ್ಗುತ ಧರೆಯೊಳು ಜರುಗಿದೆ
ಗರಿಗೆದರಿದ ನವಿಲಾಗಿ ಪ್ರಿಯಕರನ ಸೇರಲು ಉತ್ಸಾಹದಿ ತವರ ತೊರೆದಿದೆ..

ಉಷೆಯ ಕಿರಣಗಳ ಬಿಂಬಿಸುತ ಮಿರುಗುವ ದರ್ಪಣದಂತೆ ಕಾಣುತಿದೆ
ನಿಶೆಯಲಿ ಚೆಲ್ಲಿದ ನಕ್ಷತ್ರಗಳ ಛಾಯೆಯನು ತುಂಟತನದಿ ಕಾಡುತಿದೆ..

ರಂಗು ರಂಗಿನ ಹಣ್ಣೆಲೆ ಹೂ ರಂಗೋಲಿಯ ಬಿಡಿಸುತ ಚೆಲ್ಲಾಟವ ಆಡುತಿದೆ
ತಂಗಾಳಿಯ ಶೃತಿ ಹಿಡಿದು ಝುಳು ಝುಳು ನಾದದಿ ಪ್ರೇಮಗೀತೆ ಹಾಡುತಿದೆ

ಮಳೆಯಲಿ ಬೆಳ್ನೊರೆಯ ರುದ್ರರಮಣೀಯ ಧಾರೆಯಾಗಿ ಧುಮ್ಮಿಕ್ಕಿ ಸುರಿದಿದೆ
ಮಿಳಿತದ ಮೋಹದೊಳು ಹಿಮದ ಗಿರಿಯ ಕೊರೆಯುತ ತನ್ನವನ ಕರೆದಿದೆ..

ಪ್ರಕೃತಿಯ ಹಸಿರು,ನಭದ ನೀಲಿ ಬಣ್ಣದಲಿ ಒಂದಾಗಿ ಬೆರೆತು ಆನಂದಿಸಿದೆ
ಸಂಸ್ಕೃತಿಯ ಮುಖ್ಯ ಅಂಗವಾಗಿ ಮನುಜರ ಬದುಕನು ಹಸನಾಗಿಸಿದೆ..

ನಿಸ್ವಾರ್ಥ ಭಾವದಿ ಮನುಕುಲಕೆ ಜಲವನು ಜಲಚರಕೆ ನಲಿವನು ಉಣಿಸಿದೆ
ನಿಸ್ಸಾರ ಭೂಮಿ,ನಿಸ್ಸತ್ವಬೇರ ನಡುವೆ ಭೇದ ಎಣಿಸದೆ ತಂಪನಿತ್ತು ತಣಿಸಿದೆ..

ಮಲಿನ ಮನುಜರ,ಪ್ರಾಣಿ ಪಕ್ಷಿ ಸಂಕುಲದ ಕಲ್ಮಶವನು ತೊಳೆದಿದೆ
ಕುಲೀನ ಸದ್ಗೃಹಿಣಿಯಂತೆ ಅದ್ಭುತ ಸಾತ್ವಿಕ ಸೌಂದರ್ಯದಿ ಹೊಳೆದಿದೆ..

ಮುಳುಗಿ ಏಳುವ ಒಳಗೇ ಕೊಳೆವ ಎಲ್ಲರ ಸಹಿಸುತ ಮುಂದೆ ಚಲಿಸಿದೆ
ಅಳುಕದೆ ಅಂಜದೆ ಛಲದಿಂದ ಧ್ಯೇಯದತ್ತ ನಡೆವ ಕಲೆಯನೆಮಗೆ ಕಲಿಸಿದೆ..

ಸುಖ ದುಃಖಗಳು ಏನೇ ಇದ್ದರೂ ಜೀವನದ ಪಯಣಕೆ ತಡೆ ಬೇಡವೆಂದಿದೆ
ಮುಖದಿ ಹರ್ಷೋಲ್ಲಾಸದ ನಗೆಯ ತುಂಬಿ ಎಲ್ಲರೊಂದಾಗಿ ಬಾಳಿರೆಂದಿದೆ..

ಭರಭರನೇ ಮುನ್ನಡೆದು ವಿಶಾಲ ಸಾಗರವ
ಸೇರಿ ಧನ್ಯಳಾದೆನೆಂದಿದೆ
ಹರನ ಶಿರದಲಿ ನೆಲೆಸಿ ನಲಿದು ನರ್ತಿಸುವ
ಸುರಗಂಗೆ ನಾನಾದೆನೆಂದಿದೆ..

ಪೂರ್ಣಿಮೆಯಂದು ನಿರೀಕ್ಷೆಯಲಿ ಉಕ್ಕೆದ್ದ ಪ್ರಿಯತಮನನು ಆಲಂಗಿಸಿದೆ
ವರ್ಣಿಸಲಾಗದ ಅನುಭೂತಿಯಲಿ ಈ ನದಿ ಮಿಲನಮಹೋತ್ಸವ ಆಚರಿಸಿದೆ..


ಮಧು ವಸ್ತ್ರದ್

One thought on “ಮಧು ವಸ್ತ್ರದ್-ಹೀಗೊಂದು ನದಿ

Leave a Reply

Back To Top