ಡಾ ವಿಜಯಲಕ್ಷ್ಮಿ ಪುಟ್ಟಿ – ಹೆರಳ ಮಲ್ಲಿಗೆ…

ಕಾವ್ಯ ಸಂಗಾತಿ

ಡಾ ವಿಜಯಲಕ್ಷ್ಮಿ ಪುಟ್ಟಿ

ಹೆರಳ ಮಲ್ಲಿಗೆ…

ತಟಸ್ಥವಾಗಿದ್ದ ಮನಗೂಡ,
ತಟ್ಟಿ ಬಡಿದೆಬ್ಬಿಸಿ,
ಒಲವು ಚಿಟ್ಟೆಗಳ ಹಾರಿಬಿಟ್ಟೆ,
ಮನವಿಗ ಗೊಂದಲದ ಗೂಡು.

ಕಾಮನೆಗಳ ದೂರ ಬಿಟ್ಟು,
ಒಲವ ಭಾವಗಳ ಕೊಯ್ಲೇಬ್ಬಿಸಿ,
ಕಾಡುತ್ತ ನಸುನಗುವ ನೀನು,
ತೇಟು ಮುಗ್ಧ ಮಗುವಿನಂತೆ.

ಎಂದೂ ಕನಸದ ಮನ,
ಸಾವಿರ ಕನಸುಗಳ ಹೊತ್ತು ನಿಂತು,
ಹೀಗೇಕೆ ಎಂದು ಕೇಳುವ ಮೊದಲೇ,
ನಿನ್ನ ಬಿಗಿ ಹಿಡಿತ ಉತ್ತರ.

ಮಸುಕಾದ ಮನಕ್ಕೆ
ಬೆಳಕ ಹರಿಸಿ,
ಬೆಳ್ಳಿ ದಾರಿಯ ಸುರಿದು,
ಭಾವ ಒಕ್ಕಲು ಮಾಡಿ,
ಒಳದನಿಯಲ್ಲಿ ಮನಕೆ ಕರೆದೆ.

ಮಂಕು ಕವಿದ ಭಾವ,
ಹೊಸ ಉರುಪು ತುಂಬಿ,
ಕನಸುಗಳ ಬೀಜ ಬಿತ್ತಿ,
ಇದೀಗ ಸಾವಿರಾರು ಮೊಳಕೆಗಳು.

ನನ್ನ ಹೆರಳ ಮಲ್ಲಿಗೆ,
ಬಾಡಿ ಸೊರಗುವ ಮುನ್ನ,
ಕಿರುಬೆರಳ ಸೋಂಕಿಸು,
ಭಾವ ಬುತ್ತಿ ಉಣಿಸು.


ಡಾ ವಿಜಯಲಕ್ಷ್ಮಿ ಪುಟ್ಟಿ

Leave a Reply

Back To Top