ಕಥಾಸಂಗಾತಿ
‘ಆ ಗುರುತು’
ಜಿ. ಹರೀಶ್ ಬೇದ್ರೆ ಅವರ ಪತ್ತೇದಾರಿಕಥೆ
ಅದು ವಿರಳಾತೀವಿರಳ ಕಾರ್ಯಕ್ರಮ ಎಂದು ಹೇಳಬಹುದು, ಏಕೆಂದರೆ ಪೋಲಿಸ್ ಇಲಾಖೆಯ ವತಿಯಿಂದಲೇ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿ ಅದರಲ್ಲಿ ಖಾಸಗಿ ಪತ್ತೆದಾರರಾದ ರಾಘವೇಂದ್ರ ಇನಾಂದಾರ್ ರವರನ್ನು ನಗರ ಠಾಣೆಯ ಇನ್ಸ್ಪೆಕ್ಟರ್ ಮುನಾಫ್ ಪಾಟೇಲ್ ಮನಃಪೂರ್ವಕವಾಗಿ ಹೊಗಳಿ ಶಾಲು ಹೊದಿಸಿ, ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದ್ದರು.
ಮದುವೆಯಾಗಿ ಆರು ತಿಂಗಳು ಕಳೆಯುತ್ತಾ ಬಂದರೂ, ರಜೆ ಸಿಗದ ಕಾರಣ ಮುನಾಫ್ ತಮ್ಮ ಮಡದಿಯೊಂದಿಗೆ ಯಾವ ಪ್ರವಾಸಕ್ಕೂ ಹೋಗಿರಲಿಲ್ಲ. ತನ್ನ ಗಂಡನ ಕೆಲಸದ ಬಗ್ಗೆ ಅರಿವಿದ್ದ ಅವರ ಮಡದಿ ಈ ಕುರಿತು ಎಂದೂ ಬೇಜಾರಾಗದಿದ್ದರೂ ಆಗೊಮ್ಮೆ ಈಗೊಮ್ಮೆ ಏನ್ರೀ ನಮ್ಮ ಹನಿಮೂನ್ ಮಕ್ಕಳ ಮದುವೆ ಆದಮೇಲೆ ಹೋಗೋದೊ ಹೇಗೆ ಎಂದು ತಮಾಷೆಗೆ ಕಾಲೆಳೆಯುತ್ತಿದ್ದರು. ಇದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಮುನಾಫ್ ತಮ್ಮ ಹಿರಿಯಾಧಿಕಾರಿಗಳಿಗೆ ಹೇಳಿ, ಹತ್ತು ದಿನಗಳ ರಜೆ ಪಡೆದು, ಒಂದು ವಾರದ ದಕ್ಷಿಣ ಭಾರತ ಪ್ರವಾಸಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.
ಮುನಾಫ್ ದಂಪತಿಗಳು ಅಂದುಕೊಂಡ ಪ್ರವಾಸಕ್ಕೆ ಹೊರಡಲು ಇನ್ನೂ ಆರು ದಿನಗಳು ಮಾತ್ರ ಬಾಕಿ ಇತ್ತು. ಇದಕ್ಕಾಗಿ ಇಬ್ಬರೂ ತಯಾರಿ ಮಾಡಿಕೊಳ್ಳುತ್ತಿರುವಾಗಲೇ ಅದೊಂದು ದಿನ ಮುಂಜಾನೆಯೇ ಸ್ಟೇಷನಿನಿಂದ ನಗರದ ಗಣ್ಯವ್ಯಕ್ತಿಯಾದ ಮಲ್ಲೇಶ್ ರವರ ಕೊಲೆಯಾದ ಬಗ್ಗೆ ಕರೆಬಂತು. ವಿಷಯ ತಿಳಿಯುತ್ತಿದ್ದಂತೆ ಠಾಣೆಯಿಂದ ಜೀಪ್ ತರಿಸಿಕೊಂಡು ಘಟನಾ ಸ್ಥಳಕ್ಕೆ ಮುನಾಫ್ ಹೊರಟರು.
ಮಲ್ಲೇಶ್ ಹುಟ್ಟು ಶ್ರೀಮಂತರೆನಲ್ಲ, ನಿಯತ್ತಿನಿಂದ ಕಷ್ಟಪಟ್ಟು ದುಡಿದು, ಹಂತಹಂತವಾಗಿ ಮೇಲೆ ಬಂದವರು. ಅವರು ಕೈಹಾಕಿದ ವ್ಯಾಪಾರ ಚೆನ್ನಾಗಿ ನಡೆದು ಊರಿನ ಹೆಸರಾಂತ ವ್ಯಾಪಾರಿಯ ಪಟ್ಟವನ್ನು ದೊರಕಿಸಿಕೊಟ್ಟಿತ್ತು. ಮಲ್ಲೇಶ್ ರವರಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ. ಮೂರೂ ಮಕ್ಕಳ ಮದುವೆಯಾಗಿ ಅವರು ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಹೆಂಡತಿ ಕಲ್ಯಾಣಿ ಕರೋನಾದಿಂದಾಗಿ ಶಿವನ ಪಾದ ಸೇರಿ ಮೂರು ವರ್ಷಗಳಾಗಿವೆ. ಕರೋನ ಕಾರಣವಾಗಿ ಮನೆಯಲ್ಲಿ ಇರಲು ಆರಂಭಿಸಿದ ಮಲ್ಲೇಶ್, ಮಡದಿ ಕಳೆದುಕೊಂಡ ಮೇಲೆ ಮಂಕಾಗಿ, ವ್ಯವಹಾರದ ಎಲ್ಲಾ ಜವಾಬ್ದಾರಿಯನ್ನು ಮಗ ರಾಜೇಶನಿಗೆ ಒಪ್ಪಿಸಿ ತೀರಾ ಅಪರೂಪಕ್ಕೆ ಮಾತ್ರ ವ್ಯವಹಾರದ ಕಡೆ ಗಮನ ಕೊಡುತ್ತಿದ್ದರು. ಒಟ್ಟಿನಲ್ಲಿ ಹೇಳಬೇಕೆಂದರೆ ಅವರದು ಯಾವುದೇ ಕುಂದುಕೊರತೆಗಳಿಲ್ಲದ ಸಂತೃಪ್ತ ಜೀವನ.
