ಡಾ.ಬಸಮ್ಮ ಗಂಗನಳ್ಳಿ ಕವಿತೆ-ಆ ದಿನಗಳು

ಕಾವ್ಯ ಸಂಗಾತಿ

ಡಾ.ಬಸಮ್ಮ ಗಂಗನಳ್ಳಿ ಕವಿತೆ-

ಆ ದಿನಗಳು

ಕಳೆದು ಹೋದ ದಿನಗಳೆಲ್ಲ ಎಷ್ಟು ಚಂದವು !
ಎಂದೆಂದೂ ಮರೆಯದಂತ ದಿವ್ಯ ಆನಂದವು ll

ನಾನು ನೀನೆಂಬ ಭಾವವು ಹೊಳೆಯದ ಸಂಬಂಧವು
ಜಾತಿ ಮತ,ಪಂಥವೆಣಿಸದ
ಪ್ರೀತಿ ,ಸ್ನೇಹ ಬಂಧವು ll

ಕೂಡಿ ಆಡಿ, ಹಂಚಿ ತಿಂದು
ನಕ್ಕು ನಲಿದ ಸಂಭ್ರಮ
ಬೇಕುಗಳ ಪಟ್ಟಿ ಇರದ
ಸಿಕ್ಕಷ್ಟು ತೃಪ್ತತೆಯು ll

ಬಡವ ಬಲ್ಲಿದ ಭೇದವಿಲ್ಲದ
ಕೇಡು ಯಾರಿಗೂ ಬಗೆಯದ ನೋಡುವ ದೃಷ್ಟಿಕೋನದಲಿ ಕಾಣಲಿಲ್ಲ ನಮಗೆ ಭಿನ್ನವು ll

ಕಾಡುವ ಸಾವಿರ ಪ್ರಶ್ನೆಗಳಿಗೆ ಬಿಚ್ಚು ಮನದ ಉತ್ತರಗಳು
ಚುಚ್ಚು ಕೊಂಕು ನುಡಿಗಳು ಸನಿಹ ನಮಗೆ ಸುಳಿಯಲಿಲ್ಲ ll

ಗುರುಗಳೆಂದರೆ ಭಕ್ತಿ ನಮಗೆ ಸತ್ಯ ಸಮತೆ ,ನ್ಯಾಯ ನೀತಿ ನಾಡು ನುಡಿ ,ದೇಶಭಕ್ತಿ
ಉಕ್ಕಿ ಹರಿದ ಆ ದಿನಗಳು ll

ಜಾತ್ರೆ ಉತ್ಸವ ಒಂದು ಬಿಡದೆ ಮದುವೆ ಮುಂಜಿವೆ ಎಲ್ಲ ಕಡೆ ಕರೆಯಬೇಕೆಂಬ ನಿಯಮಕೆ ಕರಾರು ಎಂದೂ ಮಾಡಲಿಲ್ಲ ll

ಮಳೆ ಬಿಸಿಲು ಗಾಳಿ ಚಳಿಯ ಲೆಕ್ಕಿಸದ ಹತ್ತಾರು ಆಟಗಳು
ಪಾಠಕಿಂತ ಆಟ ಮಿಗಿಲು ಎನಿಸಿದ ದಿನಗಳೆಲ್ಲಿ ಈಗ?ll

ಆಡಿ, ಮಾಡಿ, ನೋಡಿ ಕಲಿತ
ಅನುಭವದ ಸ್ವಯಂ ಪಾಠವು
ಅನುಭೂತಿಯ ಆನಂದದ ನೆನಪುಗಳು ಅತಿ ಸುಂದರ ll

ಯಾರ ಆಟ ಕೆಡಿಸದ ನಾವು ಅಸೂಯೆ ಇರದೆ ಬೆಳೆದೆವು ಶಾಲೆಯ ಅಂಗಳ ಕಸಗುಡಿಸಿ ಶಿಸ್ತು ಸ್ವಚ್ಛತೆಯ ಅರಿತೆವು ll

ಹಾಲು ತುಪ್ಪ ಮೊಸರು ಬೆಣ್ಣೆ ಎಲ್ಲ ತಿಂದು ಗಟ್ಟಿಯಾದೆವು
ಕಷ್ಟ ನಷ್ಟ ಅರಿಯದ ವಯವು
ಎಷ್ಟು ಚಂದ! ಆ ದಿನಗಳು ll

ಮತ್ತೆ ಮತ್ತೆ ಮರಳಿ ಬಾರದ ಮೆತ್ತಗೆ ಮೆಲು ದನಿಯಲಿ ‘ನಗುತಿರು ನೀ ಎಂದಿಗೂ’ ಸಂದೇಶ ನಮಗೆ ಎಂದಿಗೂll


ಡಾ.ಬಸಮ್ಮ ಗಂಗನಳ್ಳಿ

Leave a Reply

Back To Top