ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್
ಗಜಲ್ ೭೫(ಮಾತ್ರೆ೨೮)
ನಯನದಿ ಹೂಡಿದ ಮನ್ಮಥನ ಹೂ ಬಾಣಗಳು ಎದೆಗೆ ನಾಟಿದವು
ಒಲುಮೆಯ ಸ್ಪರ್ಶಕೆ ಮನವು ರೋಮಾಂಚನದಿ ಬಯಕೆಗಳು ಪುಟಿದವು
ಲಕ್ಷ್ಮಣ ರೇಖೆ ಹಾಕಿದರು ಬಿರಿದ ಹೂ ಕಂಪು ಗಾಳಿಗೆ ತೇಲಿತು
ರಂಗಿನ ಕುಸುಮಗಳ ಮಧು ಹೀರಲು ದುಂಬಿಗಳು ಬೇಲಿ ದಾಟಿದವು
ಚಂದಿರ ಅಪ್ಪುಗೆಯಲಿ ಕೊಳದ ನೈದಿಲೆಗಳು ಅರಳಿದವು ಹಿಗ್ಗಲಿ
ವಿರಹ ತಾಪಕೆ ಅನುರಾಗದ ದಾಹದಲಿ ಅಧರಗಳು ಸುರುಟಿದವು
ಬೆಳದಿಂಗಳ ರಾತ್ರಿ ಸರ್ಪಗಳು ಹೊಸೆಯುತಿವೆ ಕೇದಿಗೆಯ ಬನದಲಿ
ಹುಣ್ಣಿಮೆ ಇರುಳು ಒಂಟಿ ಹೃದಯದಿ ಮಿಥುನ ಭಾವನೆಗಳು ಹುಟ್ಟಿದವು
ಬಾಳಲಿ ವ್ಯಾಮೋಹದ ತಮ ಹೊದ್ದು ಮಲಗಿವೆ ಜಗದ ಜೀವಿಗಳು
“ಪ್ರಭೆ” ಹೊಳಪು ಚುಂಬಿಸಿದ ಹಾತೆಗಳ ರೆಕ್ಕೆಗಳು ನೆಲಕೆ ಅಂಟಿದವು
ಪ್ರಭಾವತಿ ಎಸ್ ದೇಸಾಯಿ