ಪುಸ್ತಕ ಸಂಗಾತಿ
ಡಾ.ಎಸ್.ಎಸ್.ಪುಟ್ಟೇಗೌಡರ
‘ಮಹಾತ್ಮ ಕನಕದಾಸ’ ನಾಟಕ
ಅವಲೋಕನ
ಗೊರೂರು ಅನಂತರಾಜು
ರಂಗಭೂಮಿ ಕ್ಷೇತ್ರದಲ್ಲಿ ಪೌರಾಣಿಕ ನಾಟಕಗಳಲ್ಲಿ ದೈತ್ಯ ಪಾತ್ರಕ್ಕೆ ಹೆಸರಾದವರು ಡಾ
ಎಸ್.ಎಸ್.ಪುಟ್ಟೇಗೌಡರು. ಇವರು ರಾಮಾಯಣದಲ್ಲಿ ರಾವಣ, ಕುರುಕ್ಷೇತ್ರದಲ್ಲಿ ದುರ್ಯೋಧನ, ದಕ್ಷ ಯಜ್ಞದಲ್ಲಿ ದಕ್ಷ, ಜರಾಸಂಧ ಹಿರಣ್ಯ ಕಶ್ಯಪು.. ಇಂತಹ ದೈತ್ಯ ಪಾತ್ರಗಳಿಗೆ ಹೆಸರಾದವರು. ಸರ್ಕಾರಿ ಉದ್ಯೋಗದಿಂದ ನಿವೃತ್ತಿ ನಂತರ ರಂಗ ಕೃತಿಗಳನ್ನು ರಚಿಸುವಲ್ಲಿ ಕ್ರಿಯಾಶೀಲರು. ಇವರ ರಂಗಸಾಧನೆಗೆ ಅರಕಲಗೊಡು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇವರ ಛಲದೋಳ್ ದುರ್ಯೋಧನಂ, ರಾವಣೇಶ್ವರ, ಶಿವ ಶರಣ ರಾವಣ, ಸತ್ಯ ಹರಿಶ್ಚಂದ್ರ ಪೌರಾಣಿಕ ನಾಟಕಗಳ ಪ್ರಕಟಣೆ ನಂತರ ಕನಕದಾಸರ ಜೀವನಾಧರಿತ ಐತಿಹಾಸಿಕ ವಸ್ತು ವಿಷಯದ ನಾಟಕ ಮಹಾತ್ಮ ಕನಕದಾಸ ಪ್ರಕಟಗೊಂಡಿದೆ. ಇದು ಲೇಖಕ ಕತೆಗಾರ ಶಿಕ್ಷಕ ಶ್ರೀ ಮಧುನಾಯ್ಕ ಲಂಬಾಣಿ ಅವರು ರಾಜ್ಯಾದ್ಯಂತ ಅಷ್ಟೇ ಏಕೆ ಪಕ್ಕದ ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹುಟ್ಟು ಹಾಕಿ ಇದರ ಘಟಕಗಳನ್ನು ವಿಸ್ತರಿಸಿ ಇದೇ ಸೆಪ್ಟೆಂಬರ್ 24ರ ಭಾನುವಾರದಂದು ಹರಪ್ಪನಹಳ್ಳಿಯಲ್ಲಿ ಏರ್ಪಡಿಸಿರುವ ಗಿನಿಸ್ ದಾಖಲೆಗಾಗಿ ನೂರೈವತ್ತಕ್ಕೂ ಕೃತಿಗಳ ಲೋಕಾರ್ಪಣೆ ವಿಶಿಷ್ಟ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ.
ಕನಕದಾಸರು ಮಧ್ಯ ಯುಗದ ಓರ್ವ ಪ್ರಮುಖ ಸಾಮಾಜಿಕ ಕ್ರಾಂತಿಕಾರಿ. ವಚನ ಸಾಹಿತ್ಯದ ಆಂದೋಲನದಂತೆ ದಾಸ ಪರಂಪರೆಗೆ ಅನುಗುಣವಾಗಿ ದುಡಿಯುವ ವರ್ಗದ ಜನಜೀವನ ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಸರಳ ಕನ್ನಡ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿ ಜನಜಾಗೃತಿ ಮೂಡಿಸುವ ಕಾಯಕದ ದಾಸ ಶ್ರೇಷ್ಠರಲ್ಲಿ ಕನಕರು ಪ್ರಮುಖರು. ತಾಳ ತಂಬೂರಿ ಹಿಡಿದು ಹಾಡುತ್ತ ಜನಸಾಮಾನ್ಯರೊಂದಿಗೆ ಬದುಕಿ ಸಾಗಿದವರು. ಸಂಸಾರಿಯಾಗಿದ್ದು ಉತ್ತಮ ಮಾನವರಾಗಿರಲು ಸಾಧ್ಯ ಎಂಬುದನ್ನು ತೋರಿದರು. ತಮ್ಮ ಕೀರ್ತನೆಗಳಲ್ಲಿ ಹಾಡಿದರು.
ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆಯೇತಕೆ
ಮಾತು ಕೇಳದೆ ಮರೆತು ನಡೆವ ಮಕ್ಕಳೇತಕೆ
ಪ್ರೀತಿಯಿಲ್ಲದೆ ಎಡೆಯಿಲಿಕ್ಕಿದ ಅನ್ನವೇತಕೆ
ಪ್ರೀತಿಯರಿತು ನಡೆಯದಿರುವ ಭಂಟನೇತಕೆ
ಸೋತ ಹೆಣ್ಣಿಗೆ ಓತು ನಡೆಯುವ ಪುರುಷನ್ಯಾತಕೆ
ಸಾಮಾಜಿಕ ಸಾಮರಸ್ಯದ ಬಗೆಗೆ ತಿಳಿಸುತ್ತ ನೈತಿಕ ನೆಲೆಗಳಲ್ಲಿ ಕೌಟುಂಬಿಕ ಬದುಕು ಹಸನಾಗಲು ಸಾಧ್ಯ ಎಂಬುದನ್ನು ನಿರೂಪಿಸಿದರು. ಆ ಕಾಲದ ಸ್ವಾಸ್ಥ್ಯರಹಿತ ಸಾಮಾಜಿಕ ವ್ಯವಸ್ಥೆಯ ಅಗ್ನಿಕುಂಡದಲ್ಲಿ ಮಿಂದೆದ್ದು ಕಲಿಯಾಗಿ, ಕವಿಯಾಗಿ, ಸಂತರಾಗಿ ದಾಸ ಶ್ರೇಷ್ಠರಾಗಿ ಮಹಾಭಕ್ತರಾಗಿ ರೂಪುಗೊಂಡವರು. ಭಕ್ತ ಭಗವಂತನ ಸಂಬಂಧವನ್ನು ಗೋವು ಗೋಪಾಲಕನ ರೂಪಕದಲ್ಲಿ ಹೇಳುತ್ತಿದ್ದ ಕೀರ್ತನಕಾರರಿದ್ದ ಕಾಲದಲ್ಲಿ ಭಕ್ತ ಭಗವಂತನ ಸಂಬಂಧವನ್ನು ಕುರಿ ಕುರುಬ ರೂಪಕದಲ್ಲಿ ಹೇಳಿರುವುದು, ಜಾತಿ ಕುಲಗಳ ಮಾತು ಬಂದಲ್ಲಿ ಖಂಡಿತೋಕ್ತಿಗಳನ್ನು ಆಡಿರುವುದು ಕನಕದಾಸರು ಮಾತ್ರ ಎಂಬುದು ಲೇಖಕರ ಖಡಕ್ ನುಡಿ.
ಕನಕದಾಸರ ತಂದೆ ಬಾಡಾದ ರಾಜ ಬೀರಪ್ಪ ನಾಯಕ ಮತ್ತು ಅವನ ಮಂತ್ರಿ ಮಲ್ಲಪ್ಪನಾಯಕರ ಸಂಭಾಷಣೆಯೊಂದಿಗೆ ಪ್ರಾರಂಭವಾಗುವ ನಾಟಕ ಬಾಡ ಗ್ರಾಮದ ಚಿತ್ರಣ ನೀಡುತ್ತದೆ.
‘ವಿಜಯನಗರ ಸಾರ್ವಭೌಮತ್ವ ಸಹಕಾರದ ಶಕ್ತಿಪೂರ್ಣತೆಯಿಂದ ಪರಿಶೋಭಿಸಿರುವ ಅನೇಕ ಮಂಡಲ, ಪಾಳೆಯಪಟ್ಟುಗಳಂತೆ 78 ಗ್ರಾಮಗಳನ್ನು ಒಳಗೊಂಡಿರುವ ನಮ್ಮ ಬಾಡಾ ನಗರವೂ ಸಹ ಕೀರ್ತಿ ಭವ್ಯತೆಯಲ್ಲಿ ಮೆರೆಯುತ್ತಿದೆ ಮಂತ್ರಿಗಳೆ..
