ಕಾವ್ಯಸಂಗಾತಿ
ರೋಹಿಣಿ ಯಾದವಾಡ
ದ್ವಿಪದಿಗಳು
ನಿನಂತರಂಗವ ಬಲ್ಲವರಾರಿಲ್ಲೆಂಬ ಹೆಮ್ಮೆ ನಿನಗೆ
ಓದದೆಯೂ ತಿಳಿದಿರುವೆ ನಿನಂತರಂಗವ ಎಲ್ಲ.
ಬಯಸಿ ಬಯಸಿ ಬೇಡಿಕೊಂಡೆ ನೀನೇ ಬೇಕೆಂದು
ಬಯಸದೆಯೆ ಬಳಿ ಬಂದು ಸಿಕ್ಕೆಯಲ್ಲ ಎಂದೆ
ಕಾಡಿ ಬೇಡಿ ಸೋಲಿಸಬೇಕೆಂಬ ಹಠ ನನಗೆ
ಯಾವ ಗೊಡವೆ ಇಲ್ಲದೆ ಒಲಿದು ಬಿಟ್ಟೆ ನೀನು
ಬಾಳಪಯಣ ಸುಗಮವಲ್ಲ ಎಂದರು ಎಲ್ಲರೂ
ಬಾಳಿ ನೋಡು ಸಮರಸದಿ ಎಂದುಬಿಟ್ಟೆ ನೀನು
ಕುಟುಂಬವೇ ಚರ ಆಸ್ತಿ ನಿನ್ನದು ಎಂದೆ ನನಗೆ
ಕುಟುಬವೇ ನನ್ನ ಅಸ್ಮಿತೆ ಎಂದೆ ನಾನು ನಿನಗೆ
ಕಾಣಿಕೆ ಕೊಟ್ಟು ಗೆದ್ದಕೊಳ್ಳುವ ಹವಣಿಕೆ ನಿನಗೆ
ಪ್ರೀತಿಯೊಂದೆ ಸಾಕು ಜಗವ ಗೆಲ್ವೆನೆಂದೆ ನಾನು
ಬಾಳ ದಾರಿ ಹೂವಿನ ಹಾಸಿಯಲ್ಲವೇನೊ ನಿಜ
ಕಲ್ಲುಮುಳ್ಳ ದಾಟಿ ಸಾಗುವುದೇ ನಿಜ ಬದುಕೆಂದೆ
ಭಾವನೆಗಳು ಬಿಕರಿಗಿಲ್ಲ ಎಂದು ಅರ್ಥೈಸಿಕೊ
ಆಂತರ್ಯದ ನೋವಿಗೂ ನೋವಿದೆ ಎಂದರಿತುಕೊ
ಸ್ವರ್ಗ ತೋರಿಸುವೆ ಬಾ ಜೊತೆಗೆಂದೆ ನೀನು
ನಿನ್ನೊಲವಲಿ ಮಿಂದಿರೆ ಸ್ವರ್ಗವೆಕೆಂದೆ ನಾನು
ಆಸೆಗಳಿಗೆ ಮಿತಿ ಬೇಕು ಎಂದರು ಎಲ್ಲರೂ
ಮನದ ಆಸೆಗೆ ಮಿತಿಯ ಚೌಕಟ್ಟೇಕೆ ಎಂದೆ
ಕನಸುಗಳ ಬೆನ್ನತ್ತಿ ಹೋದವರು ಸೋತಿಹರೆಂದೆ
ನನ್ನ ಕನಸುಗಳ ಸುತ್ತ ನೀ ಸುತ್ತಲು ಗೆದ್ದೆನೆಂದೆ.
ಗಮನ ಸೆಳೆದ ಬರಹ