ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರೊ ಸಿದ್ದು ಸಾವಳಸಂಗ

‘ಬರೆಯುವ ಮೊದಲು ಒಂದು ಕೆಲಸ ಹುಡುಕಿ’


ಹೆಂಡತಿಗೆ ಹೇಳಿದೆ ನಾನೊಬ್ಬ ಕವಿ
ನಿನಗಿಲ್ಲ ಕೇಳುವ ಒಳ್ಳೆಯ ಕಿವಿ !
ಅವಳೆಂದಳು ನಿಮ್ಮ ಕವನ – ಗಿವನ
ನನಗೇತಕೆ ಅದರ ಗೊಡವೆ !
ತರುವುದಾದರೆ ತನ್ನಿ ನನ್ನ ಕೊರಳಿಗೆ ಒಡವೆ
ಬರೆದು ಬರೆದು ಹಾಳು ಮಾಡದಿರಿ ಹಾಳೆ !
ಬಾಲ್ ಪೆನ್ನಿಗೆ ನೀಡಬೇಡಿ ಚಿತ್ರಹಿಂಸೆ !
ಏನು ಮಹಾಕವನ ?
ಹೆಂಡತಿಯನ್ನು ಹಂಗಿಸಿ ಹಾಸ್ಯ ಬರೆಯುವ
ನಿಮ್ಮ ಬುದ್ಧಿ ನನಗೆ ಗೊತ್ತಿಲ್ಲವೇ ?
ಬಿಡಿ ಬಿಡಿ ಏತಕೆ ಈ ಬಡಿವಾರ ?
ಆ ಸಭೆ ಈ ಸಭೆಯೆಂದು ಒಣಒಣ
ತಿರುಗಿದ್ದು ನನಗೆ ಗೊತ್ತಿಲ್ಲವೇ ?
ಬಂದಿರಬಹುದು ನಾಲ್ಕಾರು ಶಾಲು ಹೂವು
ಅವುಗಳನ್ನೇನು ಕುಳಿತು ತಿನ್ನಲಾದಿತೆ ?
ಬರೆದು ಬಿಸಾಡಿ ಒಗೆದ ಹಾಳೆಗಳನ್ನು
ಎತ್ತಿ ಕಸದ ಬುಟ್ಟಿಗೆ ಹಾಕುವುದೇ ನನ್ನ ಕಾಯಕ !
ನೀವು ಮಾತ್ರ ಫೋಜು ಕೊಡುವ ಕವಿ ನಾಯಕ !
ಮಕ್ಕಳಿಗೆ ಚೆನ್ನಾಗಿ ಓದಿಸಿದ್ದರೆ ಅವರೆ
ತರಬಹುದಿತ್ತು ಕೈ ತುಂಬ ಕಾಸು !
ನಿಮ್ಮ ಕವಿತೆಯಿಂದ ನಮಗಿಲ್ಲ
ಮನೆಯಲ್ಲಿ ಚೆನ್ನಾದ ನೆಲ ಹಾಸು !
ಬರೆದ ಪುಸ್ತಕಗಳು ಒಂದರ ಮೇಲೆ ಒಂದು ಒಟ್ಟಿ
ಮಾರಾಟವಿಲ್ಲದೆ ಎಲ್ಲವೂ ಹಾಗೆ ಇವೆ ಗಟ್ಟಿ !
ಕುಳಿತು ಕುಳಿತು ನಿಮ್ಮ ಕಾಲು ಮರುಗಟ್ಟಿ
ಬರೆದು ಬರೆದು ಎಲ್ಲವೂ ಮೇಜಿನ ಮೇಲೆ ಇವೆ ಒಟ್ಟಿ!
ಕವನ ಬರೆಯಬೇಡಿ ಎಂದೇನು ಹೇಳಲಾರೆ
ಬರೆಯುವ ಮೊದಲು ಒಂದು ಕೆಲಸ ಹುಡುಕಿ !
ಕೈತುಂಬ ಸಂಬಳ ತಂದು
ಸುಖವಾಗಿ ನಮ್ಮನ್ನು ಸಾಕಿ !
ಆಗಬೇಕಾದರೆ ಪತ್ರಿಕೆಗಳಿಗೆ ಬರೆದು ಹಾಕಿ !!


ಪ್ರೊ ಸಿದ್ದು ಸಾವಳಸಂಗ

About The Author

1 thought on “ಪ್ರೊ ಸಿದ್ದು ಸಾವಳಸಂಗ ಅವರ ಕವಿತೆ ‘ಬರೆಯುವ ಮೊದಲು ಒಂದು ಕೆಲಸ ಹುಡುಕಿ’”

Leave a Reply

You cannot copy content of this page

Scroll to Top