ಇಂತಹ ವ್ಯಕ್ತಿಯನ್ನು ಅವರದೇ ಮನೆಯಲ್ಲಿ, ಅವರು ಮಲಗುವ ಮಂಚದ ಮೇಲೆಯೇ ಯಾರೋ ದುಷ್ಕರ್ಮಿಗಳು ಉಸಿರುಗಟ್ಟಿಸಿ ಸಾಯಿಸಿದ್ದರು. ಇವರ ಇಬ್ಬರೂ ಹೆಣ್ಣು ಮಕ್ಕಳ ಮದುವೆಯಾಗಿದ್ದರಿಂದ ಅವರಿಬ್ಬರೂ ತಮ್ಮ ಗಂಡಂದಿರ ಊರಿನಲ್ಲಿ ಇದ್ದರು. ಈಗ ಮನೆಯಲ್ಲಿ ಇರುತ್ತಿದ್ದದ್ದು ತಂದೆ ಮತ್ತು ಮಗ ಮಾತ್ರ. ಸೊಸೆ ಎರಡನೇ ಹೆರಿಗೆಗಾಗಿ ತನ್ನ ತವರುಮನೆಗೆ ಮೊದಲ ಮಗುವಿನೊಂದಿಗೆ ಹೋಗಿದ್ದಳು. ಕಳೆದ ರಾತ್ರಿ, ತಂದೆ ಮಗ ಇಬ್ಬರೂ ಆಡಿಗೆಯವಳು ಮಾಡಿ ಬಡಿಸಿದ್ದನ್ನು ಊಟ ಮಾಡಿದ್ದಾರೆ. ನಂತರ ರಾಜೇಶ್ ಕೇವಲ ಮೂವತ್ತು ಕಿಲೋಮೀಟರ್ ದೂರದಲ್ಲಿ ಇರುವ ಹೆಂಡತಿಯ ಊರಿಗೆ, ಮಡದಿ ಮತ್ತು ಮಗುವನ್ನು ನೋಡಿ ಬೆಳಿಗ್ಗೆ ಬರುವೆನೆಂದು ಹೊರಟಾಗ, ಸ್ವತಃ ಮಲ್ಲೇಶ್ ರವರೇ ಹೊರಬಂದು ಮಗ ಹೊರಟ ಮೇಲೆ ಗೇಟ್ ಹಾಕಿದ್ದು ಸ್ಪಷ್ಟವಾಗಿ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇವರು ಅಲ್ಲೇ ಕಾಂಪೌಂಡಿನಲ್ಲಿ ವಾಕ್ ಮಾಡುವಾಗಲೇ ಆಡಿಗೆಯವಳು ಹೋಗಿಬರುವೆ ಎಂದು ಹೇಳಿ ಹೊರಟ್ಟಿದ್ದು ದಾಖಲಾಗಿತ್ತು. ಮತ್ತೆ ಅದೇ ಅಡುಗೆಯವಳು ಬೆಳಿಗ್ಗೆ ಆರು ಗಂಟೆಗೆ ಬಂದು ಗೇಟ್ ತೆಗೆಯುವವರೆಗೂ ಯಾರೂ ಬಂದಿರಲಿಲ್ಲ. ಅಲ್ಲದೆ, ಮನೆಯ ವಾಚ್ ಮ್ಯಾನ್ ಕೊಡ ಕಾಂಪೌಂಡಿನ ಒಳಗೇ ಇದ್ದದ್ದು ಅಲ್ಲಿನ ಎರಡು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಮಲ್ಲೇಶ್ ಪ್ರತಿದಿನ ಬೆಳಿಗ್ಗೆ ಆರೂವರೆ ಒಳಗೆ ಸಿದ್ದರಾಗಿ ಆಡಿಗೆಯವಳು ಕೊಡುವ ಒಂದು ಸ್ಪೂನ್ ಮೆಂತೆ ಕಾಳು ನುಂಗಿ, ಒಂದು ಕಪ್ ಬಿಸಿ ನೀರು ಕುಡಿದು ಹತ್ತಿರದ ಪಾರ್ಕಿಗೆ ವಾಕಿಂಗ್ ಹೋಗುವುದು ಅಭ್ಯಾಸ. ಅದಕ್ಕಾಗಿಯೇ ಅಡುಗೆಯವಳು ಪ್ರತಿದಿನ ಬೆಳಿಗ್ಗೆ ಆರು ಗಂಟೆಗೆ ಬರುತ್ತಾಳೆ. ಅಂದು ಏಳು ಗಂಟೆಯಾದರೂ ಮಲ್ಲೇಶ್ ತಮ್ಮ ರೂಮಿನಿಂದ ಹೊರಗೆ ಬಂದಿರಲಿಲ್ಲ. ಏಕೆಂದು ನೋಡಲು ಹೋದಾಗ ರೂಮಿನ ಬಾಗಿಲು ಅರೆ ತೆರೆದಿತ್ತು. ಪೂರ್ತಿ ತಳ್ಳಿ ನೋಡಿದಾಗ , ಅವರು ವಿಚಿತ್ರ ರೀತಿಯಲ್ಲಿ ಮಲಗಿದ್ದರು. ಅದನ್ನು ನೋಡಿ ಗಾಬರಿಯಾಗಿ ನಿಂತಲ್ಲೇ ಕೂಗಿ ಕರೆದರು ಯಾವ ಪ್ರತಿಕ್ರಿಯೆಯೂ ಬಾರದನ್ನು ನೋಡಿ, ಓಡಿ ಹೋಗಿ ವಾಚ್ ಮ್ಯಾನಿಗೆ ಹೇಳಿದಳು. ಅವನು ಬಂದು ಜೋರಾಗಿ ಕೂಗಿ, ಬಾಗಿಲು ಬಡಿದಾಗಲೂ ಏನೂ ಉತ್ತರ ಬರಲಿಲ್ಲ. ಇಬ್ಬರಿಗೂ ಏನು ಮಾಡಲು ತೋಚದೆ ಮುಂಬಾಗಿಲ ಬಳಿ ಬಂದಾಗ, ಎದುರು ಮನೆಯ ಗೌಡರು ಕಂಡರು. ಇಬ್ಬರೂ ಓಡೋಡಿ ಹೋಗಿ ಅವರನ್ನು ಬಿಡದೆ ಕರೆದುಕೊಂಡು ಬಂದರು. ಅವರು ತಮಗೆ ತಿಳಿದಂತೆ ಮಲ್ಲೇಶರ ಕೈಹಿಡಿದು, ಎದೆಯ ಮೇಲೆ ಕೈಯಿಟ್ಟು, ಮೂಗಿನ ಬಳಿ ಬೆರಳಿಟ್ಟು ಉಸಿರು ನಿಂತಿರುವುದು ಖಾತ್ರಿಯಾದರೂ, ನಾನು ಡಾಕ್ಟರಿಗೆ ಕರೆ ಮಾಡಿ, ಬರಲು ಹೇಳುತ್ತೇನೆ, ನೀವು ಇವರ ಮಗ ರಾಜೇಶನಿಗೆ ಹೇಳಿ ಎಂದರು. ರಾಜೇಶ್ ಬರುವ ಮೊದಲೇ ಬಂದ ಡಾಕ್ಟರ್ ಎಲ್ಲಾ ಪರೀಕ್ಷೆ ಮಾಡಿ, ಇದು ಸಹಜ ಸಾವಲ್ಲ, ಕೊಲೆ ಎಂದು ಪೋಲಿಸರಿಗೆ ತಿಳಿಸಿ ಯಾರೂ ಆ ರೂಮಿನ ಒಳಗೆ ಹೋಗದಂತೆ ತಾಕೀತು ಮಾಡಿದರು.
ಇನ್ಸ್ಪೆಕ್ಟರ್ ಮುನಾಫ್ ಹಾಗೂ ರಾಜೇಶ್ ಇಬ್ಬರೂ ಒಟ್ಟೊಟ್ಟಿಗೆ ಮನೆಯೊಳಗೆ ಕಾಲಿಟ್ಟರು. ರಾಜೇಶ್ ಸಾಕಷ್ಟು ಹೊತ್ತು ತಂದೆಯ ಪಾದದ ಬಳಿಯೇ ಕುಳಿತು ಬಿಕ್ಕುತ್ತಿದ್ದ, ಮುನಾಫ್ ಎಲ್ಲಾ ಕಡೆ ಓಡಾಡುತ್ತಾ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿ ತಮ್ಮ ಇಲಾಖೆಯವರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಪೋಲಿಸ್ ವಿಧಿ ವಿಧಾನಗಳೆಲ್ಲಾ ಮುಗಿದು ಮಲ್ಲೇಶರ ಶವಸಂಸ್ಕಾರವು ಮುಗಿಯಿತು. ಇಲಾಖೆಯವರ ಪ್ರಥಮ ತನಿಖಾ ವರದಿಯ ಪ್ರಕಾರ ಮಲ್ಲೇಶರವರಿಗೆ ಮನೆಯಲ್ಲಾಗಲಿ, ಹೊರಗಡೆಯಾಗಲಿ ಸಮಸ್ಯೆಯೂ ಇರಲಿಲ್ಲ, ಶತ್ರುಗಳು ಇರಲಿಲ್ಲ. ಕೊಲೆಯಾದ ದಿನ ಮನೆಯ ಬಾಗಿಲನ್ನು ಸ್ವತಃ ತಾವೇ ಹಾಕಿಕೊಂಡು ಒಳಗಡೆ ಒಬ್ಬರೇ ಇದ್ದರು. ಅವರು ಬಾಗಿಲು ಹಾಕಿಕೊಳ್ಳುವ ಮುನ್ನವೇ ಮನೆಯೊಳಗೆ ಯಾರಾದರೂ ನುಸುಳಿದ್ದಕ್ಕೆ ಯಾವ ಪುರಾವೆಯೂ ಇಲ್ಲ. ಆದರೂ ಮಲ್ಲೇಶರ ಕೊಲೆಯಾಗಿರುವುದು ನಿಜ ಎಂದು ನಮೂದಾಗಿತ್ತು.
