ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಜಲ್
ಬಿರಿದ ಮೊಗ್ಗಿಗೆ ಪನ್ನೀರ ಲೇಪಿಸಿ
ಭಾವನೆಗಳ ಕರೆದುಬಿಡು
ಸುರಿದ ಮಳೆಗೆ ತನುವ ಚಳಿಗೆ
ಕಾಮನೆಗಳ ಎರೆದುಬಿಡು
ಹರಿವ ನೀರಿನ ರಭಸಕೆ ಈಜುವ
ಹುಚ್ಚಾಟವೇಕೆ ಹೇಳು
ಮುರಿದು ಮೌನವ ಬೆರೆಸಿ ಪ್ರೇಮವ
ಒಲವಿನೋಲೆ ಬರೆದುಬಿಡು
ಮೆರೆಸಿ ಪಲ್ಲಕ್ಕಿಯಲಿ ಕೆಳಕ್ಕೆ ತಳ್ಳಿ
ನೋಡುವುದು ಸಮಂಜಸವಲ್ಲ
ಇರಿಸಿ ನಂಬಿಕೆ ಬಾಳಿನಲಿ ಹಳೆಯ
ನೆನಪುಗಳ ತೊರೆದುಬಿಡು
ಉರಿಸಿ ಮತ್ಸರದ ಬೆಂಕಿಯ ಸುಡದಿರು
ಕಲ್ಪನೆಯ ಕನಸನು
ಸುರಿಸಿ ಪ್ರೀತಿಯ ಧಾರೆಯನು ಹೃದಯ
ಬಾಗಿಲನು ತೆರೆದುಬಿಡು
ಬೀರಿದ ನೋಟಕೆ ರಾಧೆಯು ಸೋತು
ತನ್ಮಯಳು ಚಿನ್ಮಯನಲಿ
ಹೀರುತ ಮಕರಂಧವ ದುಂಬಿಯಾಗಿ
ಹೂವನು ಪೊರೆದುಬಿಡು
ಅನುರಾಧಾ ರಾಜೀವ್ ಸುರತ್ಕಲ್
ದನ್ಯವಾದಗಳು
✍️