ಡಾ ಸಾವಿತ್ರಿ ಕಮಲಾಪೂರ-ಮುಸ್ಸಂಜೆಯ ಮುನಿಸು

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ-

ಮುಸ್ಸಂಜೆಯ ಮುನಿಸು

ಅದಾವ ಮುನಿಸವ್ವ ನನ್ನ ಮೇಲೆ
ಶುದ್ಧ ಗಾಳಿಗೂ ಭೇದ
ಬೀಸುವೆ ಒಮ್ಮೊಮ್ಮೆ
ಬಿರುಗಾಳಿ ಇದೇ ಮುಸ್ಸಂಜೆಯಲಿ
ಕಟ್ಟುವೆ ಗೂಡನು
ತೆಕ್ಕೆಗೆ ಬರಸೆಳೆದು ಅಪ್ಪುವೆ
ಒಂದೊಂದು ಸಾರಿ
ಭೇದ ಮರೆತು ರಮಿಸುವೆ
ತಂಗಾಳಿ ಬೀಸಿ ಮೈ ಮರೆಸುವೆ ಇದೇ ಮುಸ್ಸಂಜೆಯಲಿ
ಭಾರವಾದ ಮನದ ಬೇಸರ
ತನಿಸುವೆ ತುತ್ತು ನೀಡಿ
ಅಳುವ ಕಂದನಿಗೆ
ಸಮನಿಸುವೆ ಎಲ್ಲರನೂ
ಬೆಳೆಸುವೆ ಮಡಿಲ ಮಮತೆಯ
ತಾಯಂತೆ ಉಪಚರಿಸುವೆ
ಮೆತ್ತನೆಯ ಹುಲ್ಲುಹಾಸಿಗೆಯಲಿ
ಕರೆದು ಕರಪಿಡಿದು ನಲಿಸುವೆ
ಹಕ್ಕಿಗಾಯನದ ಇಂಪಿನ
ಸ್ತರದಲ್ಲಿ ಕುಣಿಸಿ ಮರೆಸುವೆ
ಮನದ ಗಾಯವ ಅಳಿಸಿ
ಹಾಕುವೆ ಹೆಜ್ಜೆ ಒಗ್ಗಟ್ಟಿನ ಬಲದಲಿ
ಉರಿದ ಸೂರ್ಯ ರಶ್ಮಿಯ
ಹುಸಿಕೋಪವನು ಇಳಿಸುವೆ
ಹಸು ಕರುಗಳನು ಸೇರಿಸುವೆ
ಗೂಡಿಗೆ
ಕರೆ ಕರೆದು ಸವಿಯಲಿ
ಬನ್ನಿಸುವೆ ಬಾನಂಗಳದಲಿ
ಚಿತ್ತಾರ ಮೂಡಿಸಿ
ಸಂಭ್ರಮಿಸುವೆ ಸ್ನೇಹ ಮಿಲನದಲಿ

ಇದೇ ಮುಸ್ಸಂಜೆಯ ತಂಪಿನಲಿ


ಡಾ ಸಾವಿತ್ರಿ ಕಮಲಾಪೂರ

Leave a Reply

Back To Top