ಡಾ. ಬಸಮ್ಮ ಗಂಗನಳ್ಳಿ-ಸಜ್ಜಲಗುಡ್ಡದ ಅಮ್ಮ

ಕಾವ್ಯ ಸಂಗಾತಿ

ಡಾ. ಬಸಮ್ಮ ಗಂಗನಳ್ಳಿ

ಸಜ್ಜಲಗುಡ್ಡದ ಅಮ್ಮ

ಧರೆ ಪಾವನವಾಗಿಸಲು
ಜನಿಸಿ ಬಂದ ತಾಯೆ
ಅಕ್ಕನ ನಂತರ ‘ಅರಿವು’
ಇಳಿಯಿತು ಈ ಇಳೆಗೆ ll

ಅಂದು ಶರಣರಿಗೆ
ಕೈಲಾಸ ಕಲ್ಯಾಣವು
ಕಂಬಳಿಹಾಳವ ಸ್ವರ್ಗವ
ಮಾಡಿದ ತಾಯೆ ನೀನುll

ಅಕ್ಕನ ಚೊಕ್ಕ ಜ್ಞಾನ
ಅಣ್ಣನ ಭಕ್ತಿ ದಾಸೋಹ
ಪ್ರಭುದೇವರ ಪ್ರಖರ ಚಿಂತನೆ
ಎಲ್ಲ ಶರಣರ ನಿಲುವು ಆಶಯll

ಜಗದ ಜಂಜಡವ ತೊರೆದು
ಮಿಗೆ ಎನಿಪ ಆತ್ಮನ ಕಂಡು
ಬೆಳಕಾದೆ ನೀನು ಈ ಭುವಿಗೆ
ಸತ್ಯ ಶರಣೆಯು ಸಜ್ಜಲಮ್ಮ ll

ಮಾನವತೆಯ ಮಂದಾರ
ಸಮತೆಯ ಸಿರಿಯು ನೀನು
ಸಹನೆ ಶಾಂತಿ ದಿವ್ಯ ಕಳೆಯು
ಸಜ್ಜಲಗುಡ್ಡದ ಪುಣ್ಯಪುಂಜವುll

ಸರ್ವರ ಹಿತಕೆ ಜೀವ ಸವೆಸಿದೆ
ಅಚಲ ನಿಷ್ಠೆಯ ತಾಳಿದ ತಾಯೆ
ಕಷ್ಟ ಕಾರ್ಪಣ್ಯಗಳ ಮೆಟ್ಟಿ ನಿಂತೆ
ಗೆಲಿದೆ ಬದುಕಿನ ಪರೀಕ್ಷೆಯll

ಅಕ್ಷರ ದಾಸೋಹ ಮಾಡಿ
ಅನ್ನ ಸಂತರ್ಪಣೆಗೈದು
ಸತತ ವಚನ ಅಧ್ಯಯನದಿ
ನಡೆದೆ ನೀನು ಧರ್ಮ ಬಿಡದೆll

ಅಗರ್ಭ ಆಧ್ಯಾತ್ಮದ ಗಣಿಯು
ಕರುಣೆಯ ಕಡಲು ನೀನು
ಮನದ ಮರವೆ ಕಳೆದ ತಾಯಿ
ಭವಪಾಶವ ಬಿಡಿಸಿದೆ ನೀನುll


ಡಾ. ಬಸಮ್ಮ ಗಂಗನಳ್ಳಿ

One thought on “ಡಾ. ಬಸಮ್ಮ ಗಂಗನಳ್ಳಿ-ಸಜ್ಜಲಗುಡ್ಡದ ಅಮ್ಮ

  1. ಶರಣಮ್ಮ ಅಮ್ಮನ ಬಗ್ಗೆ ನಿಮ್ಮ ಕವನ ರಚನೆ ಸೊಗಸಾಗಿದೆ ಮೇಡಂ

Leave a Reply

Back To Top