ಪ್ರಮೋದ ಜೋಶಿ-ಗೊತ್ತಾಗಲಿಲ್ಲಾ

ಕಾವ್ಯ ಸಂಗಾತಿ

ಪ್ರಮೋದ ಜೋಶಿ

ಗೊತ್ತಾಗಲಿಲ್ಲಾ

ಸಮಯದ ಆಟದೊಳು
ಆಡುತ್ತಿದ್ದ ನಮಗೆ
ವಯಸಾಗಿದ್ದೇ ಗೊತ್ತಾಗಲಿಲ್ಲಾ

ಹೆಗಲ ಮೇಲೆ ಕುಳಿತ ಮಕ್ಕಳು
ಹೆಗಲೆತ್ತರ ಬೆಳೆದದ್ದು ಗೊತ್ತಾಗಲಿಲ್ಲಾ
ಭಾಡಿಗೆ ಮನೆಯಿಂದ ಶುರುವಾದ
ಸಂಸಾರ ಸ್ವಂತ ಮನೆಗೆ ಬಂದದ್ದು
ಗೊತ್ತಾಗಲಿಲ್ಲಾ

ಕೆಲಸಕ್ಕೆ ಅಲೆದಾಡಿ ಸುಸ್ತಾಗಿದ್ದ
ನಮಗೆ ನಿವೃತ್ತಿಯಾಗಿದ್ದು ಗೊತ್ತಾಗಲಿಲ್ಲಾ

ಎದೆಯುಸಿರು ಬಿಡುತ್ತ
ಸೈಕಲ ತುಳಿದ ನಮಗೆ
ಇಂದು ಕಾರಿನಲ್ಲಿ ಓಡಾಡುವುದು
ಗೊತ್ತೇ ಆಗಲಿಲ್ಲಾ

ತಂದೆ ತಾಯಿಯ ಜವಾಬ್ದಾರಿಯಲಿ
ಇದ್ದ ನಾವು ಜವಾಬ್ದಾರಿಯುತರಾಗಿದ್ದು
ಗೊತ್ತಾಗಲಿಲ್ಲಾ

ದಟ್ಟ ಕಪ್ಪು ಕೂದಲನ್ನು
ಬಾಚಿ ಬಾಚಿ ಸಿಂಗರಿಸಿಕೊಂಡರೂ
ಬಿಳಿ ಕೂದಲಾಗಿದ್ದು
ಗೊತ್ತಾಗಲಿಲ್ಲಾ

ನಿರಾಯಾಸವಾಗಿ ಹಗಲಿನಲಿ
ಮಲಗುತ್ತಿದ್ದ ನಮಗೆ
ರಾತ್ರಿಯ ನಿದ್ದೆಯೂ ದೂರಾಗಿದ್ದು
ಗೊತ್ತಾಗಲಿಲ್ಲಾ

ಹಗಲಿರಳೂ ಮಕ್ಕಳಿಗಾಗಿ ದುಡಿದು
ಕೂಡಿಟ್ಟರೂ ಮಕ್ಕಳು ದೂರಾಗಿದ್ದು
ಗೊತ್ತಾಗಲಿಲ್ಲಾ

ಕೂಡು ಕುಟುಂಬದೊಳಿದ್ದು
ಮೆರೆದ ನಮಗೆ
ನಮ್ಮಿಬ್ಬರದೆ ಸಂಸಾರ ಸೀಮಿತವಾಗಿದ್ದು
ಗೊತ್ತಾಗಲೇ ಇಲ್ಲಾ

ಈಗಲಾದರೂ ನಮಗಾಗಿ ದುಡಿಯಬೇಕೆಂದರೆ
ದೇಹದ ನಿಶಕ್ತತೆ ಹಿಂದೆ ಸರಿಸಿದ್ದು
ಗೊತ್ತಾಗಲಿಲ್ಲಾ

ವ್ಹಾ ಸಮಯವೆ ನೀ ಇರುವುದು ಹೀಗೆಯೇ
ಹುಟ್ಟಿನಿಂದಲೆ ಜೊತೆ ಇದ್ದು
ಜೊತೆ ಜೊತೆ ನಡೆದರೂ
ನಾವ್ ಮಡಿದರೂ ನೀ ನಡೆವೆ
ಎಂಬುದು ಗೊತ್ತಾಗಲಿಲ್ಲಾ ಗೊತ್ತೇ ಆಗಲಿಲ್ಲಾ


ಪ್ರಮೋದ ಜೋಶಿ

One thought on “ಪ್ರಮೋದ ಜೋಶಿ-ಗೊತ್ತಾಗಲಿಲ್ಲಾ

Leave a Reply

Back To Top