ಮುನಾಫರಿಗೆ ನಗರದ ಗಣ್ಯ ವ್ಯಕ್ತಿಯ ಕೊಲೆಯನ್ನು ಯಾರು ಮಾಡಿದ್ದಾರೆ ಎಂದು ರಹಸ್ಯ ಭೇದಿಸುವ ಜವಾಬ್ದಾರಿ ಒಂದು ಕಡೆಯಾದರೆ, ಈಗಾಗಲೇ ನಿಗಧಿತವಾಗಿರುವ ಪ್ರವಾಸಕ್ಕೆ ಹೆಂಡತಿಯೊಡನೆ ಹೋಗಲು ಆಗುವುದೋ ಇಲ್ಲವೋ ಯೋಚನೆ ಒಂದು ಕಡೆ ಆಗಿರುವಾಗಲೇ ಕುಚುಕು ಗೆಳೆಯ ರಾಘವೇಂದ್ರ ಇನಾಂದಾರ್ ಯಾವುದೋ ಕೆಲಸದ ಮೇಲೆ ಹುಬ್ಬಳ್ಳಿಯಿಂದ ಬಂದು ಭೇಟಿಯಾದರು. ಇನಾಂದಾರ್ ನೋಡಿದೊಡನೆ ಮುನಾಫರಿಗೆ ಸಂತೋಷವಾಯಿತು. ಕಾರಣ ಇನಾಂದಾರ್ ಖಾಸಗಿ ಪತ್ತೆದಾರನಾಗಿ ಸಾಕಷ್ಟು ಕ್ಲಿಷ್ಟಕರ ರಹಸ್ಯಗಳನ್ನು ಭೇದಿಸಿದ್ದರು. ಹಾಗಾಗಿ ಅವರಿಂದ ಮಲ್ಲೇಶ್ ಕೊಲೆ ಕೇಸಿನಲ್ಲಿ ಸಹಾಯವಾಗುವುದೆಂದು ನಂಬಿದ್ದರು. ತಮ್ಮ ಮನದಿಂಗಿತವನ್ನು ಮುನಾಫ್ ಹೇಳಿದ್ದನ್ನು ಕೇಳಿದ ಇನಾಂದಾರ್, ಇಲ್ಲಿಯವರೆಗೆ ಆದ ಕೊಲೆ ತನಿಖೆಯ ಬಗ್ಗೆ ಕೇಳಿ ತಿಳಿದು, ಒಮ್ಮೆ ಕೊಲೆ ನಡೆದಿರುವ ಸ್ಥಳಕ್ಕೆ ಹೋಗಿ ಬರೋಣ ಎಂದರು. ಇದಕ್ಕೆ ಸಮ್ಮತಿಸಿದ ಮುನಾಫ್ ರವರು ತಕ್ಷಣ ಅಲ್ಲಿಗೆ ಕರೆದುಕೊಂಡು ಹೋದರು.
ಮೊದಲು ಕೊಲೆಯಾದ ರೂಮಿಗೆ ಹೋಗಿ, ನಂತರ ಇಡೀ ಮನೆಯೊಳಗೆ ಸುತ್ತಾಡಿ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಕೆಲವು ಟಿಪ್ಪಣಿಗಳನ್ನು ಮಾಡಿಕೊಂಡು, ಮನೆ ಹೊರಗೆ ಸುತ್ತಮುತ್ತ ಓಡಾಡಿ, ಗೆಳೆಯ ನಾನು ಮತ್ತೊಂದೆರಡು ಮೂರು ಬಾರಿ ಇಲ್ಲಿಗೆ ಬರಬೇಕಾಗಬಹುದು. ನಾನು ಬೇಕೆಂದಾಗ, ನಿನ್ನ ಇಲಾಖೆಯವರು ನನ್ನನ್ನು ಇಲ್ಲಿಗೆ ಕರೆತರಲು ಹೇಳಿ. ನೀವು ನಿಶ್ಚಿಂತೆಯಿಂದ ಪ್ರವಾಸಕ್ಕೆ ಹೋಗಿ ಬನ್ನಿ, ಈ ಮನೆಯವರು ತಮ್ಮ ಸಂಪ್ರದಾಯದ ಪ್ರಕಾರ ಎಲ್ಲಾ ಕಾರ್ಯ ಮುಗಿಸಿ ಕೊಳ್ಳಲಿ ಎಂದರು. ಮುನಾಫ್ ಪ್ರವಾಸಕ್ಕೆ ಹೋದರೂ ಮನಸೆಲ್ಲ ಇಲ್ಲಿಯೇ ಇತ್ತು. ಇನಾಂದಾರ್ ಪೊಲೀಸರೊಂದಿಗೆ ಮತ್ತೆರಡು ಬಾರಿ ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿ, ಅಕ್ಕಪಕ್ಕ ಎಲ್ಲಾ ವಿಚಾರಣೆ ಮಾಡಿ ಸಾಕಷ್ಟು ಮಾಹಿತಿಯನ್ನು ಕಲೆಹಾಕಿದ್ದಾರು. ಮುನಾಫ್ ಈ ಬಗ್ಗೆ ಕರೆ ಮಾಡಿ ವಿಚಾರಿಸಿದಾಗ, ನೀವು ನಿಶ್ಚಿಂತೆಯಿಂದ ಬನ್ನಿ ಎಂದಷ್ಟೇ ಹೇಳಿದ್ದರು.
