ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಸ್ನೇಹ ಹಕ್ಕಿ
ಪಕ್ಕದಲಿ ಇರುತ
ಒಲವ ತೆಕ್ಕೆಯ
ಮತ್ತೆ ಅಪ್ಪಿ ಒಪ್ಪಿ
ಪಕ್ಕ ಬಿಚ್ಚಿ ಹಾರಿ
ಹೋದ ಪತಂಗ ನೀನು…
ನಕ್ಕು ನಗುತ
ಎಲ್ಲರ ನಗಿಸಿ
ನನ್ನ ಮೊಗದ ನಗೆ
ಕಸಿದು ದೂರ ಸರಿದು
ಮಿಡಿದ ನೋವು ನೀನು..
ಎದೆಯ ಗೂಡಲಿ
ಹಾಡಿ ಒಲುಮೆ
ಮಿಡಿದು ನೂರು ರಾಗ
ಹಾರಿ ಹೋದ
ಸ್ನೇಹ ಹಕ್ಕಿ ನೀನು…
ಮುಗಿಲ ತೊಟ್ಟಿಲಲ್ಲಿ
ಮಲಗಿ ಪ್ರೇಮ
ಬೆಳದಿಂಗಳ ಸ್ಫುರಿಸಿ
ಮಾಯವಾದ
ಬಾನ ಚುಕ್ಕಿನೀನು…
ಎದೆಯ ಆಳದಲ್ಲಿ
ಭಾವ ಬಿತ್ತನೆ ಮಾಡಿ
ಒಲವ ಕೆತ್ತನೆ ಮಾಡಿ
ತೊರೆದು ಹೋದ
ಜಾಣ ಶಿಲ್ಪಿ ನೀನು..
ಬುದ್ಧಿಯಾಚೆಯ ಮಾತ
ಆಲಿಸಿ ಪ್ರೀತಿ ಪಣ್ಯ
ವಸ್ತುವಾಗಿಸಿ
ಜೀವಾವಧಿ ಶಿಕ್ಷೆ ನೀಡಿದ
ಎದೆ ಬಿಕ್ಕು ನೀನು….
ನಗೆ ತಾರದಿದ್ದರೂ
ನೋವ ಕೊಡಲಾರೆ
ಎನುತ ನೋವಿನ ಬೆಟ್ಟ
ನೆಲದ ಹೂವುಡಿ ತುಂಬಿ
ಗಗನದಲೆವ ಶಶಿಯು ನೀನು..
ಉಮ್ಮಳಿಸಿ ಬರುವ
ದುಃಖದ ಬಿಡಿಸಲಾಗದ
ಕಗ್ಗಂಟು ಒಲವಿನಂಟು
ನಕ್ಕ ಬಾನ ಚಂದಿರ
ಬಾಳ ಬಟ್ಟೆ ಸಿಕ್ಕು ನೀನು…
ಇಂದಿರಾ ಮೋಟೆಬೆನ್ನೂರ
ಸುಂದರ ಕವಿತೆ ಮೇಡಂ ಧನ್ಯವಾದಗಳು
ಮೀನಾಕ್ಷಿ ಮೇಡಂ…ಕವಿ ಮನದ ಸ್ಪಂದನೆಗೆ ಆತ್ಮೀಯ ಧನ್ಯವಾದಗಳು ತಮಗೆ…