ಇಂದಿರಾ ಮೋಟೆಬೆನ್ನೂರ ಕವಿತೆ-ನಗೆ ಮಲ್ಲಿಗೆ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ ಕವಿತೆ

ನಗೆ ಮಲ್ಲಿಗೆ

ಚಿಕ್ಕ ಮಗುವ ಹಾಗೆ ತೆಕ್ಕೆಗೆ ಬಿದ್ದು
ಪ್ರೀತಿಸೆಂದು ಗೋಗರೆದೆ ನೀನಂದು…
ಅಕ್ಕರೆ ತೋರಿ ನುಡಿವರಾರಿಲ್ಲವೆಂದು
ಪಕ್ಕದಲಿ ನಿಂದೆ ಸ್ನೇಹ ಬೇಕೆಂದು…

ಪ್ರೀತಿ ಸ್ನೇಹದಂತ ಭಾವ ಬೇರಿಲ್ಲ..
ನಂಬೆನ್ನ ಎಂದು ನೀನಂದೆ ಅಂದೆ…..
ಹಿಂದೆ ಮುಂದೆ ಯೋಚಿಸದೆ ಕಣ್ಮುಚ್ಚಿ
ನಂಬಿ ನಡೆದೆ ನಾ ನಿನ್ನ ಹಿಂದೆ….

ಭಾವ ಮಲ್ಲಿಗೆ ಸುರಿದು ಕಟ್ಟಿದ ಮುಗ್ಧ
ಪದಮಾಲೆ ಕಳಪೆ ಎನ್ನುತಿಹೆ ಇಂದು..
ಸಿಂಧುವಾಗಿ ಉಕ್ಕಿ ಭೋರ್ಗರೆದಿದೆ
ನೀನಂದು ಬಿತ್ತಿದ ಭಾವಬಿಂದುವೇ ಇಂದು..

ಮುಗ್ಧ ಮಗುಮನ ದೂರಿ ದೂರ
ತಳ್ಳಲು ಬಂತು ಮನ ಹೇಗೆ …
ಪ್ರೀತಿ ಹಂಚುತ ಬದುಕಿಹ ಹೂ ಹೃದಯ
ಹುಡುಗಿಯುಡಿಗೆ ದ್ವೇಷದ ಕೊಡುಗೆ…..

ಸ್ನೇಹಭಾವ ಪದ ಮಲ್ಲಿಗೆ ಮೆಲ್ಲಗೆ..
ಹೂವಾಗಿ ಅರಳಿದೆ ಬೇರೇನಿಲ್ಲ ಇಂದು..
ಶಶಿ ಚೆಂಬೆಳಕು ನೆಲದ ಹೂ ಚಿಗುರನೊಪ್ಪಿ
ಅಪ್ಪಿ ನಡೆದ ಸೃಷ್ಟಿ ಗಾನದಿ ಮಿಂದು..

ನೀನೆಷ್ಟು ನೋವ ನೀಡಿದರೂ
ದ್ವೇಷಿಸಲಾರೆ ಪ್ರೀತಿಸುವೆ ಎಂದೆಂದೂ…
ನೀನೆಷ್ಟು ದೂರ ತಳ್ಳಿದರೂ
ಶಪಿಸಲಾರೆ ಹಾರೈಸುವೆ ಎಂದೆಂದೂ..

ಮನದ ಕನ್ನಡಿಯ ಧೂಳ ಒರೆಸೊಮ್ಮೆ ..
ಸ್ನೇಹಕೆ ಸಮಯ ಸಾಲದು ರೋಷಕೆ ತಾವೆಲ್ಲಿ…?
ಕಂಗಳ ಮುಸುಕಿದ ಮಸಕ ಸರಿಸೊಮ್ಮೆ…
ಪ್ರೀತಿಗೆ ಜನ್ಮ ಸಾಲದು ದ್ವೇಷಕೆ ತಾವೆಲ್ಲಿ..?

ಪೊಸತು ಪ್ರೀತಿ ರಾಗ ಸ್ನೇಹ ಗಾನ
ಮಿಡಿತಕೆ ತಲೆದೂಗಿದೆ ಭುವನ ಮೆಲ್ಲಗೆ …
ಜೀವದ ಗೆಲ್ಲು ಗೆಲ್ಲಲಿ ಅರಳಿ ನಗುತಿದೆ
ಪ್ರೀತಿ ಪದಸಿರಿ ಕವನ ದವನ ಮಲ್ಲಿಗೆ….


ಇಂದಿರಾ ಮೋಟೆಬೆನ್ನೂರ.

Leave a Reply

Back To Top