ಮುನಾಫ್ ಪ್ರವಾಸದಿಂದ ಬಂದು ಕರ್ತವ್ಯಕ್ಕೆ ಹಾಜರಾದೊಡನೆ ಇನಾಂದರಿಗೆ ಕರೆ ಮಾಡಿ ವಿಚಾರಿಸಿದಾಗ, ರಾಜೇಶನೇ ತನ್ನ ತಂದೆ ಮಲ್ಲೇಶರ ಕೊಲೆ ಮಾಡಿರುವುದು, ಅವನನ್ನು ಅರೆಸ್ಟ್ ಮಾಡಿ ನಿಮ್ಮ ಭಾಷೆಯಲ್ಲಿ ವಿಚಾರಿಸಿ ಸತ್ಯ ಹೊರಬರುತ್ತದೆ ಎಂದರು. ಇದು ಹೇಗೆ ಸಾಧ್ಯ? ಅವತ್ತು ಅವರು ಊರಲ್ಲೇ ಇರಲಿಲ್ಲ, ಅಲ್ಲದೆ ತಂದೆ ಮಗನ ನಡುವೆ ಯಾವ ಸಮಸ್ಯೆಯೂ ಇಲ್ಲದಾಗ ಏಕೆ ಕೊಲೆ ಮಾಡುತ್ತಾರೆ? ಈಗ ಸ್ವಲ್ಪ ಹೊತ್ತಿನ ಮುಂಚೆಯೂ ಅವರೇ ಕರೆ ಮಾಡಿ ತನಿಖೆ ಎಲ್ಲಿಯವರೆಗೆ ಬಂತು? ಬೇಗ ಕೊಲೆಗಾರನನ್ನು ಹಿಡಿಯಬೇಕು ಎಂದು ಹೇಳಿದ್ದಾರೆ. ಸ್ವತಃ ತಾವೇ ಕೊಲೆ ಮಾಡಿದ್ದರೆ, ನಮಗೆ ಕರೆಮಾಡಿ ವಿಚಾರಿಸುವ ಅಗತ್ಯ ಏನಿತ್ತು? ಎಂದರು ಮುನಾಫ್. ನಿಮಗೆ ಎಲ್ಲವನ್ನೂ ನಾನು ಬಾಯಿ ಬಿಟ್ಟು ಹೇಳುವ ಅಗತ್ಯವಿಲ್ಲ ಅಲ್ಲವೇ ಎಂದು ಪೋನಿಟ್ಟರು ಇನಾಂದಾರ್.
ಅಡುಗೆಯವಳೊಂದಿಗಿನ ಅನೈತಿಕ ಸಂಬಂಧ ವಿರೋಧಿಸಿದ ತಂದೆಯನ್ನು ಕೊಂದ ಪಾಪಿ ಮಗ, ಕೆಲವೇ ದಿನಗಳಲ್ಲಿ ಕೊಲೆ ರಹಸ್ಯ ಭೇದಿಸಿದ ಪೊಲೀಸ್ ಇಲಾಖೆಯವರಿಗೆ ಅಭಿನಂದನೆಗಳು….. ಮುಂತಾಗಿ ಪೇಪರಿನಲ್ಲಿ ಬಂದಿತ್ತು. ಕೊಲೆಗಾರನನ್ನು ಜೈಲಿಗೆ ಅಟ್ಟಿದ ಸಂತೋಷದಲ್ಲಿದ್ದ ಮುನಾಫ್, ನಾನು ಹೀಗೆ ಆಗಿರಬಹುದು ಎಂದು ಯೋಚಿಸಲೇ ಇಲ್ಲ, ನೀವು ಹೇಗೆ ಇದರ ಸುಳಿವು ಪತ್ತೆ ಮಾಡಿದಿರಿ ಎಂದು ಇನಾಂದರಿಗೆ ಕೇಳಿದರು. ನೀವು ಮದುವೆಯಾಗಿ ಆರು ತಿಂಗಳ ನಂತರ ಹನಿಮೂನ್ ಹೊರಟ ಕಾರಣ ಹೆಚ್ಚು ಯೋಚಿಸಿಲ್ಲ. ಇಲ್ಲವೆಂದಿದ್ದರೆ ನೀವೇ ಇದರ ಸುಳಿವು ಹಿಡಿಯುತ್ತಿದಿರಿ ಎಂದರು ಇನಾಂದಾರ್. ದಯವಿಟ್ಟು ಹೇಗೆ ಸುಳಿವು ಸಿಕ್ಕಿತು ಹೇಳಿ ಎಂದು ಒತ್ತಾಯಿಸಿದರು ಮುನಾಫ್.
ಮನೆ ಪ್ರವೇಶ ಮಾಡಲು ಆ ಮನೆಗೆ ಮೂರು ದಾರಿಗಳಿವೆ. ಒಂದು ಮುಂಬಾಗಿಲು, ಇನ್ನೊಂದು ಹಿತ್ತಲ ಬಾಗಿಲು ಮತ್ತೊಂದು ಬಾಲ್ಕನ್ನಿಯಿಂದ. ಮುಂಬಾಗಿಲು ಹಾಗೂ ಬಾಲ್ಕನಿಯಲ್ಲಿ ಎರಡೆರಡು ಸಿಸಿ ಕ್ಯಾಮರಾಗಳಿದ್ದು ಅದರ ಪೋಟೆಜ್ ಗಮನಿಸಿದಾಗ ಯಾರೂ ಬಂದಿದ್ದು ಕಾಣಲಿಲ್ಲ. ಆಗ ಉಳಿದಿದ್ದು ಹಿತ್ತಲ ಬಾಗಿಲು. ಹಿತ್ತಲ ಬಾಗಿಲಿನಿಂದ ಬರಬೇಕು ಎಂದರೆ ಪಕ್ಕದ ಮನೆಯ ಕಾಂಪೌಂಡ್ ಹತ್ತಿ ಬರಬೇಕು. ಅದು ಸ್ವಲ್ಪ ಎತ್ತರದಲ್ಲಿ ಇರುವುದರಿಂದ ಅಷ್ಟು ಸುಲಭವಲ್ಲ. ಒಂದೊಮ್ಮೆ ಕಷ್ಟಪಟ್ಟು ಇಳಿದರೂ, ಅಲ್ಲಿಂದ ಯಾರಾದರೂ ಬರುವುದನ್ನು ತಡೆಯಲು ಮಾಡಿಸಿದ ಗ್ರಿಲ್ ಡೋರ್ ಇದ್ದು ಅದಕ್ಕೆ ಸೇಫ್ಟಿ ಲಾಕ್ ಕೂಡ ಇದೆ. ಹೇಗೋ ಅದನ್ನು ದಾಟಿ ಒಳಗೆ ಬಂದರೂ ಹಿತ್ತಲ ಬಾಗಿಲು ಒಳಗಿನಿಂದ ಚಿಲಕ ಹಾಕಿ ಲಾಕ್ ಆಗಿರುತ್ತದೆ. ಹಾಗಾಗಿ ಅಷ್ಟು ಸುಲಭವಾಗಿ ಹೊರಗಿನವರು ಒಳಗೆ ಬರಲು ಸಾಧ್ಯವಿಲ್ಲ. ಇದು ಬಿಟ್ಟು ಮತ್ತಾವುದಾದರೂ ಒಳ ಬರುವ ದಾರಿ ಇದೆಯೇ ಎಂದು ನೋಡಲು ನಿಮ್ಮ ತಂಡದವರೊಂದಿಗೆ ಬಂದಾಗ, ಕೊಲೆಯಾದ ದಿನ ಹಿತ್ತಲ ಬಾಗಿಲು ತೆಗೆದಿತ್ತಾ ಎಂದು ನಿಮ್ಮವರಿಗೆ ವಿಚಾರಿಸಿದಾಗ, ಇಲ್ಲ ಸರ್ ಲಾಕ್ ಆಗಿತ್ತು, ನಾವೇ ತೆಗೆದಿದ್ದು ಎಂದರು. ಅದಕ್ಕೆ ನಾನು, ಬರೀ ಲಾಕ್ ಆಗಿತ್ತ ಅಥವಾ ಒಳಗಿನಿಂದ ಚಿಲಕ ಹಾಕಿತ್ತ ಎಂದಾಗ, ಅವರು ನೆನಪಿಲ್ಲ ಎಂದರು. ಏಕೆಂದರೆ ಚಿಲಕ ಹಾಕದಿದ್ದರೆ ಸೇಫ್ಟಿ ಲಾಕನ್ನು ಒಳಗಿನಿಂದ, ಹೊರಗಿನಿಂದ ಬೇಕಾದರೂ ತೆಗೆಯಬಹುದಲ್ಲವೆ? ಇದನ್ನೇ ಯೋಚಿಸುತ್ತಾ ಆ ಕಾಂಪೌಂಡ್ ಬದಿ ನಡೆದು ಬರುವಾಗ, ಆ ಕಾಂಪೌಂಡ್ ಮೇಲೆ ಯಾರೋ ಕೆಳಗಿಳಿಯಲು ಚಪ್ಪಲಿ ಮೆಟ್ಟಿದ ಗುರುತ್ತಿತ್ತು. ಅಲ್ಲದೆ ಅಲ್ಲಿನ ಹೂಗಿಡವೊಂದು ಮುರಿದು ಬಿದ್ದಿತ್ತು. ಇದರಿಂದ ಅನುಮಾನ ಬಂದು, ಆ ಗೋಡೆಗೆ ಚಪ್ಪಲಿಯಿಂದ ಮೆತ್ತಿದ ಮಣ್ಣನ್ನು ಸಂಗ್ರಹಿಸಿ ಲ್ಯಾಬಿಗೆ ಕಳಿಸಿದಾಗ, ಅದು ಕೊಲೆ ಆದ ದಿನದಂದೇ ಮೆತ್ತಿದ್ದು ಎಂದು ತಿಳಿಯಿತು. ಆ ರಿಪೋರ್ಟ್ ಬರುವ ಮುನ್ನವೇ ಆ ಚಪ್ಪಲಿ ಯಾರದ್ದು ಎಂದು ಗಮನಿಸಿದಾಗ ರಾಜೇಶನದೆ ಎಂದೂ ತಿಳಿಯಿತು. ಆದರೆ ಅವನು ಪಕ್ಕದ ಮನೆಯ ಕಾಂಪೌಂಡ್ ಹತ್ತಿ ಇಳಿದಿದ್ದಕ್ಕೆ ಪಕ್ಕದ ಮನೆಯವರಾಗಲಿ, ಸಿಸಿ ಕ್ಯಾಮೆರವಾಗಲಿ ಇರಲಿಲ್ಲ. ಇದ್ದಿದ್ದರೆ, ರಾಜೇಶ್ ಅಲ್ಲಿನ ಬಟ್ಟೆ ಒಗೆಯುವ ಬಂಡೆಯ ಮೇಲೆ ಹತ್ತಿ, ಸಲೀಸಾಗಿ ಕಾಂಪೌಂಡ್ ಹತ್ತಿದ್ದಕ್ಕೆ ಸಾಕ್ಷಿ ಸಿಗುತ್ತಿತ್ತು.
