ಹೇಗೆ ಬಂದಿರಬೇಕು ಇಲ್ಲಿಗೆ..?

ಹೇಗೆ ಬಂದಿರಬೇಕು ಇಲ್ಲಿಗೆ..?

ಶಂಕರಾನಂದ ಹೆಬ್ಬಾಳ

ಬೆಣ್ಣೆಯ ರಾಶಿಯಂತೆ
ಅರಳಿ ನಲಿದಿತ್ತು
ಹೊಚ್ಚ ಹೊಸ ಮಲ್ಲಿಗೆ…
ನನ್ನ ಪ್ರಶ್ನೆ…?
ಹೇಗೆ ಬಂದಿರಬೇಕು ಇಲ್ಲಿಗೆ…!!

ಘಮ್ಮಾ ಘಮ್ಮಾಡಿಸ್ತಾವ
ಮಲ್ಲಿಗೆ,
ನೀ ಹೊರಟಿದ್ದೀಗ ಎಲ್ಲಿಗೆ..
ಬಹುಶಃ ಹಾದಿ ತಪ್ಪಿ
ಈ ಕಡೆ ಬಂದಿರಬೇಕು…
ಬೇಂದ್ರೆ ಅಜ್ಜನ ಮನಸೆಳೆದು
ಹೇಗೆ ಬಂದಿರಬೇಕು ಇಲ್ಲಿಗೆ…!

ಇದೊ ನೋಡಿ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಿಗೆ
ಹಚ್ಚ ಹಸುರಿನ ಗಿಡದಿಂದ
ಮೂಡಿಬಂತು ಹೇಗೆ ಮೆಲ್ಲಗೆ…
ಜಿ ಎಸ್ ಎಸ್ ರ ಮಸ್ತಕದಿಂದ ಹಾರಿ
ಹೇಗೆ ಬಂದಿರಬೇಕು ಇಲ್ಲಿಗೆ…!

ಮುಗಿಲೆತ್ತರದ ಮಲ್ಲಿಗೆ
ಮನಸಿನೊಳಗಿನ ಮಲ್ಲಿಗೆ
ನಿರ್ಲಿಪ್ತ ಭಾವದ ಮಲ್ಲಿಗೆ…!
ಕೋಮಲ ರೂಪದ ಮಲ್ಲಿಗೆ
ಹೇಗೆ ಬಂದಿರಬೇಕು ಇಲ್ಲಿಗೆ

ದುಂಡು ದುಂಡಾದ ಮಲ್ಲಿಗೆ
ಹಚ್ಚ ಹಸುರಿನ ಬಿಳಿಮಲ್ಲಿಗೆ
ಎದೆಯೊಳಗಿದ್ದೆ ಅಂದುಕೊಂಡು
ನಾ ಬಂದೆ ನಿನ್ನಲ್ಲಿಗೆ…!!


ಶಂಕರಾನಂದ ಹೆಬ್ಬಾಳ

Leave a Reply

Back To Top