ಡಾ.ಬಸಮ್ಮ ಗಂಗನಳ್ಳಿ-ಪ್ರೇಮ ಸಂದೇಶ

ಕಾವ್ಯ ಸಂಗಾತಿ

ಡಾ.ಬಸಮ್ಮ ಗಂಗನಳ್ಳಿ-

ಪ್ರೇಮ ಸಂದೇಶ

ನಾನು ನೀನು
ನೀನು ನಾನು
ಒಂದಾಗಿ ಹೋದೆವು
ಯಾವ ಗುಣವೋ
ಏನು ಮೋಹವೋ
ಸೆಳೆಯಿತು ನಮ್ಮನು..
ಗೆಳೆಯಾ ll

ಮಿಡಿಯುತಿದೆ
ಒಂದೇ ಸವನೆ
ನುಡಿಯಲಾಗದ
ಹೃದಯರಾಗ
ದೂರದ ತಂತಿ
ಬೆರಳ ಮಿಡಿತವು
ಎದೆಯ ತಂಬೂರಿ ತಾಕಿ
ಪ್ರೇಮಗಾನ ನಾದವು..
ಗೆಳೆಯಾ ll

ಸದ್ದಿರದ ಮೌನದಲಿ
ಸಾವಿರ ಬಯಕೆಗಳು
ದೂರದ ದಾರಿಗೆ
ತೋರಣವ ಕಟ್ಟಿ
ಕಣ್ಣ ನೋಟಗಳು
ಕಾದು ಕುಳಿತವು
ಬಳಿ ಇರದ
ದೂರದ ಪ್ರೀತಿಗಾಗಿ..
ಗೆಳೆಯಾ ll

ಕಾಯುವ ತಪವು
ತಾಪವಾಗದಿರಲು
ತಂಪೆರೆವ ಸಿಹಿಯು
ದೂರವಾಗದ ಪರಿ
ತೀರದ ಪ್ರೀತಿ ಪಯಣ
ಸಾಗಬೇಕು ನಿತ್ಯವೂ
ಹೊಸದಾರಿ ಹುಡುಕುತ..
ಗೆಳೆಯಾ ll

ಎಷ್ಟು ಜನುಮಕು ಇರಲಿ
ಹೆಪ್ಪುಗಟ್ಟಿದ ಈ ಪ್ರೀತಿ
ಮಾಗಿದ ಹಣ್ಣಿನ ತೆರದಿ
ಸವಿ ತಿರುಳ ನೀಡುತಾ
ನನ್ನ ನಿನ್ನ ಜೀವದೊಲವ
ಸ್ವರಸಂಗೀತ ಮೊಳಗುತ
ಅಪಸ್ವರವಾಗದಂತೆ
ಕಾಪಾಡಬೇಕು..
ಗೆಳೆಯಾ ll

ಕಳೆದು ಹೋಗದ
ಬಹುಕಾಲ ಉಳಿವ
ಬಾಳ ಪುಟದಲಿ
ಬರೆಯಬೇಕು
ಪ್ರೇಮದಕ್ಷರ
ಬೆಳೆದು ಬಂದ
ದಾರಿಯುದ್ದಕೂ
ಬಿತ್ತಬೇಕು
ಸ್ನೇಹ ಬೀಜವ..
ಗೆಳೆಯಾ ll

ಬಾಳ ನಂದನವನದಲಿ
ಒಲವ ಕಂಪು ತೀಡಿ
ಹರಡಬೇಕು ಎಲ್ಲೆಡೆ
ಪ್ರೀತಿ ಪರಿಮಳ
ಇರಬೇಕು ಅನವರತ
ಜೊತೆಗೂಡಿ ನಾವು
ಅನುಗಾಲವು..
ಗೆಳೆಯಾ ll

————————–

ಡಾ.ಬಸಮ್ಮ ಗಂಗನಳ್ಳಿ

Leave a Reply

Back To Top