ಜಯಶ್ರೀ.ಜೆ. ಅಬ್ಬಿಗೇರಿ ಲಹರಿ ನೀ ಸನಿಹಕೆ ಬಂದರೆ ಹೃದಯದ ಗತಿಯೇನು?

ಲಹರಿ ಸಂಗಾತಿ

ಜಯಶ್ರೀ.ಜೆ. ಅಬ್ಬಿಗೇರಿ ಲಹರಿ

ನೀ ಸನಿಹಕೆ ಬಂದರೆ ಹೃದಯದ ಗತಿಯೇನು?

ಹೇ ಸಂಜು,

ಒಂದು ಹೊತ್ತಿನ ತುತ್ತು ಕೂಳಿನ ಮೌಲ್ಯ ಬಡವನಿಗೆ ಮಾತ್ರ ಗೊತ್ತು. ಯಾವ ದಿನ ಮೂರು ಹೊತ್ತು ಹೊಟ್ಟೆಗೆ ಊಟ ಸಿಗುತ್ತದೆಯೋ ಅದೇ ಹಬ್ಬದ ದಿನ. ಎಷ್ಟೋ ಸಲ ಹಬ್ಬದ ದಿನಗಳಂದು ಸಹ ಹೊಟ್ಟೆಗೆ ತಣ್ಣೀರಿನ ಬಟ್ಟೆ ಕಟ್ಟಿಕೊಂಡು ಮಲಗಿದ್ದೂ ಇದೆ.  ಶಿಕ್ಷಣ ಪಡೆಯುವುದು ನಮಗೆಲ್ಲ ಕನಸಿನ ಮಾತು‌. ಆದರೂ, ಅವರಿವರ ಮನೆ ಕೆಲಸ ಮಾಡಿ ನನ್ನ ತಾಯಿ ಉನ್ನತ ಅಧ್ಯಯನ  ಓದಿಸಿದ್ದೇ ದೊಡ್ಡದು. ಅಗಾಧ ಪ್ರತಿಭೆಯಿದ್ದರೂ ಯಾವ್ಯಾವುದೋ ಅನಿವಾರ್ಯತೆಗೆ ಕಟ್ಟು ಬಿದ್ದು ತಿಂಗಳ ಸಂಬಳಕ್ಕೆ ಹಗಲಿರುಳು ದುಡಿಯುವ ಕೋಟಿ ಕೋಟಿ ಮಂದಿಯಲ್ಲಿ ನಾನೂ ಒಬ್ಬನಾಗಿದ್ದೆ. ಬಡವರ ಪರಿಶ್ರಮದ ಫಲವಾಗಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ ಎಂಬುದು ಗೊತ್ತಿದ್ದರೂ ಕೊಡುವ ಅತ್ಯಲ್ಪ ಸಂಬಳಕ್ಕೆ ದುಡಿದು ದುಡಿದು ಮೂಳೆ ಸವೆದವೆ ಹೊರತು ಸಂಬಳ ಮಾತ್ರ ಹೆಚ್ಚಾಗಲಿಲ್ಲ ಅಂತ ಕೊರಗುತ್ತಿದ್ದ ಕಾಲವದು.

