ಕಾವ್ಯ ಸಂಗಾತಿ
ಸ್ಮಿತಾ ರಾಘವೇಂದ್ರ ಕವಿತೆ
ಕಾಲ ಕಳೆದಂತೆ…
ಆಗೀಗ ಅಚಾನಕ್ಕಾಗಿ ಒಲವಿನ ಭೇಟಿಯಾಗುತ್ತದೆ
ಅದಕೀಗ ಮೊದಲಿನಂತೆ ಮುದ್ದು ಮುದ್ದಾಗಿ ನೋಡುವ ಗುಣವಿಲ್ಲ
ನನ್ನ ನಗುವಿಗೊಂದು ಪ್ರತಿಕ್ರಿಯೆ,
ಕ್ರಿಯೆಗೂ ತಕ್ಕುದಾದುದಲ್ಲ.
ಹೇಗಿದ್ದಿ ಎಂದರೆ
ಹಗಲು ಗನಸು ಕಾಣಬೇಡವೆಂದು
ಮಾತು ಮುರಿಯುತ್ತದೆ
ಮುಗಿದದ್ದು
ಅಳಿದಿದ್ದು
ಕಳೆದದ್ದು
ಕರಗಿದ್ದರ ಬಗ್ಗೇಯೇ ಚಿಂತೆ ನಿನಗೆ
ಮುಂದೆ ಸಾಗುವ ಆಲೋಚನೆಯೇ ಇಲ್ಲವೇ!
ಬರೀ ಹುಬ್ಬು ಬಿಗಿದುಕೊಂಡ ಪ್ರಶ್ನೆ,
ಹಿಂದೆ ನಡೆದದ್ದರ ಮೇಲೆಯೇ ಅಲ್ಲವೇ
ಮುಂದಿನ ಬದುಕು
ತುಟಿಯ ತೆಳು ನಗುವಿನ ಪ್ರಶ್ನೆ ನನ್ನದು
ತಕ್ಷಣವೇ ಮಾಯವಾಗಿಬಿಡುತ್ತದೆ
ಮಾತು ಕತ್ತರಿಸುವುದು
ಮೌನ ಕನವರಿಸುವುದು
ಎರಡೂ ಒಂದೇ.
ನನ್ನ ಒಳಗುದಿ
ತನ್ನಷ್ಟಕ್ಕೆ ತಾನೇ ಸಾಗುವ ನದಿ
ತನ್ನ ಗಮ್ಯವನ್ನು ತಾನೇ ಹುಡುಕುವುದು-
ವಾಸ್ತವದಲ್ಲಿ ಅದು ಹುಡುಕುವುದಲ್ಲ
ಸಾಗುತ್ತದೆ ಅಷ್ಟೇ.
ದಾರಿ ತರೆದುಕೊಳ್ಳುತ್ತದೆ ತನ್ನಿಂದ ತಾನೇ
ಎಲ್ಲವೂ ಅದರಷ್ಟಕ್ಕೆ
ಬದುಕೇನು ಮತ್ತೆ ಬೇರೆಯೇ!
ಒಂದು ಮಾತಿಗೆ
ಒಂದು ಪ್ರೀತಿಗೆ
ಒಂದು ಕನಸಿಗೆ
ಕೊನೆಗೆ ಒಂದು ನೋಟಕ್ಕೂ
ತೆರೆದುಕೊಳ್ಳುತ್ತದೆ ತನ್ನಿಂದ ತಾನೇ.
ಮತ್ತದೇ ಗಂಟಿಕ್ಕಿದ ನೋಟ
ತುಟಿಯ ತೆಳು ನಗುವಿನ ಯುದ್ಧ ಅಷ್ಟೇ
ಮಾತಾಗಲೆಂದೇ ಮಾತಾದಂತೆ.
ಸ್ಮಿತಾ ರಾಘವೇಂದ್ರ
Pratiyobbara jeevanada kaleda kalada savi nenapu,,,,, nimma e uttama kavanadinda ri❤️
ಧನ್ಯವಾದ