ಇದೊಳ್ಳೆಯ ಕತೆ ಆಯಿತಲ್ಲ ಎಂದು ಚಿಂತಿಸುತ್ತ, ಸಿಸಿ ಕ್ಯಾಮರಾ ಪೋಟೆಜ್ ನೋಡುವಾಗ ಒಂದು ದಿನ ರಾಜೇಶ್, ಊಟಕ್ಕೆ ಬಂದ ಸ್ವಲ್ಪ ಹೊತ್ತಿನಲ್ಲೇ, ಕೇವಲ ಪ್ಯಾಂಟ್ ಒಂದನ್ನೇ ಧರಿಸಿ, ಅಂಗಿಯನ್ನು ಕೈಯಲ್ಲಿ ಹಿಡಿದುಕೊಂಡು ಸರ್ರನೆ ಬಾಗಿಲು ತೆಗೆದು ಓಡಾಡುತ್ತಾ ಹೊರಬಂದವನೆ ಕಾರು ಹತ್ತಿ ಹೋಗಿದ್ದ. ಹೋಗುವ ಸಂದರ್ಭದಲ್ಲಿ ಅವಸರವಸರವಾಗಿ ಸೆಕ್ಯೂರಿಟಿಗೆ ಏನೋ ಹೇಳಿದ. ಅಂಗಡಿಯಿಂದ ತುರ್ತು ಕರೆ ಬಂದಿರಬೇಕು ಬಿಡು ಎಂದುಕೊಂಡು ಮತ್ತಷ್ಟು ಹಿಂದೆ ಹೋದಾಗ, ಒಂದೆರಡು ಬಾರಿ ರಾಜೇಶ್ ಹೀಗೆ ಹೊರಬಂದಿದ್ದು, ಅವನ ಹಿಂದೆಯೇ ಅವನ ತಂದೆಯೂ ಸಿಟ್ಟಿನಿಂದ ಬಂದಿದ್ದು ಕಂಡಿತು. ಇದರಿಂದ ಅನುಮಾನ ಬಂದು ಆ ಸೆಕ್ಯೂರಿಟಿಗೆ ಕರೆದು ಕೇಳಿದಾಗ ಹಾರಿಕೆಯ ಉತ್ತರ ಬಂತು. ಸುಳ್ಳು ಹೇಳಿದರೆ ನೀನು ಒಳಗೆ ಹೋಗುವೆ ಎಂದು ಬೆದರಿಸಿದಾಗ, ಸರ್ ನಮ್ಮ ಧಣಿಗೂ ಆಡಿಗೆಯವಳಿಗೂ ಸಂಬಂಧ ಇರಬೇಕು, ಸರಿಯಾಗಿ ನನಗೆ ಗೊತ್ತಿಲ್ಲ. ನಾನು ಹೊರಗಡೆಯೇ ಇರುವುದರಿಂದ ಒಳಗೆ ಏನೇ ಆದರೂ ತಿಳಿಯಲ್ಲ. ಅದೊಂದು ದಿನ ದೊಡ್ಡ ಧಣಿ ಅಡಿಗೆಯವಳಿಗೆ ಜೋರಾಗಿ ಬೈಯುತ್ತಿದ್ದರು, ಅದನ್ನು ಕೇಳಿದ್ದು ನಿಮಗೆ ಹೇಳಿದೆ ಎಂದ.
ಆಡಿಗೆಯವಳು ಮೂವ್ವತೈದರ ಆಸುಪಾಸಿನ ವಯಸ್ಸಿನವಳು. ಅವಳಿಗೆ ಹಣದ ಬಡತನವಿತ್ತೇ ಹೊರತು ದೇಹಸಿರಿಗಲ್ಲ. ಇಬ್ಬರು ಮಕ್ಕಳು ಹಾಗೂ ಗಂಡನ ತಂದೆಯನ್ನು ಸಾಕುವ ಜವಾಬ್ದಾರಿ ಅವಳದೇ ಆಗಿತ್ತು. ಗಂಡ ಇದ್ದರೂ ಅದೆಲ್ಲಿಗೆ ಹೋಗಿದ್ದನೋ ಆ ದೇವರಿಗೆ ಗೊತ್ತು. ಹೆಂಡತಿ ಮನೆಯಲ್ಲಿ ಇದ್ದಾಗಲೇ ರಾಜೇಶ್ ಇವಳೊಂದಿಗೆ ಕಣ್ಣಾಮುಚ್ಚಾಲೆ ಆಟ ಆರಂಭಿಸಿದ್ಧ. ಹೆಂಡತಿ ಹೆರಿಗೆಗೆಂದು ತವರು ಮನೆ ಸೇರಿದಾಗ, ಊಟದ ನೆಪ ಮಾಡಿಕೊಂಡು ಮನೆಗೆ, ತಂದೆ ಮಲಗಿದ ಸಮಯದಲ್ಲಿ ಬರುತ್ತಿದ್ದ. ಮಲ್ಲೇಶ್ ಒಮ್ಮೆ ನೀರು ಕುಡಿಯಲೆಂದು ಮತ್ತೊಮ್ಮೆ ಹೊರಹೋಗಬೇಕು ಎಂದು ಎದ್ದಾಗ ಮಗನ ಕರ್ಮಕಾಂಡ ಕಣ್ಣಿಗೆ ಬಿದ್ದಿತ್ತು. ಇಬ್ಬರಿಗೂ ಬುದ್ಧಿ ಹೇಳಿದ್ದು ಉಪಯೋಗವಾಗಲಿಲ್ಲ. ಅದಕ್ಕೆ ಮಲ್ಲೇಶ್, ಇಷ್ಟು ದಿನ ಮರ್ಯಾದೆಗಂಜಿ ಸುಮ್ಮನಿದ್ದೆ. ಇನ್ನು ಸುಮ್ಮನಿರಲು ಸಾಧ್ಯವೇ ಇಲ್ಲ. ಎಲ್ಲಾ ವಿಷಯ ನಿನ್ನ ಹೆಂಡತಿಗೆ ಹೇಳಿ, ಆಸ್ತಿಯನ್ನೆಲ್ಲಾ ಹೆಣ್ಣು ಮಕ್ಕಳ ಹೆಸರಿಗೆ ಮಾಡುವೆ ಎಂದು ಲಾಯರಿಗೆ ಪೋನ್ ಮಾಡಿದ ನಾಟಕ ಆಡಿದ್ದರು.
