ಡಾ ಅನ್ನಪೂರ್ಣ ಹಿರೇಮಠ-ಒಲವಿಗೆ ನೇಣು

ಕಾವ್ಯಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಒಲವಿಗೆ ನೇಣು

ಆಸೆಯ ಹಕ್ಕಿ, ಹಂಬಲದಿ ಬಿಕ್ಕಿ ಬಿಕ್ಕಿ
ಅಳುತಿದೆಯೋ ಚುಕ್ಕಿ
ಹಾರಿ ಹಾರಿ ಸೋತ ರೆಕ್ಕೆ
ಅದೇಕೋ ಮರುಗಿ ಸೊರಗಿ
ಜೀವ ಕೊರಗಿ ಮೂಕವಾಗಿದೆ
ಬೀಳುವ ಭಯದಲಿ ನೇತಾಡುತಿದೆ ಚುಕ್ಕಿ//

ಅರಿಯದಲೇ ಪ್ರೀತಿ ಬಲೆಗೆ ಸಿಕ್ಕಿ
ಮೋಹಪಾಶದಿ ಬಂಧಿಯಾಗಿ
ಕನವರಿಕೆಯ ವೇದನೆಯ
ನುಂಗಿ ನುಂಗಿ ಗಂಟಲು ಬಿಗಿದು
ಕಣ್ಣೀರು ಬತ್ತಿ ರಕ್ತದ ಕೊಡಿ
ಹರಿ ಹರಿದು ಗಲ್ಲ ತಗ್ಗಾಗಿದೆ ಚುಕ್ಕಿ//

ಭಾವದಲೆಯು ಉಕ್ಕಿ ಉಕ್ಕಿ
ಪ್ರೇಮದ ಸುಳಿಗೆ ಸಿಕ್ಕಿ
ವಿರಹ ವೇದನೆ ಗಗನಮುಟ್ಟಿ
ಸುಡುತಿದೆ ಜೀವ ಚುಕ್ಕಿ
ಬಯಕೆಗಳ ಒಡಲಲ್ಲಿ
ಧಗದಗಿಸುತಿದೆ ನೆನಪಿನಂಗಳ
ಕೆನ್ನಾಲಿಗೆ ಚಾಚಿ ಎಲ್ಲಾ ಬಾಚಿ ಚುಕ್ಕಿ//

ಉಕ್ಕೊ ಪ್ರೀತಿಯ ಬತ್ತಿಸಲಾಗದೆ
ಒಲವಿಗೆ ನೇಣು ಹಾಕಲಾಗದೆ
ಬಳಲಿ ಬಳಲಿ ಮುಗ್ಧ ಮನ
ಪರಿತಪಿಸುತಿದೆ ದಾರಿ ಕಾಣದೆ
ಪಾಶ‌ ಬಿಗಿಯಾಗುತಿದೆ
ಕೊರಳ ಕೊಯ್ಯುವ ಮೋಸದೆ ಚುಕ್ಕಿ//

ಯಾಕೀ ವೇದನೆ ಏಕೆ ಶೋಧನೆ
ಯಾವ ಪಾಪ ಸೋಕಿ
ಯಾರ ಕೆಟ್ಟ ದೃಷ್ಟಿ ತಾಕಿ
ವಿಧಿಯಾಟದೆ ಕೈ ಗೊಂಬೆ
ಚೆಲ್ಲಾಟಕೆ ಗೋಣು ಮುರಿದು
ಆತಂಕ ಭಯದೆ ಹಿಂಸೆಯೇ ಚುಕ್ಕಿ//

ಕೇಳುವವರಿಲ್ಲದ ಕಾಡಲಿ
ಕ್ರೂರ ಪ್ರಾಣಿಗಳ ನಡುವೆ ಎಸೆದಂತೆ
ಕಂಗೆಟ್ಟಿದೆ ಪುಟ್ಟ ಹ***
ರೆಕ್ಕೆ ಮುರಿದು ಪುಕ್ಕ ಹರಿದು
ಅನಾಥ ಶವದಂತೆ ಆಕ್ರಂದನ
ಬಳಲಿಕೆಯ ಬೇಗೆ ತುಂಬಿ ಹೊಗೆ
ಕರುಣೆಗಿಲ್ಲ ಇಲ್ಲಿ ಜಾಗೆ
ಅನುಕಂಪವಿಲ್ಲ ನಿರ್ಧಯಿ ನೀ ಚುಕ್ಕಿ//


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top