ಅದೇ ಸಮಯಕ್ಕೆ ಸರಿಯಾಗಿ ಕಣ್ಣಿಗೆ ಬಿದ್ದ ಚೆಲುವಿನ ರಾಶಿ ನೀನು.  ತಿಂದು ಕೊಳೆಯುವಷ್ಟು ಸಂಪತ್ತಿರುವ ಶ್ರೀಮಂತ ಮನೆತನದಲ್ಲಿ ದಂಪತಿಗೊಬ್ಬಳೇ ಮಗಳಾಗಿ ಹುಟ್ಟಿದ ನಿನಗೆ ಗುಡಿಸಲಿನ ಕಷ್ಟ ಸಂಕಷ್ಟಗಳ ಪರಿಚಯ ಅದ್ಹೇಗೆ ಇರುತ್ತೆ ಹೇಳು. ನೀ ಮಹಲಿನಲ್ಲಿ ನಾನು ಗುಡಿಸಲಿನಲ್ಲಿ. ಮಾತಿಲ್ಲ ಕತೆಯಿಲ್ಲ ಆದರೂ ಎದುರೆದುರು ಬಂದಾಗ ಏನೋ ಒಂಥರ ರೋಮಾಂಚನ, ಹೆದರಿಕೆ. ಭಯದಲ್ಲೂ ಕಣ್ಣುಗಳು ಮಾತನಾಡುವುದನ್ನು ಬಿಡುತ್ತಿರಲಿಲ್ಲ. ಕಂಗಳ ಬೆಳಕು ನೆರಳಿನಾಟ ನೋಡಿ ಇದೇನೋ ಸ್ವಲ್ಪ ಬೇರೆ ಇದೆ ಅಂತ ಅನಿಸುತ್ತಿತ್ತು. ಅದು ಮನಸ್ಸಿಗೆ ಮುದ ನೀಡುವ ಉತ್ಸಾಹ ಉಕ್ಕಿಸುವ ಸ್ಥಿತಿ. ನನಗೆ ಗೊತ್ತಿಲ್ಲದಂತೆ ಶುರುವಾಗಿತ್ತು. ಇದೇನೋ ಬ್ಯಾರೇನ ಐತಿ ಅಂತನೂ ಅನಿಸಿತ್ತು. ಈ ಹಿಂದೆ ಹೀಗೆ ಆಗಿರಲಿಲ್ಲ. ಅಲ್ಲದೇ ಮೈತುಂಬ ಕೆಲಸ ಇರುವಾಗ ಪ್ರೀತಿ-ಗೀತಿ ಅಂತ ತಲಿ ಕೆಡಿಸಿಕೊಳ್ಳಾಕ ಸಮಯವಿಲ್ಲ ಅಂತ ಅನಿಸುತ್ತಿತ್ತು. ಆಗಿದ್ದಾಗಲಿ ಒಮ್ಮೆ ಮೈಛಳಿ ಬಿಟ್ಟು ಬೆತ್ತಲೆಯ ಕೋಟೆ ಹತ್ತಿ ಎಂಜಾಯ್ ಮಾಡಬೇಕಂತನೂ ಅನಿಸುತ್ತಿತ್ತು. ಅದೆಲ್ಲ ವಯಸ್ಸಿನ ಖರಾಮತ್ತು ಅನಿಸಿ ಸುಮ್ಮನಾಗುತ್ತಿದ್ದೆ.

