ಶೋಭಾ ಹಿರೇಕೈ ಕಂಡ್ರಾಜಿ ಕವಿತೆ-ಹಬ್ಬ ಮತ್ತು ಹುಣ್ಣಿಮೆ

ಕಾವ್ಯ ಸಂಗಾತಿ

ಶೋಭಾ ಹಿರೇಕೈ ಕಂಡ್ರಾಜಿ

ಹಬ್ಬ ಮತ್ತು ಹುಣ್ಣಿಮೆ

ಸಂಕ್ರಾಂತಿ ಯೋ ಶಿವರಾತ್ರಿ ಯೋ
ರಂಜಾನೋ,ಬಕ್ರೀದೋ…ದೀಪಾವಳಿಯೋ
ಕ್ರಿಸ್ಮಸ್ಸೋ..ಚೌತಿಯೋ ಅಂತೂ
ಹಬ್ಬ ಜಗಕೆಲ್ಲ

ಆಗೆಲ್ಲ ನಾನೂ.. ಸೌರಿಸುತ್ತೇನೆ
ವಾರ ಮುಂಚೆಯೇ ಎಲ್ಲರಂತೆ

ಮನೆ ಮಾಡು ಗುಡಿಸಿ
ಗೋಡೆ ಕಿಟಕಿ ಒರೆಸಿ
ಹಿತ್ತಾಳೆ ಕಂಚಿನ ಹರಿವಾಣ ದೀಪಗಳನ್ನೆಲ್ಲ
ತೊಳೆದು ಹೊಳೆಸಿ ಮನೆಯ ಝಗಮಗಿಸಲು
ಅಣಿ ಮಾಡುತ್ತೇನೆ

,

ಯೂಟ್ಯೂಬ್ ಸರ್ಚಿಸಿ
ಹೊಸ ರಂಗೋಲಿಯ ಕಲಿತು
ಬೊಟ್ಟು ಬಿಡದೆಯೂ
ಬಣ್ಣ ತುಂಬುತ್ತೇನೆ

ಮಾವಿನ ತೋರಣ
ಬಾಗಿಲ ಶೃಂಗಾರ
ದೇವರ ಪೂಜೆ, ನಾನಾ ಅಡುಗೆ
ಜೊತೆಗೆ ಎಂದೂ ಉಡದ್ದೊಂದು
ಹೊಚ್ಚ ಹೊಸ ಸೀರೆ
ಹರಳ ಜುಮುಕಿಯೋಲೆ
ಎಲ್ಲರಿಗಿಂತಲೂ ಚಂದ
ನಾನೇ
ತಯಾರಾಗುತ್ತೇನೆ

ಮಂಗಳಾರತಿ ಹೊತ್ತಿಗೆ
ಎಂದೋ ಕಲಿತ ಅಜ್ಜಿಯ ಹಾಡನ್ನೂ
ರಾಗ ತಪ್ಪದೇ
ಹಾಡುತ್ತೇನೆ.
ಮನೆಗೆ ಹಬ್ಬದ ಕಳೆ ತುಂಬುತ್ತೇನೆ

ಆಗೆಲ್ಲ ಹಬ್ಬ ಮನೆಗೆ!

ಪ್ರತಿ ಹುಣ್ಣಿಮೆಯ ಚಂದ್ರ
ನನ್ನ ನಿನ್ನ
ಮುಖಾಮುಖಿಯಾಗಿಸುವ
ತಿಂಗಳ ಬೆಳಕಲಿ ಮಾತ್ರ
ಹಬ್ಬ ನನಗೆ !

P

ಶೋಭಾ ಹಿರೇಕೈ ಕಂಡ್ರಾಜಿ.

2 thoughts on “ಶೋಭಾ ಹಿರೇಕೈ ಕಂಡ್ರಾಜಿ ಕವಿತೆ-ಹಬ್ಬ ಮತ್ತು ಹುಣ್ಣಿಮೆ

Leave a Reply

Back To Top