ಮಾತಿನಲ್ಲೇ ಪಾಳೆಯಗಾರರ ಆಳ್ವಿಕೆಯ ಐತಿಹಾಸಿಕ ಕಥಾನಕವನ್ನು ತೆರೆದಿಡಲಾಗುತ್ತದೆ.
ಉದ್ಯಾನವನ ದೃಶ್ಯದಲ್ಲಿ ಲಚ್ಚಿ ತಿಮ್ಮನಾಯಕರ ಹಾಡು ಸರಸ ಸಂಭಾಷಣೆಯ ಛಾಯೆಯಲ್ಲಿ ಪೌರಾಣಿಕ
ನಾಟಕದ ಪ್ರಭಾವವಿದೆ.
ಹುಣ್ಣಿಮೆ ಚಂದಿರ ಬಂದಿಹನೆಂದು
ತಿಂಗಳ ಪೂಜೆಯ ಸಲ್ಲಿಸಲೆಂದು
ಬಂದಳು ರಾಧೆಯು ಯಮನೆಯ ತಡಕೆ..
ಲಚ್ಚಿ ಹಾಡುತ್ತ ರಂಗ ಪ್ರವೇಶಿಸುತ್ತಾಳೆ.
ಹೊನ್ನಿನ ಹುಡುಗಿ ನೀನಿಹೆಯೆಂದು
ಬೆಣ್ಣೆಯ ಕೆನ್ನೆಯ ಮುದ್ದಿಸಲೆಂದು
ಬಂದನು ಕೃಷ್ಣನು ಯಮುನೆಯ ತಡಿಗೆ..
ತಿಮ್ಮನಾಯಕ ಹಾಡುತ್ತಾ ಲಚ್ಚಿಯೊಂದಿಗೆ ನರ್ತನ ರಂಗದ ಮೇಲೆ ರಂಜಿಸಬಹುದು.
ತಿಮ್ಮನಾಯಕ ಮಂಡಲಾಧಿಪತಿಯಾಗಿ ವೀರನಾಗಿ ಬಾಡಾ ಮಂಡಲದ ರಕ್ಷಣೆ ಅಭಿವೃದ್ಧಿಗಾಗಿ ಶ್ರಮಿಸುವಲ್ಲಿ ಬಿಜಾಪುರದ ಸುಲ್ತಾನನ ಸೇನೆಯನ್ನು ವೀರಾವೇಶದಿಂದ ಎದುರಿಸಿ ಸೋಲುವ ಕಥಾ ಹಂದರದಲ್ಲಿ ಪತ್ನಿ ಲಚ್ಚಿ, ತಾಯಿ ಬಚ್ಚಮ್ಮನ ಸಾವಿನಿಂದಾಗಿ ಈ ದು:ಖ ದುಮ್ಮಾನಗಳ ಕಷ್ಟ ನಷ್ಟಗಳ ತೊಳಲಾಟದಲ್ಲಿ ತನ್ನ ಇಷ್ಟ ದೈವ ಬಾಡಾ ರಂಗನಾಥನನ್ನು ಭಕ್ತನನ್ನು ಪೊರೆವ ರೀತಿ ಇದೇನ? ಎಂಬುದಾಗಿ ಖಿನ್ನತೆಯಲ್ಲಿ ತೊಳಲಾಡುವುದು, ದೈವವೇ ತ್ರಿನಾಮಧಾರಿ ತೇಜಸ್ವಿ ಪಾತ್ರಧಾರಿಯಾಗಿ ವಜ್ರ ವೈಡೂರ್ಯ, ಕನಕರಾಶಿಯ ನಿಕ್ಷೇಪದ ಸುಳಿವು ನೀಡುವುದು ಬಾಡಾ ರಂಗನಾಥನನ್ನು ಕಾಗಿನೆಲೆಯಲ್ಲಿ ಆದಿಕೇಶವನಾಗಿಸುವ, ತಿಮ್ಮನಾಯಕ ಕನಕನಾಯಕನಾಗುವ ದೃಶ್ಯಾವಳಿಗಳನ್ನು ಸಂಕ್ಷಿಪ್ತವಾಗಿ ಎಲ್ಲಿಯೂ ಕಥಾ ವಸ್ತುವಿಗೆ ಲೋಪವಾಗದಂತೆ ಚಿತ್ರಿಸಿದ್ದಾರೆ. ಮಹಾತ್ಮ ಕನಕದಾಸನಾಗಿ ಎತ್ತರಿಸುವಲ್ಲಿ ಕನಕದಾಸರ ಪೂರ್ವದ ಲೌಕಿಕ ಜೀವನಕ್ಕಿಂತ ಉತ್ತರ ಭಾಗದ ಮುಖ್ಯವಾಗಿ ಲೋಕೋತ್ತರ ಜೀವನ ಕಟ್ಟಿಕೊಡುತ್ತಾರೆ. ಕಳಿಂಗ ಯುದ್ದಾ ನಂತರದ ಅಶೋಕನ ಜೀವನದಂತೆ ಕನಕದಾಸರ ಜೀವನ ಪ್ರಕಾಶಗೊಳ್ಳುವುದು ಪ್ರಮುಖವಾಗಿದೆ. ಯುದ್ದಾ ನಂತರದಲ್ಲಿ ದಂಡನಾಯಕ ಪದವಿಯನ್ನು ತೊರೆದು ಹರಿಯದಾಸ ಕನಕದಾಸರಾದ ನಂತರದ ಚಿತ್ರಣ ವ್ಯಾಸತೀರ್ಥರ ಮಠ, ಉಡುಪಿ ಶ್ರೀಕೃಷ್ಣಮಂದಿರದ ಭೇಟಿ, ಬೇಲೂರು ಮಠದಲ್ಲಿ ವಾಸ್ತವ್ಯ ಅಂತಿಮವಾಗಿ ಕನಕರ ವಾಸ ಸ್ಥಾನ ಕಾಗಿನೆಲೆ ದೃಶ್ಯಗಳಲ್ಲಿ ಆ ಕಾಲಘಟ್ಟದಲ್ಲಿ ಕನಕದಾಸರು ಕಂಡ ಸಿಹಿ ಕಹಿ ಘಟನೆಗಳು ಪಾತ್ರಗಳ ಸೊಗಸು ಭಾಷೆಯಲ್ಲಿ ಮೈದೆಳೆದಿವೆ. ಈರ್ಷೆಯಲ್ಲಿ ಕನಕದಾಸರ ತೆಗಳುವ ಬ್ರಾಹ್ಮಣ ಪಾತ್ರಗಳು ವಿಡಂಬನಾತ್ಮಕವಾಗಿ ಮೂಡಿವೆ.
ರಾಮಾಚಾರ್ಯ: ಏನ್ರಿ ಇದು ಅನ್ಯಾಯ! ಕೇವಲ ಒಬ್ಬ ಕುರುಬನನ್ನು ಅಟ್ಟಕ್ಕೇರಿಸುವ ಮಟ್ಟಕ್ಕೆ ಗುರುಗಳು ಇಳಿದು ಬಿಟ್ಟರಲ್ಲಾ..
ಭೀಮಾಚಾರ್ಯ: ಕುರಿ ಕಾಯುವವನೆಂದರೇನು? ಪರ ತತ್ತ್ವ ಪರ ತತ್ತ್ವ ಎಂದರೇನು? ಸಗಣಿಯಲ್ಲಿ ಅಗಣಿತ ಪರಿಮಳವನ್ನು ಕಾಣಲು ಸಾಧ್ಯವೇ?
ಶೇಷಾಚಾರ್ಯ: ಅವನ್ಯಾರೋ ಮಾಯಾಜಾಲ ಮಾಡುವ ಮಂತ್ರವಾದಿ ಎಂದು ಕಾಣುತ್ತದೆ
ಹಯಗ್ರೀವಚಾರ್ಯ: ಮಾಯಾ ಜಾಲವೂ ಅಲ್ಲ, ಮಂತ್ರ ವಿದ್ಯೆಯೂ ಇಲ್ಲ. ತಾನೇ ಸಾಕಿದ ಕೋಣನನ್ನು ತಂದು, ಯಮನ ವಾಹನ ಎಂದು ಗುರುಗಳನ್ನು ಏಮಾರಿಸಿಬಿಟ್ಟ…
ಈ ಹಿಂದಿನ ನಾಟಕಕಾರರು ರಚಿಸಿರುವ ಪೌರಾಣಿಕ ಐತಿಹಾಸಿಕ ನಾಟಕಗಳಲ್ಲಿ ಮನರಂಜನೆಗಾಗಿ ತರುವ, ಸಿನಿಮಾಗಳಲ್ಲಿ ನಾವು ನೋಡಿರುವ ನರಸಿಂಹರಾಜು, ಬಾಲಕೃಷ್ಣ ಮೊದಲಾಗಿ ಹಾಸ್ಯ ನಟರ ಪಾತ್ರಗಳಂತೆ ಗೋಚರಿಸುತ್ತವೆ.
