ಜಯಲಕ್ಷ್ಮಿ.ಕೆ.ಮಡಿಕೇರಿಯವರ ಕೃತಿ,”ಚಪ್ಪಾಳೆಗೂ ಬೆಲೆ ಇದೆ” ಒಂದು ಅವಲೋಕನ ಸುನೀತ ಕುಶಾಲನಗರ

ಪುಸ್ತಕ ಸಂಗಾತಿ

ಜಯಲಕ್ಷ್ಮಿ.ಕೆ.ಮಡಿಕೇರಿಯವರ ಕೃತಿ,

“ಚಪ್ಪಾಳೆಗೂ ಬೆಲೆ ಇದೆ”

ಒಂದು ಅವಲೋಕನ

ಸುನೀತ ಕುಶಾಲನಗರ

     ಸುರಿವ ಮಳೆ,ಹರಿವ ನದಿ,ಬೀಸುವ ಗಾಳಿ,ಉದಯಿಸುವ ಸೂರ್ಯ, ಅಲೆದಾಡುವ ಮೋಡ,ಬಯಲಾಗಿರುವ ಆಕಾಶ,ಮಿನುಗುವ ತಾರೆಗಳು ಇವೆಲ್ಲವುಗಳಿಗೂ ಅವುಗಳದೇ ಆದ ಸ್ಥಾನಮಾನವಿದೆ. ಹಾಗೆಯೇ ಒಂದರ ಸ್ಥಾನವನ್ನು ಇನ್ನೊಂದು ಎಂದಿಗೂ ತುಂಬಲಾರದು.
        ಇತ್ತೀಚಿಗೆ ಓದಲು ಕೈಗೆತ್ತಿಕೊಂಡ ಪುಸ್ತಕ ಜಯಲಕ್ಷ್ಮಿ.ಕೆ.ಮಡಿಕೇರಿ ಅವರ ಚಪ್ಪಾಳೆಗೂ ಬೆಲೆ ಇದೆ ಮತ್ತು ಇತರ ಲೇಖನಗಳಲ್ಲಿ ಮನಸ್ಸೆಳೆದ ಸಾಲುಗಳಿವು. ಇವರ ಬರೆಹಗಳು ಸರಾಗವಾಗಿ ಓದಿಸಿಕೊಂಡು ಹೋಗುವಂತಿದ್ದು  ಪ್ರತಿ ಬರೆಗಳಲ್ಲೂ ಅನುಭವಗಳನ್ನು  ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ.

     ಸ್ವತಃ ಉಪನ್ಯಾಸಕಿಯಾಗಿರುವ ಇವರು ವಿದ್ಯಾರ್ಥಿಗಳ ಮೇಲಿಟ್ಟಿರುವ ಕಾಳಜಿಯನ್ನು ಹೆಚ್ಚಿನ ಬರೆಹಗಳು ವೇದ್ಯವಾಗಿಸುತ್ತವೆ. ಹೇಗೆ ಕಳೆಯನ್ನು ಎಳವೆಯಲ್ಲೇ ಚಿವುಟಿ ಹಾಕಿದಾಗ ಸಸ್ಯ ಹುಲುಸಾಗಿ ಬೆಳೆಯಬಲ್ಲುದೋ ಹಾಗೇ ಬಾಲ್ಯದಲ್ಲೇ ಮಕ್ಕಳ ತಪ್ಪುಗಳನ್ನು ತಿದ್ದಿದಾಗ ಮಾತ್ರ ಅವರು ಸತ್ಪ್ರಜೆಗಳಾಗಲು ಸಾಧ್ಯ ಎಂಬ ವಾಕ್ಯವೇ ಇದಕ್ಕೆ ನಿದರ್ಶನವಾಗಿದೆ.
        ಸಮಾಜದೆಡೆ ಇವರಿಗಿರುವ  ಅಪೇಕ್ಷೆಯ ಜತೆ‌ ಶಿಕ್ಷಕರ ಜವಾಬ್ದಾರಿ,ಪೋಷಕರ ಪಾತ್ರದ ಬಗ್ಗೆ ಚಿಂತನೆ ಮಾಡುತ್ತಾರೆ. ತಮ್ಮ ನೋವನ್ನು ಮತ್ತು ಆಗಬೇಕಿರುವ ಬದಲಾವಣೆಯ ಬಗ್ಗೆ ಬರೆಯುತ್ತಾ  ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಾದ ಸದ್ಗುಣಗಳನ್ನು ಒತ್ತಿ ಹೇಳಿದ್ದಾರೆ. ಹಾಗೆಯೇ ಶಿಕ್ಷೆ ರಹಿತ ಶಿಕ್ಷಣ – ಎತ್ತ ಸಾಗೀತು ಯುವಜನ ?ಎಂದು ಪ್ರಶ್ನೆ ಮಾಡಿದ್ದಾರೆ.
     ದೀಪಾವಳಿ,ಮಕರ ಸಂಕ್ರಾಂತಿ ಹಬ್ಬಗಳ ಆಚರಣೆಯ ಹಿನ್ನೆಲೆ, ವಿಧಾನ, ಸಂಭ್ರಮ ಎಲ್ಲವನ್ನೂ ಓದುಗರೊಂದಿಗೆ ಹಂಚಿಕೊಳ್ಳುತ್ತಾ ಅದರಲ್ಲೂ ಇಂದಿನ ಯುವಪೀಳಿಗೆಗೆ ಹಬ್ಬಗಳ ಆಚರಣೆಯ ಅರ್ಥ, ಅರಿವು ಹಾಗೂ ಉತ್ಸಾಹ ಮೂಡುವಂತೆ ಮಾಡಿದ್ದಾರೆ.
         ಸೋಲಿಗೆ ಹತಾಶರಾಗದೆ ಬದುಕಿನ ಏರಿಳಿತಗಳನ್ನು ಒಪ್ಪಿಕೊಂಡು ನಡೆವ ವ್ಯಕ್ತಿ ಅನ್ಯರ ಹೊಗಳಿಕೆ ತೆಗಳಿಕೆಗಳಲ್ಲಿ ತಾನು ಕಳೆದು ಹೋಗುವುದಿಲ್ಲ.ಏನೇ ಕಷ್ಟ ಬಂದರೂ ಮೈಗೊಡವಿ ನಿಲ್ಲುತ್ತಾನೆ ಎಂದು ಕುಗ್ಗದಿರಲಿ ಉತ್ಸಾಹ  ಲೇಖನದ ಮೂಲಕ ಹೇಳಿರುವುದು ಆತ್ಮವಿಶ್ವಾಸವನ್ನು ವೃದ್ಧಿಸಲು ಕರೆ ನೀಡಿದಂತೆ ಅನಿಸುತ್ತದೆ.


       ಪ್ರಾಣಿಗಳೆಡೆಗಿನ ಕರುಣೆ, ಬದುಕು ಹೇಗಿರಬೇಕೆಂಬ ಕಿವಿ ಮಾತು, ಸಕಾರಾತ್ಮಕ ಚಿಂತನೆ, ಭಾವೈಕ್ಯತೆ, ಉತ್ಸಾಹ,ಸಾಧಕರು, ಮಕ್ಕಳ ಪಾತ್ರ, ಕೊರೋನಾ ತಂದ ಸಂಕಷ್ಟ, ನೆನಪುಗಳು, ಗುರುವಿನ ಪಾತ್ರ, ಮಾದಕ ವ್ಯಸನದ ಬಗ್ಗೆ ಜಾಗೃತಿ, ಸಾಂಸ್ಕೃತಿಕ ಚಟುವಟಿಕೆಗಳು, ಇಂದಿನ ಶಿಕ್ಷಣ ವ್ಯವಸ್ಥೆ, ಭಾಷೆ..ಹೀಗೆ ಹಲವಾರು  ವಿಷಯಗಳ ನೆಲೆಯಲ್ಲಿ ನಿಂತು ಜಯಲಕ್ಷ್ಮಿ ತಮ್ಮ ಬರೆಹಗಳ ಮೂಲಕ ಮಾತನಾಡಿದ್ದಾರೆ.  ಇವರು ಹೇಳಲಿರುವದು ಮುಗಿದಿಲ್ಲ ಇನ್ನೂ ಸಾಕಷ್ಟು ಹೇಳೋದಿದೆ ಎಂಬಂತೆ.
         ಜಯಲಕ್ಷ್ಮಿ ಅವರ  ಈ ಚೊಚ್ಚಲ ಪುಸ್ತಕದಲ್ಲಿ  ನಲವತ್ತು ಲೇಖನಗಳು ಇದ್ದು ಸುಮಾರು ನೂರಾ ಹನ್ನೆರಡು ಪುಟಗಳಿವೆ. ಸುಂದರ ಮುಖಪುಟವನ್ನು ಹೊಂದಿರುವ  ಈ ಕೃತಿಗೆ ಹೆಚ್.ಟಿ. ಅನಿಲ್ ಚೆಂದದ ಮುನ್ನುಡಿ ಬರೆದಿದ್ದಾರೆ. ಬೆನ್ನುಡಿ ಬರೆಯುವ  ಅವಕಾಶ  ಸ್ವತಃ ನನಗೆ ಸಿಕ್ಕಿದ್ದು  ಕಡಲ ನೀರನ್ನು ಕೈಯಲ್ಲಿ ತುಂಬಿ ನೋಡುವ ತಾಳ್ಮೆ,‌ಕಾಡ ಮರವೊಂದರ ಆಲಿಂಗನದಲ್ಲಿ ಆಲಿಸುವಷ್ಟು ಮೌನ, ಹಗಲನ್ನು ಮುಗುಳು ನಗುವಿನಲ್ಲಿ ಬಂಧಿಸುವ ಬೆರಗು ಇವರ ಬರೆಹಗಳಿಗೆ ದಕ್ಕಲಿ.  ಎಂಬ ನಿರೀಕ್ಷೆಯಿಂದ ಶುಭ ಕೋರುತ್ತೇನೆ.

—————————-

ಸುನೀತ ಕುಶಾಲನಗರ

One thought on “ಜಯಲಕ್ಷ್ಮಿ.ಕೆ.ಮಡಿಕೇರಿಯವರ ಕೃತಿ,”ಚಪ್ಪಾಳೆಗೂ ಬೆಲೆ ಇದೆ” ಒಂದು ಅವಲೋಕನ ಸುನೀತ ಕುಶಾಲನಗರ

Leave a Reply

Back To Top