ಅನಸೂಯ ಜಹಗೀರದಾರ-ನಿರೀಕ್ಷೆ

ಕಾವ್ಯಸಂಗಾತಿ

ಅನಸೂಯ ಜಹಗೀರದಾರ

ನಿರೀಕ್ಷೆ

ಅವನೊಮ್ಮೆ
ಅವಳೆದೆಯ
ಮುಟ್ಟಬೇಕಿತ್ತು…
ಮನದ ಬಾಗಿಲು
ತಟ್ಟಬೇಕಿತ್ತು

ಮೀನ ಮೇಷ ಎಣಿಸುತ್ತ ..
ಮಿಜಿ ಮಿಜಿ
ರಾಗಾ ರಾದ್ದಾಂತ
ದ್ವಂದ್ವ ನಿಲುವು ಅವನದು.

ಎಳೆಯಲಿಲ್ಲ ಸೆಳೆಯಲಿಲ್ಲ..
ಮಿರಮಿರನೆ ಹೊಳೆಯಲಿಲ್ಲ..
ಕೆಳೆಯ ಕೇಳಿಯಿಲ್ಲ..
ಬರಸೆಳೆಯಲಿಲ್ಲ.

ಬಂಧಿಯಾಗಿಸಲಿಲ್ಲ
ಜುಗಲ್ ಬಂಧಿ ಹಾಡಲಿಲ್ಲ..
ಗಾಯದ ಹರಿವು ಹರಿದು
ಹಸಿಗೊಳ್ಳಲಿಲ್ಲ.

ನುಂಗಲಿಲ್ಲ‌‌‌
ನುಗಿಸಲಿಲ್ಲ..
ನುಗ್ಗಾಗಲೂ ಇಲ್ಲ.
ನುಗ್ಗಿ ನುಗ್ಗಿ ಒತ್ತರಿಸುವ ಬಿಕ್ಕು
ದನಿಗೂಡಲಿಲ್ಲ

ಮೌನವೂ ಮಾತೂ
ಎದೆಯ ಸೀಳಿ
ಹೊಕ್ಕಲಿಲ್ಲ
ಮುಕ್ಕಲಿಲ್ಲ
ಮೈ ಮನ
ಮುಕ್ಕಾಗಿಸಲೂ ಇಲ್ಲ

ಪ್ರೀತಿಯೆಡೆಗೆ..,.
ಜಗ್ಗಲೊಲ್ಲ
ಪರಸ್ಪರ ಸ್ಪರ್ದೆ
ಜುಗ್ಗಾಜುಗ್ಗಿಯಾಗಲಿಲ್ಲ.

ಝಗ್ಗನೇ ಬೆಂಕಿ ಹೊತ್ತಿಕೊಳ್ಳಲಿಲ್ಲ
ಬೆನ್ನು ಹುರಿಯಲಿ
ಹರಿದಾಡಲಿಲ್ಲ

ನನ್ನತ್ತ;
ತಿರುಗಬೇಕಿತ್ತು.
ಮನಸೆಂಬ ಬುಗುರಿ..ಗರ ಗರ.
ಮೋಹದತ್ತ
ಕೇಂದ್ರೀಕರಿಸಬೇಕಿತ್ತು..
ನೋಟವೆಂಬ ಶರ

ತನ್ನ ಸುತ್ತಲೇ ಪರಿಭ್ರಮಣ
ಅವನದು
ಸ್ವಾರ್ಥದ ಪರಮಾವಧಿ
ಅವನದು
ಹಾಕಿದ್ದೇ ಗೀರು,ನಡೆದದ್ದೇ ದಾರಿ
ಅವನದು.

ತಿಳಿಯಿತು ಅವಳಿಗೆ
ನಿರೀಕ್ಷೆ ಅನ್ನುವುದೇ
ಕಸರತ್ತಿನ
ಪರಿಭ್ರಮಣ..!


ಅನಸೂಯ ಜಹಗೀರದಾರ

5 thoughts on “ಅನಸೂಯ ಜಹಗೀರದಾರ-ನಿರೀಕ್ಷೆ

  1. ನಿರೀಕ್ಷೆಯ ಮನ ಅಲ್ಲಿ ಸುತ್ತುತಿದೆ ಅಂದು ಕೊಳ್ಳುತ್ತೆವೆ.
    ಅಲ್ಲ ಅದು ನಮ್ಮ ಮನದ ಸುತ್ತ ಗಿರಿಕಿ ಹೊಡೆಯುತ್ತಿರುತ್ತದೆ.
    ಕವನ ಚನ್ನಾಗಿದೆ

  2. ನಿಜ..ಸರ್..
    ನಿರೀಕ್ಷೆ ಇಟ್ಟುಕೊಳ್ಳಬಾರದು.
    ಧನ್ಯವಾದಗಳು ನಿಮ್ಮ ಸ್ಪಂದನೆಗೆ ಖುಶಿಯಾಯ್ತು.

Leave a Reply

Back To Top