ಯಮುನಾ.ಕಂಬಾರ ಕವಿತೆ-ವೈರಿ ಮರ್ದನ

ಕಾವ್ಯ ಸಂಗಾತಿ

ಯಮುನಾ.ಕಂಬಾರ

ವೈರಿ ಮರ್ದನ

( ಹಿರಣ್ಯಕಶ್ಯಪನು ತನ್ನ ತಪದ ಬಲದಿಂದ ವರ ಪಡೆದು ಅಮರನಾದ. ದೇವ ದೇವತೆಗೆ ವೈರಿಯಾದದ್ದಲ್ಲದೇ ಸ್ವತಹಾ ತನ್ನ ಹೊಟ್ಟೆಯಯಲ್ಲಿ ಹುಟ್ಟಿದ ಮಗನಿಗೆ ಅನೇಕ ಕಷ್ಟಗಳನ್ನು ಕೊಟ್ಟು ಯಮ ಕಿಂಕರನಾದ. ಆದರೂ ಸಾಯದ ಪ್ರಹ್ಲಾದನಿಗೆ
ತನ್ನ ತಂಗಿ ಹೋಲಿಕಾಳನ್ನು ಬಳಸಿಕೊಂಡು ಅವಳ ಬೆಂಕಿಯಲ್ಲಿಯೂ ಸುಡದ ವರದಲ್ಲಿ ಇಟ್ಟನು. ಹರಿನಾಮ ಸ್ಮರಣೆಯ ಧ್ಯಾನದಲ್ಲಿದ್ದ ಪ್ರಹ್ಲಾದನನ್ನು ಬೆಂಕಿ ಸುಡದೇ ಹೋಲಿಕಾಳನ್ನು ಸುಟ್ಟಿತು. ಹೋಲಿಕಾಳ ಪಾಪ ಅವಳ ತಪಸಿದ್ದಿಯನ್ನು ಕೊಂದು ಹಾಕಿತು.ಪಾಪ ಎಂತಹ ಸಿದ್ದಿಯನ್ನು ನಾಶ ಮಾಡಬಲ್ಲುದು ಎಂಬುದನ್ನು ಜಗಕೆ ತೋರಿಸಿಕೊಟ್ಟಿತು.)

ದಿ:೨೧-೯-೨೩ ರ ವಿಜಯ ಕರ್ನಾಟಕದಲ್ಲಿ ಅಕ್ಷಯ ಕಥಾ ವಿಭಾಗದಲ್ಲಿ ” ಹೋಲಿಕಾ ಪಾಪ ಕೃತ್ಯ ಫಲಿಸದ ವರ ” ತಲೆ ಬರಹದಲ್ಲಿ ಪ್ರಕಟಗೊಂಡ ಕತೆಯನಾಧರಿಸಿದ
ಕವಿತೆ : ವೈರಿ ಮರ್ದನ
(ಭಾಮಿನಿ ಷಟ್ಪದಿಯಲ್ಲಿ)

ವೈರಿ ಮರ್ದನ

ಬೀಗ ಬೇಡವೊ ದುರುಳ ಮನವೇ
ತೇಗ ಬೇಡವು ನಿನ್ನಯಹಮಿಗೆ
ಬಾಗೆ ವೈರಿಯ ತೊಟ್ಟು ಬೆವರಗೆ ‘ಕಾಯ ಸುದ್ದಿಯದು ‘
ಮಾಗು ಮನದಲಿ ಮಥಿಸು ಮನವನು
ಮೂಗ ನೇರಕೆ ಸೆಣಸು ಸಲ್ಲದು
ತಾಗು ತಾಗುತ ಸಜ್ಜು ಗೊಳ್ಳುವ ‘ರಂಗ ಕಲೆಯದುವೊ ‘

ವರವ ಪಡೆದ ಹಿರಣ್ಯ ಕಶ್ಯಪ
ಮರವೆಯಿರದಾ ಸಾವ ಬದುಕದು
ಸರಿವ ದಿನವೂ ಕಷ್ಟ ತಂದಿತು “ದೇವ ದೇವತೆಗೆ”
ಕರಿಯ ಕಾಲವು ಮೂರು ಲೋಕಕೆ
ಹರಿಯ ಸ್ಮರಣೆಯು ಸಹನೆಯಾಗದು
ಹೊರಿಯ ಹೊರೆಯಾ ಭಾರ ಬಿದ್ದಿತು ” ಭಕುತ ಶಿಖಮಣಿಗೆ”

ಅರಿಯ ರೂಪದ್ವೇಷ ಬೇಡವು
ಹರಿಯು ಕರಿಯ ಕರಾಳ ಕಣ್ಣನು
ಬರಿಯೊ ನಿನ್ನಯ ನವ್ಯ ಪದಗಳ ಯುದ್ಧ ಲೋಕವನು
ಹರಿಯ ವೈರಿ ಹಿರಣ್ಯ ಕಶ್ಯಪ
ಪರಿಪರಿಯ ರೂಪವನು ರೂಪಿಸಿ
ಬರಿಯ ಬತ್ತಲ ರಂಗ ಭೂಮಿಯ ” ನಾಟ್ಯ ಶಕ್ತಿಯದೋ “

ಅರಿಯ ಮರ್ದನ ಹಗುರ ವಲ್ಲವು
ಬರಿಯ ಕೋಪವು ಶೂನ್ಯ ಸಾಧನೆ
ಕರಿಯ ಕತ್ತಲ ಧರಿಸಿ ಹೆರೆಯುವ ” ಘೋರ ಕ್ರೌರ್ಯವದು”
ಮರಿಯ ಬೇಡವೊ ಮನವ ಸುಡುವುದು
ಹೊರೆಯ ಹೊತ್ತವ ರಾತ್ರಿ ನರಳುವ
ಪೊರೆಯ ಬಿಡುವಾ ಜೀವ ದಹಿಕೆಯ ” ಸಾವಿನಾಟವದೋ”. ೪//

ತಾಸು ತಾಸಿಗೆ ಸಿಗದ ಮಾಯವು
ಕೂಸು ಕೂಡಾ ಸೆಣಸು ಪರಿಯದು
ಹಾಸು ನಿನ್ನಯ ಹಗೆಯ ಹಾಸಿಗೆ ಪರಮ ಭಕ್ತನಿಗೆ
ಏಸು ಗಂಟೆಯದೆಣಿಸ ಬೇಡವು
ಹಸುವು ಸಹಿತವು ಹುಲ್ಲು ಹುಡುಕುವ
ತುಸುವು ಸಹನಯು ಬೇಕು ಗೆಲ್ಲಲು ಹಗೆಯ ಕದನದೊಳು

ಉರಿದು ಹೋಯಿತು ಕಶ್ಯಪನ ತಪ
ಮುರಿದು ಬಿದ್ದಿತು ಸಿದ್ದ ವರವದು
ತೆರೆದು ಹರಿಯಾ ಧ್ಯಾನ ಶಕ್ತಿಯು “ಗೆದ್ದು ಬೆಳಕಾಯ್ತು”
ಬಿರಿದ ಬೂದಿಯು ಬಿಡಿಸಿ ಹೇಳಿತು
ಕರಿದ ಬೀಜವು ಮೊಳಕೆಯೊಡೆಯದು
ಹರಿದ ಚೀಲಿನ ವ್ಯರ್ಥ ಜೀವನ ” ಹೋಲಿಕಾ ತಪವು “


ಯಮುನಾ.ಕಂಬಾರ

Leave a Reply

Back To Top