“ಧನ ಉಳ್ಳವರ ನೆನದರೆ ದರಿದ್ರ ಹೋಗುವುದಿಲ್ಲ.
ಸುರಪಾನ ದರಿದ್ರವನ್ನು ತರಿಸುತ್ತದೆ. ಹೆಂಡಿರು ಮಕ್ಕಳಿಗೆ ಹೊಟ್ಟೆ ಬಟ್ಟೆಗಿಲ್ಲದಂತೆ ಮಾಡಿ ಕೊನೆಗೆ ಕಟ್ಟಿಕೊಂಡವ ಕೊರಳಿನ ಮಾಂಗಲ್ಯವನ್ನು ಮಾರಿಸಿಬಿಡುತ್ತದೆ..
ಈ ಮಾತು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಅರ್ಚಕ ಸಮೂಹದ
“ಹಪ್ಪಳದ ಕೋಣೆಗೆ ಕೋಣ ನುಗ್ಗಿದಂತೆ’.. ಹೀಯಾಳಿಕೆಯ ಮಾತು ಸಂಭಾಷಣೆಯ ಸೊಗಸುಗಾರಿಕೆಗೆ ಒಂದೆರೆಡು ಉದಾಹರಣೆ.
ಬೇಲೂರು ಮಠದಲ್ಲಿದ್ದ ಅವಧಿ ಕನಕದಾಸರ ಜೀವನದ ಶ್ರೇಷ್ಠ ಕಾಲಘಟ್ಟವೆಂದು ಹೇಳಲಾಗಿದೆ. ಅವರ ಬಹುತೇಕ ಸಾಹಿತ್ಯ ಕೃಷಿ ಇಲ್ಲಿಯೇ ಕಾರ್ಯರೂಪಕ್ಕೆ ಬಂದದ್ದು. ಮೋಹನ ತರಂಗಿಣ , ನಳಚರಿತೆ, ಹರಿಭಕ್ತಸಾರ ಕೃತಿಗಳಲ್ಲಿ ದೃಶ್ಯಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಕನಕದಾಸರ ಜೀವನ ತತ್ವ ಹರಿಭಕ್ತಿ ಸಾರದಲ್ಲಿ ಸಂಪೂರ್ಣ ಬಿಂಬಿಸಲ್ಪಟ್ಟಿದೆ. 1960ರಲ್ಲಿ ತೆರೆ ಕಂಡ ಭಕ್ತ ಕನಕದಾಸ ಚಿತ್ರದ ಹಾಡುಗಳನ್ನು ಬಳಸಿಕೊಳ್ಳುವ ಆಯ್ಕೆ ನಿರ್ದೇಶಕರಿಗೆ ಬಿಟ್ಟಿದ್ದಾರೆ.
ತಲ್ಲಣ ಸದಿರು ಕಂಡ್ಯ ತಾಳು ಮನವೆ
ಎಲ್ಲವನು ಸಲಹುವನು ಇದಕೆ ಸಂಶಯವಿಲ್ಲ..
ಬದುಕಿದೆನು ಬದುಕಿದೆನು ಬವ ಎನಗೆ ಹಿಂಗಿತು
ಪದುಮನಾಭನ ಪಾದದೊಲಿಮೆ ಎನಗಾಯಿತು ..
ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ವಿಚಾರಿಸಲು ಮತಿಹೀನ ನಾನು..
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣವ
ಬರಿದೆ ಮಾತೇಕಿನ್ನು ಅರಿತು ಪೇಳುವನಯ್ಯ..
