ರಮೇಶ ಸಿ ಬನ್ನಿಕೊಪ್ಪ ಹಲಗೇರಿವರ ಕವಿತೆ-ಹೈ ಲೈಟರ್ ಪೆನ್ನು ಮತ್ತು ನಾನು…

ಕಾವ್ಯ ಸಂಗಾತಿ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಹೈ ಲೈಟರ್ ಪೆನ್ನು ಮತ್ತು ನಾನು…

ಬದುಕ ಹೊತ್ತಿಗೆಯ
ಓದು ಹದವಾಗಿರಲಿ
ಅದರ ಸಾರವ
ತಿಳಿದು, ಉಳಿದು
ಎದೆಯೊಳಗಿಳಿಯಲಿ
ಪ್ರೀತಿ ಬತ್ತದಿರಲಿ…

ಸ್ಮರಣೆಗೆ ಮುಮ್ಮೆದಳು ಮಧ್ಯೆಮೆದಳು
ಹಿಮ್ಮೆದುಳು ಕುಣಿದಾಡಲಿ ನಿತ್ಯ..
ಕಣ್ಣುಗಳ ನರಗಳು
ಬಲಿಷ್ಠಗೊಳ್ಳುತ್ತಾ, ಸದಾ
ಉಳಿಯಲೆಂದು
ಬಾಳ ಹೊತ್ತಿಗೆಯ ಸತ್ಯ..!!

ತಕ್ಷಣ..
ಹೊಚ್ಚ ಹೊಸ ಹೈಲ್ಟರ್ ಪೆನ್ನು ಕೊಂಡೆ
ಮಿರ್ರಿ ಮಿರ್ರಿ ಮಿಂಚುತಿತ್ತು
ಹಳದಿಯ ಹೊಳಪು
ಹೊಸಮಾಲಗಿತ್ತಿಯ ಒನಪು…
ನನ್ನ ಕೈಯಲ್ಲಿತ್ತು
ಅದೇ ಹೈಲೈಟರ್ ಪೆನ್ನು…

ಬರೆದರೆ…

ಅಕ್ಷರಗಳು ಮಿಣುಕುತ್ತವೆ
ಓದಿದ್ದು ಉಳಿಯುತ್ತದೆ…
ಅಭಿದಮನಿ ಅಪದಮನಿ ಮುಮ್ಮೆದುಳು ಹೊಕ್ಕು
ಸಮಾಜದ ದೃಷ್ಟಿಯಲ್ಲಿ
ಮಿನುಗಿಸುತ್ತದೆ….

ನೂರೊಂದು ಕನಸು ಎದೆಯಗೂಡಿಗೆ

ಅರೇ..

ಹೊಟ್ಟೆಗಳಿಗೆ ಕಿಚ್ಚು ಬಿದ್ದಿತು
ಕಣ್ಣುಗಳು ಕುಕ್ಕಿದವು
ಕೆಲವು ಮನಸುಗಳು
ಮಳಮಳಿಸಿದವು
ಕೋರೆಹಲ್ಲುಗಳು ಕಟ ಕಟನೆ ಕಡಿದವು
ಕಾಲುಕೆದರಿ ಮುಂಗೈಮುಷ್ಠಿ ಮುಂದೆ ಮಾಡಿದವು
……

ಹೈಲೈಟರ್ ಪೆನ್ನಿನ ಕವಚ ಕರಿದು..!
ಅದರ ಕ್ಯಾಪ್ ಹಳದಿ
ಹಿಂದಿನ ನಾಬ್
ಅದೇ ಹೇಳಿದನಲ್ಲ.. ಅದೇ
ಹಳದಿ

ಎಂತಹ ಮನುಷ್ಯರು
ಎಂತಹ ದುಷ್ಟರು

ಕಪ್ಪು ಬಣ್ಣದ್ದು ಎನ್ನುವ ಒಂದೇ ಕಾರಣಕ್ಕೆ

“ಮೊನ್ನೆ ಮೊನ್ನೆ ಬಂದ
ಈ ಹೈಲೈಟರ್ ಪೆನ್ನು
ಇದರದು ಎಷ್ಟೊಂದು ಧಿಮಾಕು…!”

ಕುಹಕಮಾತಿಗೆ
ನನ್ನ ಕೈಹಿಂದ ಕಿತ್ತರು

ಕೊಸರಾಡಿದೆ, ಶಕ್ತಿ ಮೀರಿ ಪ್ರಯತ್ನಿಸಿದೆ, ದುಷ್ಟ ಶಕ್ತಿಗಳ ಮುಂದೆ
ಸೋತು ಹೋದೆ..!

ಎತ್ತಿ ಬೀಸಾಡಿದರು..!
ಟಾರು ರಸ್ತೆಯ ಹೊಡೆತಕ್ಕೆ
ಹೈಲೈಟರ್ ಪೆನ್ನಿನ ಕಪ್ಪಾದ ಕವಚ ಕಿತ್ತು ಬಂತು..!!

ನೊಂದೆ..

ಸೋತಿದ್ದೇನೆ ಇನ್ನೂ ಸತ್ತಿಲ್ಲ..!!

ಪ್ರೀತಿಯಿಂದಲೇ
ಬಿಳಿಪ್ಯಾಚ್ ಸುತ್ತಿ
ಕೈಗೆತ್ತಿಕೊಂಡೆ
ಗಾಯಗೊಂಡ ಮಗುವನೆತ್ತಿಕೊಂಡ ಹಾಗೇ..!!

ಹೊತ್ತಿಗೆಯ ಪುಟಗಳಿಗೆ
ಮತ್ತೆ ಮತ್ತೆ ಮೂಡಿಸಿದೆ…
ಅದೇ ಹೊಳಪು..
ಅದೇ ಮಿರ್ರಿ ಮಿರ್ರಿ ಮಿಂಚು..!!

ಹೈಲೈಟರ್ ಪೆನ್ನು ಮತ್ತು ನಾನು ಸದಾ ಜೊತೆಗೆ ‌…
ಬಣ್ಣಗಳ ಹಂಗಿಲ್ಲ
ನಮ್ಮಿಬ್ಬರಿಗೆ ಹೊಳೆಯುವುದಷ್ಟೇ ಗೊತ್ತು…


ರಮೇಶ ಸಿ ಬನ್ನಿಕೊಪ್ಪ ಹಲಗೇರಿ


Leave a Reply

Back To Top