ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲು
ವಿರಹ
ಸಮುದ್ರದ ದಂಡೆಯಲ್ಲಿ ಕುಳಿತು
ದಿಟ್ಟಿಸುತ್ತಿದ್ದ ಮನ ದಿಕ್ಕುಕಾಣದೆ
ಪರಿತಪಿಸಿದ ಆ ಹೊತ್ತು
ಅಲೆ ಮೈದಡವಿ ಕಂಪಿಸಿ
ವಿರಹದ ಆಲಿಂಗನದಿ ಮರಳಿತು.
ಮರಳರಾಶಿಯಲಿ ನಾ ಕಟ್ಟಿದ ಮನೆ
ಯಾರು ನುಸುಳ ಬಾರದೆಂದು
ಬಾಗಿಲು ಇಲ್ಲವಾಗಿದ್ದವು
ಮೇಲ್ಛಾವಣಿ ಕುಸಿದಾಗ
ನನ್ನ ಕನಸಿಗೆ ರೆಕ್ಕೆ ಕಳಚಿತು.
ನನ್ನೊಡಲ ಕುಡಿ
ತನ್ನದೇ ಭಾವಗಳ ಹೃದಯದಿ ಕಾಪಿರಿಸಿ
ಕಟ್ಟುತ್ತಿಹಳು ತನ್ನ ಕನಸಿನ ಗೂಡು
ಅಲ್ಲಲ್ಲಿ ಕಿಟಕಿ ಬಾಗಿಲುಗಳು
ತಂಗಾಳಿ ನುಸುಳಿ ಆಲಂಗಿಸಿತು.
ತನ್ನ ಕುಡಿನೋಟದಲಿ ದಿಟ್ಟಿಸುತಿಹಳು
ನನ್ನ ಉತ್ತರಕ್ಕಾಗಿ
ಬಿರುಗಾಳಿಯಾಗದೆ ಅವಳ ಕನಸಿನ ಗೂಡಿಗೆ
ಬಯಸಿದ ಕುಳಿರ್ಗಾಳಿ
ಕಾವಲಾಯ್ತು ಕುಡಿಗೆ.
ಅವಳ ಪುಟ್ಟ ಕುಡಿ ತನ್ನದೇ ಲೋಕದಲಿ
ನುಣುಪು ಕೈಗಳಿಂದ ಹದವಾಗಿ
ಬಾಲಗಣಪ ಜನಿಸಿದ್ದ ಮರಳ ರಾಶಿಯಲ್ಲಿ
ಕುಡಿಯ ಸಾರ್ಥಕತೆ ಕಿಚ್ಚೆಬ್ಬಿಸಿತು ಸೃಷ್ಟಿಗೆ
ಸುನಾಮಿ ಅಲೆಗಳು ಸೆಳೆದೊಯ್ದವು
ಮೂವರೊಂದಿಗೆ ಗಣಪ.
ವಿಮಲಾರುಣ ಪಡ್ಡoಬೈಲು