ಅಂದು ರಾಜೇಶ್, ಮತ್ತೆಂದೂ ತಪ್ಪು ಮಾಡುವುದಿಲ್ಲ ಕಡೆಯ ಅವಕಾಶ ಕೊಡಿ ಎಂದು ಬೇಡಿದ್ದ. ಹಾಗೆ ಬೇಡಿಕೊಂಡವನು ಬದಲಾದಂತೆ ನಾಟಕ ಆಡುತ್ತಾ, ತಂದೆಯನ್ನು ಮುಗಿಸುವ ಅವಕಾಶಕ್ಕಾಗಿ ಕಾದಿದ್ದ. ಅವತ್ತು ಪಕ್ಕದ ಮನೆಯವರು ಊರಿಗೆ ಹೋಗುತ್ತಾರೆ ಎನ್ನುವುದ್ದನ್ನು ತಿಳಿದುಕೊಂಡು, ಬೆಳಿಗ್ಗೆಯೇ ಹಿತ್ತಲ ಬಾಗಿಲು ಮತ್ತು ಗ್ರಿಲ್ ಡೋರ್ ಎರಡರ ಚಿಲಕಗಳನ್ನು ತೆಗೆದು ಕೇವಲ ಲಾಕ್ ಮಾಡಿದ್ದ. ರಾತ್ರಿ ಊಟವಾದ ಮೇಲೆ, ಊರಿಗೆ ಹೊರಟ ನಾಟಕವಾಡಿ, ಕಾರನ್ನು ರಸ್ತೆಯ ಅಂಚಿನಲ್ಲಿ ನಿಲ್ಲಿಸಿ, ನಡೆದುಕೊಂಡು ಬಂದು ಪಕ್ಕದ ಮನೆಯಿಂದ ಕಾಂಪೌಂಡ್ ಹತ್ತಿಳಿದು ಅಂದುಕೊಂಡ ಕೆಲಸ ಮುಗಿಸಿದ್ದ. ವಾಪಸ್ ಹೋಗುವಾಗ ಮರೆಯದೆ ಬಾಗಿಲುಗಳನ್ನು ಲಾಕ್ ಮಾಡಿ, ತನ್ನ ಮನೆಯ ಗ್ರಿಲ್ ಡೋರ್ ಹತ್ತಿ ಆರಾಮವಾಗಿ ಪಕ್ಕದ ಮನೆಗೆ ಇಳಿದು ಹೆಂಡತಿ ಊರಿಗೆ ಹೋಗಿದ್ದ. ಇದು ಯಾರಿಗೂ ತಿಳಿಯುವುದಿಲ್ಲ ಎಂದು ಧೈರ್ಯವಾಗಿ ಇದ್ದವನಿಗೆ, ತನ್ನ ಮನೆಯ ಕಾಂಪೌಂಡ್ ಇಳಿಯುವಾಗ ಮೂಡಿದ ಚಪ್ಪಲಿ ಗುರುತು ಇನಾಂದಾರ್ ಕಣ್ಣಿಗೆ ಬಿದ್ದು ಕಂಬಿ ಎಣಿಸುವಂತೆ ಮಾಡಿತು.
ಜಿ. ಹರೀಶ್ ಬೇದ್ರೆ
ಕಥೆ ಕುತೂಹಲಕರವಾಗಿದೆ.ಮಗನೇ ಕೊಲೆಗಾರ ಅಂತ ಕೊನೆಯವರೆಗೂ ಗೊತ್ತಾಗೂವುದಿಲ್ಲ
ಧನ್ಯವಾದಗಳು ತಮಗೆ
Sir very beautiful story thank you so much sir ..
ಧನ್ಯವಾದಗಳು ಉದೇಶ್
ಮೊದಲಿನಿಂದ ಕೊನೆಯವರೆಗೂ ಕುತೂಹಲ ಕಾಯ್ದುಕೊಂಡು ನಿಲ್ಲಿಸಿದೆ ಓದುವಂತಿರುವ ಚೆಂದದ ಕಥೆ.
ಧನ್ಯವಾದಗಳು ತಮಗೆ
ಸಹಜವಾದ ಕ್ರೈಮ್ ಥ್ರಿಲ್ಲರ್ ಓದಿ ಖುಷಿಯಾಯಿತು ಗೆಳೆಯ
ಧನ್ಯವಾದಗಳು ಶಿವು
Intresting