ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ತರಹಿ ಗಜಲ್
ತರಹಿ ಗಜಲ್
(ಶಮಾ ಅವರ ಮತ್ಲ ಬಳಸಿ)
ಅಡಿಯಿಟ್ಟ ನೆಲದಲ್ಲಿ ಅರಳಿದವು ಹೂವುಗಳು ಮತ್ತೊಮ್ಮೆ ಬರಬಾರದೇ
ಬರಗೆಟ್ಟ ನೋವಿನಲ್ಲಿ ನರಳಿದವು ಭಾವಗಳು ಮತ್ತೊಮ್ಮೆ ಬರಬಾರದೇ
ಹೆಪ್ಪಿಟ್ಟ ನೋವಿನಲ್ಲಿ ತೇಲಿದವು ಕನಸುಗಳು ಮತ್ತೊಮ್ಮೆ ಬರಬಾರದೇ
ಅಪ್ಪಿಟ್ಟ ಮನಸಿನಲಿ ನಲುಗಿದವು ಭಾವಗಳು ಮತ್ತೊಮ್ಮೆ ಬರಬಾರದೇ
ಮುಸುಕಿಟ್ಟ ಎದೆಯಲ್ಲಿ ಬಣ್ಣಗಳು ಬಿಲ್ಲಾದವು ಮತ್ತೊಮ್ಮೆ ಬರಬಾರದೆ
ಅದುಮಿಟ್ಟ ಆಸೆಗಳು ಗರಿಗೆದರಿ ಸೊಲ್ಲಾದವು ಮತ್ತೊಮ್ಮೆಬರಬಾರದೆ
ಬಚ್ಚಿಟ್ಟ ಗಾಯಗಳು ಕೈ ಬೀಸಿ ಕರೆದಿಹವು ಮತ್ತೊಮ್ಮೆ ಬರಬಾರದೇ
ಮುಚ್ಚಿಟ್ಟ ಪದಗಳು ಕವನ ಬರೆದಿಹವು ಮತ್ತೊಮ್ಮೆ ಬರಬಾರದೇ
ಹಚ್ಚಿಟ್ಟ ಹಣತೆಯಲಿ ಒಲವು ಬೆಳಕಾಗಿಹುದು ಮತ್ತೊಮ್ಮೆ ಬರಬಾರದೇ
ಎತ್ತಿಟ್ಟ ನೋಟಗಳು ಮತ್ತೆ ನೂರಾದವು ಮತ್ತೊಮ್ಮೆ ಬರಬಾರದೇ
ಕಾಪಿಟ್ಟ ಪ್ರೀತಿಯದು ಹೃದಯ ಹಚ್ಚೆಯಾಗಿಹುದು ಮತ್ತೊಮ್ಮೆ ಬರಬಾರದೇ
ಕಪ್ಪಿಟ್ಟ ಮೋಡಗಳು ಚಂದ್ರಕಿರಣ ತೂರಿಹವು ಮತ್ತೊಮ್ಮೆ ಬರಬಾರದೇ
ಒತ್ತಿಟ್ಟ ಅಳಲುಗಳು ನಕ್ಕು ಹಾಡಾದವು ಮತ್ತೊಮ್ಮೆ ಬರಬಾರದೇ
ಮುತ್ತಿಟ್ಟ ಹೃದಯಗಳು ಅತ್ತು ಹಗುರಾದವು ಮತ್ತೊಮ್ಮೆ ಬರಬಾರದೇ
ಕೆತ್ತಿಟ್ಟ ಮೌನವದು ಮತ್ತೆ ಮಾತಾಯಿತು ಮತ್ತೊಮ್ಮೆ ಬರಬಾರದೇ
ಪುಟಕಿಟ್ಟ ನುಡಿಗಳವು ಎದೆ ಮಿಡಿತವಾದವು ಮತ್ತೊಮ್ಮೆ ಬರಬಾರದೇ
ಪಣಕಿಟ್ಟ ಪ್ರೀತಿ ಪಣ್ಯವಸ್ತುವಾಗದೇ ಬಾಳ ಹಸಿರಾಗಿಹುದು ಮತ್ತೊಮ್ಮೆ ಬರಬಾರದೇ
ಮೆಲುಕಿಟ್ಟ ಶಶಿಯ ಕನವರಿಕೆ ಇಂದುವಿನ ಉಸಿರಾಗಿಹುದು ಮತ್ತೊಮ್ಮೆ ಬರಬಾರದೇ
ಇಂದಿರಾ ಮೋಟೆಬೆನ್ನೂರ.