 ಬರಬರುತ್ತ ನಿನ್ನಲ್ಲಿ ಶ್ರೀಮಂತಿಕೆಯ ಬಿಗುವು ಮೊದಲಿನ ಒರಟುತನ ಜಿಗುಟತನ ಉಳಿದಿರಲಿಲ್ಲ. ಅದೊಂದು ಮಳೆಗಾಲದ ಸಂಜೆ ನಿಮ್ಮ ಔಟ್ ಹೌಸಿನ ಪಕ್ಕದಲ್ಲಿ ನಿಂತ ನಿನ್ನನ್ನು ಆಸೆ ಕಂಗಳಿಂದ ನೋಡುತ್ತಿದ್ದೆ. ಸೌಂದರ್ಯದಲ್ಲಿ ಬೆಳೆದು ಅರಳಿದ ಹೂವಂತಿರುವ ನಿನ್ನ ಧೈರ್ಯ ಮಾಡಿ ನಾನೇ ಕಣ್ಣ ಭಾಷೆಯಲ್ಲಿ ಪ್ರೀತಿಗೆ ಅನುಮತಿ ಕೇಳಿದೆ. ನೀನು ಹಸಿರು ನಿಶಾನೆ ತೋರಿದ್ದೇ ತಡ ತಲೆಯಲ್ಲಿ ಕೆಂಪು ಬೆಳಕೊಂದು ಮಿಣುಕತೊಡಗಿತು. ಅಷ್ಟರಲ್ಲಿ ನೀನು ನನ್ನ ಕೈಯನ್ನು ಎಂದಿಲ್ಲದ ಪ್ರೀತಿಯಿಂದ ಒತ್ತಿ ಹಿಡಿದಿದ್ದೆ. ಜಿಟಿಜಿಟಿ ಸುರಿವ ಮಳೆ ಸದ್ದು ಬಿಟ್ಟರೆ ಮತ್ತೇನೂ ಸದ್ದಿಲ್ಲ. ಸುರಿಯುವ ಮಳೆಯಲ್ಲೂ ಇಳಿಯುವ ಬೆವರು, ಜೋರಾದ ಎದೆ ಬಡಿತಗಳ ನಡುವೆ ಬಾಹುಗಳ ಬಂಧನ ಗಟ್ಟಯಾಗತೊಡಗಿತ್ತು. ಬಿಸಿಯುಸಿರುಗಳ ಸೇರುವಿಕೆ, ಹೇಳಿಕೊಳ್ಳಲಾಗದ ಒಪ್ಪಿಗೆ, ಮೈಯಲ್ಲೆಲ್ಲ ರೋಮಾಂಚನ ತುಂಬತೊಡಗಿತ್ತು. ಮನಸ್ಸುಗಳು ಗೊಂದಲದಲ್ಲಿದ್ದರೂ ಮೈಸಲುಗೆಯ ಸುಖ ಮೈಗಳು ಬಯಸಿದ್ದವು. ತೊಟ್ಟಿಕ್ಕುವ ಹನಿಗಳ ಸೆಳೆತಕ್ಕೊಳ್ಳಪಟ್ಟು  ಒಪ್ಪಿಗೆಯ ಮಿಲನಕ್ಕೆ ಒಪ್ಪಿಗೆ ಸೂಚಿಸಲು ಸಿದ್ಧಗೊಂಡಿದ್ದವು.
ದೇಹಗಳೆರಡು ಒಳಗೊಳಗೆ ಒಳಗೊಂಡಂತೆ ಒಂದಾದಂತೆ ಆ ಕ್ಷಣಕ್ಕೆ ಹಿತ ನೀಡುತ್ತಿದ್ದರೂ ಆ ಹಿತ ಇನ್ನಷ್ಟು  ಮತ್ತಷ್ಟು ಬೇಕೆನಿಸಿದ್ದರೂ ಆ ಕ್ಷಣ ಇಬ್ಬರೂ ಸುಖದಲ್ಲಿದ್ದರೂ ಪ್ರಣಯದ ಕೋಟೆಗೆ ಮನಸ್ಸು ಮಾಡದೇ ಹಿಂದೆ ಹೆಜ್ಜೆ ಇಟ್ಟೆ. ಏಕೆಂದರೆ ಅದು ಮದುವೆಯ ಮುನ್ನ ಮೈ ಒಪ್ಪಿಗೆಯ ಕಾಮವೇ ಹೊರತು ಮನಸ್ಸೊಪ್ಪುವ ಮಿಲನವಲ್ಲವೆನಿಸಿ ನಿನ್ನಿಂದ ದೂರಾದೆ.

ಶ್ರೀಮಂತರಿಗೆ ಬಡವರೆಂದರೆ ಬಳಸಿ ಎಸೆಯುವ ವಸ್ತುಗಳಂತೆನಿಸಿತು. ಆದರೆ ಬರಬರುತ್ತ ನೀನು ಹಾಗಿಲ್ಲ ಎಂಬುದು ಗೊತ್ತಾಯಿತು.  
ಕಲ್ಪನೆಯ ಕತೆ ಕವನಗಳ ಓದಿ ಬೆಳೆದ ನಿನ್ನಲ್ಲಿ ವಾಸ್ತವಿಕ ಬದುಕಿನ ಬವಣೆಗಳಿಗೆ ಮಿಡಿಯುವ, ಮೋಸ ವಂಚನೆ ವಿದ್ರೋಹ ಕೃತ್ಯಗಳನ್ನು ತಿದ್ದುವ ಸೌಜನ್ಯದ  ಗುಣವಿರುವುದನ್ನು ಕಂಡು ಮೂಕವಿಸ್ಮಿತನಾದೆ.

