ಅನಸೂಯ ಜಹಗೀರದಾರ-ಆತ್ಮಸಂಗಾತ

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ಆತ್ಮಸಂಗಾತ

ಅವನೆಂದರೆ..,

ಆಗಸದ ಎತ್ತರಕ್ಕೇರಿದ
ಕನಸಿನ ಪುಷ್ಪಗಳನ್ನು ತಂದು
ತನ್ನ ಜೀವ ದಾರದಲಿ ಪೋಣಿಸಿ
ಮುಡಿಸಬಂದವನು..

ಬಾನಂಗಳಕೆ ಜಿಗಿದು
ಬಾನ ಬಣ್ಣಗಳಲ್ಲೆಲ್ಲ
ಕನಸುಗಳಲಿ ಅದ್ದಿ
ರಂಗುರಂಗಾಗಿಸಿ
ರಂಗಿನೋಕುಳಿ ಆಡುವವನು

ಏನೂ ಇಲ್ಲದ ಶೂನ್ಯದಲಿ
ಇದೆಯೆಂದು ಸಾಧಿಸಿ
ಚಲದಿಂದ ಅಚಲಕ್ಕೆ ನೆಗೆದು
ಜೀವಕಣವನು ಹೆಕ್ಕಿ
ದೇವಕಣವನ್ನಾಗಿಸಿದವನು.

ಗಂಡು ನವಿಲಿನಂತೆ
ಮನಮೋಹಕವಾಗಿ
ನರ್ತನಗೈದು ತನ್ನ ಪ್ರಿಯಳ
ಮೈ ಮನ ತಣಿಸಿಸುವವನು..

ರಂಗು ರಾಸಲೀಲೆಗಳಲಿ
ಮೋಡಿಮಾಡಿ ಜೋಡಿಯಾಗಿ
ಬೆಸೆದುಕೊಳ್ಳುತ್ತ ಉಸಿರುಗೂಡಿ
ಪ್ರಾಣದುಸಿರಾದವನು..

ಕಾವ್ಯಗಳ ಕದ ತೆಗೆದು
ಹೊಸ ಬೆಳಕನು
ಪದಗಳೊಳಗೆ ಹರಿಸುವವನು.
ಹೊಸ ಗಾಳಿಯ ಹಿಡಿದು
ಅಕ್ಕರದೊಳಗೆ ಬೀಸುವವನು
ಹೊಸ ರಾಗಗಳ ಸಂಯೋಜಿಸಿ
ವೇಣಿಯ ನುಡಿಸುವವನು

ಅವಳನ್ನೊಮ್ಮೆ ನೆನೆಯಿಸಿ
ತೊಯ್ದು ತೊಪ್ಪಡಿಯಾಗಿಸಿ
ತನ್ನೊಳಗೆ ಮುಳುಗಿಸಿ
ಏನೂ ತಿಳಿಯದವರಂತೆ
ಮುಸಿ ಮಸಿ ನಗುವನು

ಎದೆಯ ಬಗೆದು ನೋಡಿದರೆ
ಅವಳಂತರಂಗದಲಿ
ಏರಿಳಿಯುತಿರುವನು..

ಅವಳು ಅವಳಾಗಿಲ್ಲ.
ಅವನೂ ಅವನಾಗಿಲ್ಲ
ಅವನೇ ಅವಳು
ಅವಳೇ ಅವನು
ಆತ್ಮಸಂಗಾತ..!


ಅನಸೂಯ ಜಹಗೀರದಾರ

2 thoughts on “ಅನಸೂಯ ಜಹಗೀರದಾರ-ಆತ್ಮಸಂಗಾತ

  1. ಆತ್ಮಸಂಗಾತದ ಅವಿನಾಭಾವ ಸಂಬಂಧ ತೆರೆದಿಟ್ಟ ಸುಂದರ ಕವನ. ಅಭಿನಂದನೆಗಳು.

Leave a Reply

Back To Top