ಇವೇ ಮೊದಲಾದ ಗೀತೆಗಳನ್ನು ಕೇಳಿ ಆನಂದಿಸಿದ್ದೇವೆ. ಈ ಕೆಲವು ಗೀತೆಗಳನ್ನು ಕೃತಿಯ ಕಡೆಯಲ್ಲಿ ಕೊಟ್ಟಿದ್ದಾರೆ. ಸರ್ವರಲ್ಲೂ ಹರಿಯೇ ಸರ್ವೋತ್ತಮ ಎಂಬುದು ಅವರ ಗಂಭೀರ ನಡೆ ನುಡಿಯಾಗಿತ್ತು. ಲೌಕಿಕ ಜೀವನದ ಕಷ್ಟ ಕಾರ್ಪಣ್ಯಗಳನ್ನು ಅರಿತಿದ್ದ ಕನಕದಾಸರು ಪ್ರತಿಯೊಬ್ಬರು ಹೊಟ್ಟೆಪಾಡಿಗಾಗಿಯೇ ಎಂಬುದಾಗಿ ವಿವಿಧ ವೇಷ ತೊಡುವುದನ್ನು ಟೀಕಿಸಿದ್ದಾರೆ.
ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ..
ಎಂಬ ಕೀರ್ತನೆಯಲ್ಲಿ ಉದರ ನಿಮಿತ್ತಂ ಬಹುಕೃತ ವೇಷಂ ಎಂಬುದನ್ನು ಸಾರಿದ್ದಾರೆ.
ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಬಲ್ಲಿರಾ..
ಎಂದು ಪ್ರಶ್ನಿಸುತ್ತಾ ವಿಶ್ವ ಮಾನವ ಪ್ರಜ್ಞೆ ಬೆಳೆಸಿಕೊಂಡಿದ್ದ ಅವರು ಜಾತಿ ವ್ಯವಸ್ಥೆ ಮಡುಗಟ್ಟಿದ ಕಾಲದಲ್ಲಿ ಅಂದಿನ ಗೊಡ್ಡು ಸಂಪ್ರದಾಯಗಳನ್ನು ನಿರಾಕರಿಸಿ ಜನರಲ್ಲಿ ವೈಚಾರಿಕತೆಯ ಅರಿವನ್ನು ಮೂಡಿಸಿದ್ದಾರೆ.
ಕನಕದಾಸರ ಕೃತಿಗಳನ್ನು, ಕೀರ್ತನೆಗಳನ್ನು ಓದುವಾಗ, ಮನನ ಮಾಡುವಾಗ ಅವರ ಸಮಕಾಲೀನ ದಾಸರೆಲ್ಲರ ಕೃತಿ ಕೀರ್ತನೆಗಳಲ್ಲಿ ಕಾಣಲಾಗದ ತೀಕ್ಷ್ಣ ಸಾಮಾಜಿಕ ಒಳ ನೋಟಗಳನ್ನು, ಅವರು ಎದುರಿಸಿಕೊಂಡು ಬಂದ ವೈಯಕ್ತಿಕ ಮತ್ತು ಸಾಮಾಜಿಕ ಸಂಕಷ್ಟಗಳನ್ನು ತಾನುಂಡ ಅನ್ಯಾಯ, ಅವಗಣನೆ, ಅವಹೇಳನಗಳು ನಾಳಿನವರಿಗೆ ಬಾರದಿರಲಿ ಎಂಬ ಅವರ ಮಾನವೀಯ ಪ್ರೀತಿಯ ತಲ್ಲಣಗಳನ್ನು ಕಾಲ ಮರೆತ ಸಂಗತಿಗಳಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬ ನಾಟಕಕಾರರ ಮಾತು ಮನನೀಯ. ಅಂದ್ಹಾಗೆ ನಾಟಕಕಾರರು 90 ವರ್ಷ ತುಂಬಿದ ಜೀವಾತ್ಮ ತಮ್ಮ ಮಾತೆ ನಿಧನರಾದ 11ನೇ ದಿನದ ಪುಣ್ಯ ಸ್ಮರಣೆಗೆ ತಮ್ಮ ಹುಟ್ಟೂರು ಶಂಭುನಾಥಪುರದಲ್ಲಿ ಹಾಸನದ ಶ್ರೀಮತಿ ರಾಣಿ ಚರಾಶ್ರೀ ತಂಡದ ಮಹಿಳೆಯರೇ ಈ ಮಹಾತ್ಮ ಕನಕದಾಸ ನಾಟಕ ಪ್ರದರ್ಶಿಸಿ ನಾನೋರ್ವ ಪ್ರೇಕ್ಷಕನಾಗಿ ನಾಟಕ ನೋಡಿ ಆನಂದಿಸಿದ್ದೇನೆ.
———————————–
ಗೊರೂರು ಅನಂತರಾಜು