ಪ್ರಚಲಿತ ಸಮಸ್ಯೆಗಳ ಕುರಿತು ಚಿಂತನೆ, ಪರಿಹಾರ ಸೂಚಿಸುವ ಪರಿಯಂತೂ ಮೆಚ್ಚಲೇಬೇಕಾದದ್ದು. ಸಮಸ್ಯೆ ಬಗ್ಗೆ ಸಂಪೂರ್ಣ ಪರಿಶೀಲಿಸಿ, ಪರಾಮರ್ಶಿಸಿ ನೋಡುವ ವ್ಯವಧಾನ ಎಲ್ಲರಲ್ಲೂ ಇರುವುದಿಲ್ಲ. ಮೇಲಾಗಿ ಈ ಧಾವಂತದ ದುನಿಯಾದಲ್ಲಿ ಯಾರಿಗೂ ಮತ್ತೊಬ್ಬರ ಬಗ್ಗೆ  ಯೋಚಿಸುವಷ್ಟು ಸಮಯವೂ ಇಲ್ಲ.
ಯೌವ್ವನದ ಮನಸ್ಸಗಳಿಗೆ ರಂಗು ರಂಗಿನ ಬಯಕೆಗಳಿಂದ ಗರಿಗೆದರುವ ಮನಸ್ಸು. ಚೆಂದದ ಚಿತ್ತಾರದ ಕನಸುಗಳಲ್ಲಿ ಕ್ಷಣ ಕ್ಷಣಕ್ಕೂ ಮೈಮರೆಯುತ್ತಿತ್ತು. ನೀ ಹೀಗೆ ತೆಕ್ಕೆಯಲ್ಲಿ ಅನುಗಾಲ ಸಿಕ್ಕರೆ ಸನಿಹಕೆ ಬಂದರೆ ಹೃದಯದ ಗತಿ ಏನು ಎಂದು ಕನಸಿನಲ್ಲಿ ಮುಳುಗಿದರೆ ಸಾಕು ಖುಷಿಯೋ ಖುಷಿ.

ಹಾಗೆ ನೋಡಿದರೆ ಹರೆಯದ ಘಟ್ಟದ ತಿರುವುಮುರುವುಗಳು ಒಂದೆಡೆ ವಾಲಿದಂತೆ ಕಾಣುತ್ತವೆ. ಇನ್ನೊಂದೆಡೆ ಜಾರುಬಂಡೆಯಂತೆ ಅವೆರಡರ ಹಿಂದೆ ಉತ್ತರ ಒಂದೇ.ನಮಗಾರ ಭಯವಿಲ್ಲ  ಒಲವಿನ ರಸ ಹೀರಬಯಸುವೆವು ನಾವು.

 ಆಕಸ್ಮಿಕವಾಗಿ ಸುರಿದ ಒಲವಿನ ಮಳೆಯ ಆರ್ಭಟದಲ್ಲಿ  ನೆನೆದ ನೆನಪು ನೆನೆದರೆ ಮನದಲ್ಲಿ ಅದೇನೋ ಸಂಭ್ರಮ. ಮಳೆ ಹನಿ ತೊಟ್ಟಿಕ್ಕಿದಂತೆಲ್ಲ ತಂಪಾದ ತಂಗಾಳಿ  ಗಾಳಕ್ಕೆ ಸಿಲುಕಿ ತೇಲಾಡುವ ಮನಕ್ಕೊಂದು ಬೆಚ್ಚನೆಯ ಒಲವಿನ ಉಡುಗೊರೆ ಸಿಕ್ಕರೆ ಅಂತ ಯೋಚಿಸುತ್ತಿದ್ದೆ. ಮಳೆಯಲ್ಲಿ ತುಟಿಗಳ ಒಂದಾಗಿಸಿದ ಸಂತಸ ಒಂದೆಡೆಯಾದರೆ ಒಂದೇ ಕೊಡೆಯಡಿಯಲ್ಲಿ ಬೆರಳಿಗೆ ಬೆರಳು ಬೆರೆಸಿ ಭುಜಕ್ಕೆ ಭುಜ ಡಿಕ್ಕಿಸಿ ನಡೆಯುವಾಗಿನ ಸಂತೋಷ ಇನ್ನೊಂದೆಡೆ ಅದನ್ನಂತೂ ಮರೆಯಲು ಸಾಧ್ಯವಿಲ್ಲ. ಪ್ರೀತಿಯಲ್ಲಿ ಬಿದ್ದ ಎಲ್ಲರಿಗೂ ಹೀಗೇನಾ? ನನಗಷ್ಟೇ ಹೀಗೆನಾ ತಿಳಿಯದೇ ಒದ್ದಾಡಿದ ದಿನಗಳು ಅಲ್ಲಲ್ಲ ರಾತ್ರಿಗಳು ಅದೆಷ್ಟೋ. ಬಹುಶಃ ಎಲ್ಲರೂ ಪ್ರೀತಿಯೂ ಮೊದಮೊದಲು ಹೀಗೆಯೇ ಕಳೆದಿರುತ್ತದೆ. ಆದರೆ ಒಂದಂತೂ ಖಾತ್ರಿಯಿದೆ ಅದೇನೆಂದರೆ ನಮ್ಮಂತಹ ತರ್ಲೆಗಳಿಗೆ ಪ್ರೀತಿಯಲ್ಲಿ  ಸವಿಜೇನು ಸಿಗುವುದು ಜಾಸ್ತಿನೆ.  

ಕಾಲ ಬದಲಾದಂತೆ ಪ್ರೀತಿಯ ಚಿತ್ರಣವೂ ಬದಲಾಗಿದೆ ಕಾರಣ ಜನರು ಪ್ರೀತಿಯನ್ನು ದೈಹಿಕ ಅವಶ್ಯಕತೆ ಎಂದು ತಿಳಿದಿದ್ದಾರೆ ಹೊರತು ಜೀವನಾಮೃತ ಎನ್ನುವುದನ್ನು ಮರೆಯುತ್ತಿದ್ದಾರೆ. ಪ್ರೀತಿಯ ಒಡಲನ್ನು ಸೀಳಿ ಗಾಯಗೊಳಿಸಿದಷ್ಟು ನಮ್ಮ ಅಂತಃಶಕ್ತಿ ಬಲವನ್ನು ಕಳೆದುಕೊಳ್ಳುತ್ತ ಬರುತ್ತಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಪ್ರೀತಿ ಕುರುಡು. ಅದಕ್ಕೆ ಬಡತನ ಸಿರಿತನ ಗೊತ್ತಿಲ್ಲ. ನನಗ್ಯಾಕೋ ನಿಜ ಪ್ರೀತಿಯ ಗುಂಗು ಜನರಿಗೆ ಇಲ್ಲವೆನಿಸಿತ್ತು. ಪವಿತ್ರ ಪ್ರೇಮವ ಕಂಡು ಖುಷಿ ಪಡುವ ಜನರ ದಂಡು ಮಾಯವಾಗಿರುವುದಕ್ಕೆ ಇರಬಹುದು.

ಹರಿವ ಹರೆಯದ ಹರಿವಿಗೆ ಅಡ್ಡಲಾಗಿ ನಿಂತಿರುವ ಮೈಸುಖದ ಉನ್ಮತ್ತತೆಗೆ ಅವಘಡಗಳ ಅನಾಹುತಕ್ಕೆ ಸಿಲುಕಿ ಮುಳುಗಿ ಹೋದ ನಂತರ ತತ್ತರಿಸಿದ ಅದೆಷ್ಟೋ ಜೀವಿಗಳನ್ನು ಕಂಡಿದ್ದೇನೆ. ಪ್ರೀತಿಯಲ್ಲಿ ಅತಿವೃಷ್ಟಿ ಅನಾವೃಷ್ಟಿ ಸುಖಕರ ಜೀವನಕ್ಕೆ ಮಾರಕವೆಂಬುದು ತಿಳದಿರಬೇಕಾದುದು ಇಂದಿನ ಅನಿವಾರ್ಯವಾಗಿದೆ. ಜೀವನದ ಸಂತಸ ಅಡಗಿರುವುದು ಪ್ರೀತಿಯ ಉಳಿವಿನಲ್ಲಿ. ಅಂತರಂಗದ ಪ್ರೀತಿ ಬರಿದಾದಷ್ಟು ಜೀವನ ನೀರ ಮೇಲಿನ ಗುಳ್ಳೆಯಂತೆ ಆಗುತ್ತದೆ.
ಇಷ್ಟು ದಿನ ಪಟ್ಟ ಪರಿಶ್ರಮಕೆ ಆರಂಕಿ ಸಂಬಳವೊಂದು ಕೈ ಹಿಡಿದಿದೆ. ಜೀವನಪೂರ್ತಿ ನಿನ್ನ ಕೈಹಿಡಿಯುವ ಹಂಬಲ ಬಲವಾಗುತ್ತಿದೆ. ಶ್ರೀಮಂತಿಕೆಯ ದರ್ಪದಲ್ಲಿ ಮುಳಗಿದ್ದ ನಿನ್ನಪ್ಪ ನಿನ್ನಿಷ್ಟದ ಪ್ರೀತಿಯ ಕತೆ ಕೇಳಿ ನನ್ನನ್ನು  ಅಳಿಯನನ್ನಾಗಿ ಸ್ವೀಕರಿಸಲು ಮುಂದಾಗಿದ್ದಾನೆ. ಪ್ರೀತಿಯಲ್ಲಿ ಹಣದ ಮತ್ತಿನ ಅಗತ್ಯತೆ ಅವಶ್ಯಕತೆ ಇರುವುದಿಲ್ಲ ಪ್ರೀತಿಯಷ್ಟೇ ಇರುತ್ತದೆ ಎಂದು ತಿಳಿದಿದೆ.

ಈಗೀಗ ನೀ ಪ್ರತಿರಾತ್ರಿ ಬಳಿ ಬರುವುದು ನೆನೆನೆನೆದು ಎಲ್ಲವೂ ಹಿತವೇ ಅನಿಸುತ್ತಿದೆ. ಈಗ ಅರ್ಧಕ್ಕೆ ನಿಲ್ಲಿಸಿದ ಪ್ರಣಯದ ಪಯಣವ ದಿನರಾತ್ರಿ ಆರಂಭಿಸೋಣ ಅನಿಸುತ್ತಿದೆ.
ದೀರ್ಘ ಆಲಿಂಗನಕೆ ಸಿಹಿ ಚುಂಬನಕೆ ಬೆಸುಗೆಯ ರಾತ್ರಿಗೆ ಜಾತಕಪಕ್ಷಿಯಂತೆ ಕಾಯುತ್ತಿರುವೆ ನಿನ್ನೆದೆಯ ಸೀಳಿನ ನಡುವೆ ಉಬ್ಬುಗಳ ಮೇಲೆ ಮುತ್ತು ಬಿತ್ತುವ ಆತುರ ಇನ್ನಿಲ್ಲದಂತೆ ಕಾಡುತ್ತಿದೆ. ಈ ಬಡಪಾಯಿ ಪ್ರೇಮಿಯ ಮನಸಿಗೆ ಮನವಿಗೆ ಕರಗುವ ಗಳಿಗೆ ಬೇಗ ಬರಲಿ. ಗುಟ್ಟಿನಲಿ ಒಟ್ಟಾಗುವ ರುಚಿಕರ ಸಮಯ ಸವಿ ತರಲಿ. ಏನಂತಿ ಹೂಂ ಅಂತಿ ಸೇವಂತಿ?

ಇಂತಿ ನಿನ್ನ ಮಂಜು


ಜಯಶ್ರೀ.ಜೆ. ಅಬ್ಬಿಗೇರಿ ಲಹರಿ

5 thoughts on “ಜಯಶ್ರೀ.ಜೆ. ಅಬ್ಬಿಗೇರಿ ಲಹರಿ ನೀ ಸನಿಹಕೆ ಬಂದರೆ ಹೃದಯದ ಗತಿಯೇನು?

  1. ಮೇಡಂ, ನೀವು ತುಂಬಾ ಚೆನ್ನಾಗಿ ಬರಿತೀರಾ, ನಿಮ್ಮ ಕವನಗಳನ್ನ ಲೇಖನಗಳನ್ನು ಆಗಾಗ ನೋಡ್ತಾ ಇರ್ತೀನಿ ಹೃದಯಸ್ಪರ್ಶ ಲೇಖನಗಳು ಭಾವಸ್ಪುರಿಸುವ ಕವನಗಳು ತುಂಬಾ ಚೆನ್ನಾಗಿರುತ್ತೆ ನಿಮ್ಮ ಬರವಣಿಗೆ ಹೀಗೆ ಸಾಗಲಿ ಎಂದು ಹಾರೈಸುವೆ. ಆಗಾಗ ಬರೆಯುತ್ತಾ ಇರಿ ನಮ್ಮ ಹೃದಯ ತಣಿಸುವ ಲೇಖನಗಳು ಕವನಗಳು ಮೂಡಿಬರಲಿ

  2. ತಮ್ಮ ಭಾವದೊಡಲಿನ ಸ್ಪಂದನೆಗೆ ಶರಣು

Leave a Reply

Back To Top